Breaking News
Home / ರಾಜಕೀಯ / ಯುಗಾದಿ.. ಅರ್ಥ ಆಚರಣೆ ವಿಶ್ಲೇಷಣೆ

ಯುಗಾದಿ.. ಅರ್ಥ ಆಚರಣೆ ವಿಶ್ಲೇಷಣೆ

Spread the love

ಭಾರತೀಯ ಸಂಸ್ಕೃತಿಯೇ ಹಾಗೆ! ಜೀವನವನ್ನು, ಮನುಷ್ಯನನ್ನು, ಜೀವನಕ್ರಮವನ್ನು, ಜೀವನಕ್ಕೆ ಆಶ್ರಯ, ಪುಷ್ಟಿ, ತುಷ್ಟಿಗಳನ್ನು ನೀಡುವ ಭೂಮಿ, ನೀರು, ಆಕಾಶ, ಗಾಳಿಗಳನ್ನು, ಇದಕ್ಕೆ ಆಧಾರವಾಗಿ ನಿಲ್ಲುವ ದೇಶ, ಮಾತಾಪಿತೃಗಳು, ಗುರುಹಿರಿಯರು, ರಾಜ, ಪಶುಪಕ್ಷಿಗಳನ್ನು ದೈವೀಕರಿಸಿ ಉದಾತ್ತೀಕರಿಸಿ ಇವುಗಳೆಡೆಗೆ ಉತ್ಸಾಹ, ಹುಮ್ಮಸ್ಸುಗಳು ಪ್ರತಿನಿತ್ಯವೂ ಧುಮ್ಮಿಕ್ಕುವಂತೆ ಇದು ಮಾಡುವುದರ ಪರಿಯನ್ನು ನೋಡಿಯೇ ತಿಳಿಯಬೇಕು.

ವೇದಗಳಲ್ಲಿ ಬರುವ ಈ ಜೀವನೋತ್ಸಾಹ ಮತ್ತೆಲ್ಲಿ ಕಾಣಲಾದೀತು!

ಪಶ್ಯೇಮ ಶರದಃ ಶತಂ| ಜೀವೇಮ ಶರದಃ ಶತಂ |

ಶೃಣುಯಾಮ ಶರದಃ ಶತಂ| ಪ್ರಬ್ರವಾಮ ಶರದಃ ಶತಂ|

‘ನೂರು ಶರತ್ಕಾಲಗಳನ್ನು ನೋಡೋಣ; ನೂರು ಶರತ್ಕಾಲಗಳಷ್ಟು ಗಾನಸುಧೆಯನ್ನು ಕೇಳೋಣ; ನೂರು ಶರತ್ಕಾಲಗಳು ಸುಖವಾಗಿ ಬದುಕೋಣ’ ಎನ್ನುವ ಜೀವನೋತ್ಸಾಹದ ಬುಗ್ಗೆಯನ್ನು ನೋಡಿಯೇ ಆನಂದಿಸಬೇಕು. ಪ್ರಕೃತಿ ಮಾತೆ ಮಸುಕಾದ ತನ್ನ ವಸನ ವಸ್ತ್ರಗಳನ್ನು ಬದಲಿಸಿ ನಾವೀನ್ಯತೆಯತ್ತ ನಿತ್ಯ ನೂತನತೆಯತ್ತ ಗಮನವೀಯುತ್ತಿದ್ದಾಳೇನೋ ಎಂಬಂತೆ ಹೊಸತಾರುಣ್ಯ, ಸಂಭ್ರಮವನ್ನು ಎಲ್ಲೆಡೆ ಚೆಲ್ಲುವ ಈ ಕಾಲವನ್ನು ಭಾರತೀಯ ಸಂಸ್ಕೃತಿ ಹೊಸ ವರ್ಷದತ್ತ ಮನುಷ್ಯನನ್ನು ಕರಬೀಸಿ ಕರೆಯಲು ಆರಿಸಿಕೊಂಡಿದ್ದು ಅದರ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿ.

ಉಗಾದಿ ಅಥವಾ ಯುಗಾದಿಯ ಸಂದೇಶವೇ ಹೊಸಹುರುಪು ಹೊಸಕನಸುಗಳಿಂದ ಜೀವನಕ್ಕೆ ಚಾಲಕಶಕ್ತಿಯನ್ನು ಒದಗಿಸುವುದು. ವರಕವಿ ಬೇಂದ್ರೆಯವರು ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’ ಎಂದು ಹೇಳಿದ್ದು ಈ ಅರ್ಥದಲ್ಲೇ.

ಪ್ರತಿನಿತ್ಯವೂ ಮನುಷ್ಯ ಹೊಸ ಜನ್ಮವನ್ನು ಪಡೆದುಕೊಳ್ಳುತ್ತಿರಬೇಕು. ಹಿಂದೆ ಗತಿಸಿದ ಹಿನ್ನಡೆಗಳನ್ನು ಮರೆತು ಮುನ್ನಡೆಯುವ, ಭವ್ಯ ಭವಿಷ್ಯದ ಕನಸುಗಳನ್ನು ಕಾಣುತ್ತಲೇ ಇರಬೇಕು. ಆ ನಿಟ್ಟಿನಲ್ಲಿ ಸಿಂಹ ಪರಾಕ್ರಮದಿಂದ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು. ಈ ಗುಣವನ್ನು ಸನಾತನ ಧರ್ಮ ‘ಧೃತಿ’ ಎಂದು ಕರೆಯುತ್ತದೆ ಮತ್ತು ಧರ್ಮದ ಮೊದಲ ಲಕ್ಷಣವೇ ಇದು ಎನ್ನುತ್ತದೆ.

 

ಪುರುಷ ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ. ಹಾಗೆಯೇ ಅಬ್ರಹಾಂ ಲಿಂಕನ್. ಇಪ್ಪತ್ತೆರಡನೆಯ ವಯಸ್ಸಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಲಿಂಕನ್ ಯಶಸ್ಸಿನ ಮೊದಲ ರುಚಿಯನ್ನು ಕಂಡಿದ್ದು ಐವತ್ತೆರಡನೇ ವಯಸ್ಸಿನಲ್ಲಿ. ಮೂವತ್ತು ವರ್ಷಗಳ ಕಾಲ ಯಶಸ್ಸಿನ ಮಿಣುಕು ಹುಳವೂ ಅವರ ಹತ್ತಿರ ಸುಳಿಯಲಿಲ್ಲ. ಇಂಥಲ್ಲಿ ಸಹಾಯಕ್ಕೆ ಬರುವುದು ನಮ್ಮ Mindset ಅಥವಾ ಮನಸ್ಥಿತಿ ಮಾತ್ರ. ವಸಿಷ್ಠರು ‘ಯೋಗವಾಸಿಷ್ಠದಲ್ಲಿ’ ಈ ಮನಸ್ಥಿತಿಗೆ ಬೇಕಾದ ಅದ್ಭುತ ಮಾರ್ಗದರ್ಶಕ ಸೂತ್ರವನ್ನು ನಮ್ಮ ಮುಂದಿಡುತ್ತಾರೆ.

ಗತಶೋಕಂ ನ ಕುರ್ವೀತ ಭವಿಷ್ಯಂ ನೈವ ಚಿಂತಯೇತ್ |

ವರ್ತಮಾನೇಷು ಕಾರ್ಯುಷು ವರ್ತಯಂತಿ ವಿಚಕ್ಷಣಾಃ ||

‘ಹಿಂದೆ ಗತಿಸಿದ ಹಿನ್ನಡೆಗಳನ್ನು ಭವಿಷ್ಯ ಏನಾಗುವುದೋ ಎಂಬ ಚಿಂತೆಯನ್ನು ತಲೆಯೊಳಗೆ ಎಂದೂ ಬಿಟ್ಟುಕೊಳ್ಳಬೇಡ. ಸತ್ತ ಭೂತಕಾಲವನ್ನು ಹೂತುಬಿಡು’. Burry the dead past ಎಂದರೆ ಇದೇ. ಭೂತಕಾಲದ ತಪ್ಪುಗಳೇ ವರ್ತಮಾನ ಕಾಲದ ತಪ್ಪುಗಳನ್ನು ತಡೆಯಬಲ್ಲ ಏಕಮೇವ ಸಾಧನ.

ಆಸ್ತಿಕನಿರಲಿ ನಾಸ್ತಿಕನಿರಲಿ ಪ್ರತಿಯೊಬ್ಬರ ಭವಿಷ್ಯವನ್ನು ನಿರ್ಧರಿಸುವ ಏಕಮೇವ ದೇವರು ಅವರವರ Mindset. ಭಗವಂತ ಕೂಡ ನಮಗೆ ಕೃಪೆ ಮಾಡುವುದು ‘ಸಮ್ಯಕ್ ಮನಸ್ಥಿತಿ’ (Right Mindset) ಕೊಡುವುದರ ಮೂಲಕವೇ. ಸ್ವಯಂ ಕೃಷ್ಣನೇ ಇದನ್ನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಈ ಮನಸ್ಥಿತಿಯಾದರೊ ಪ್ರತಿನಿತ್ಯವೂ ಒಂದು ಹೊಸ ಜನ್ಮ ಬಂದವನಂತೆ ಬೆಳಗ್ಗೆ ಎದ್ದ ತಕ್ಷಣ ಉಲ್ಲಸಿತಮನಸ್ಸಿನವನಾಗಿ ಇಂದಿನ ದಿನ ನನ್ನ ಜೀವನದಲ್ಲೇ ಅತ್ಯಂತ ಸ್ಮರಣೀಯ ಆಗಲಿದೆ ಎಂಬ ಭಾವದೊಂದಿಗೆ ಹೊಸದಾಗಿ ಬಾಲಸಹಜ ಹುರುಪಿನೊಂದಿಗೆ ದಿನಚರಿ ಪ್ರಾರಂಭಿಸಿದಾಗ ನಿಜಕ್ಕೂ ಆ ದಿನ ಸ್ಮರಣೀಯವೇ ಆಗಿರುತ್ತದೆ. ಏಕೆಂದರೆ ಹುರುಪು-ಉತ್ಸಾಹ ನವೀಕರಣಗೊಂಡಿರುತ್ತದೆ.

ಮಹಾಭಾರತದ ಯಕ್ಷಪ್ರಶ್ನೆ ಅಧ್ಯಾಯದಲ್ಲಿ ಯಕ್ಷನು ಧರ್ಮರಾಜನಿಗೆ ಕೇಳುತ್ತಾನೆ- ‘ಸಂಪತ್ತುಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠವಾದ ಸಂಪತ್ತು ಯಾವುದು?’ ಧರ್ಮರಾಜ ಸ್ಪಷ್ಟವಾಗಿ ಉತ್ತರಿಸುತ್ತಾನೆ: ‘ಉತ್ಸಾಹ ಅಥವಾ ಹುರುಪು ಅತ್ಯಂತ ಶ್ರೇಷ್ಠ ಸಂಪತ್ತು’ಎಂದು. ಇಂಥ ಪ್ರಶ್ನೆಗಳು ಮತ್ತು ಉತ್ತರಗಳು ಒಂದು ಹತ್ತಿಪ್ಪತ್ತು ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ತಿಳಿದರೆ ಮತ್ತಾವ ವ್ಯಕ್ತಿತ್ವ ವಿಕಸನ ತರಬೇತಿಯೂ ಬೇಕಾಗಿಲ್ಲ.

 

ಈ ಉತ್ಸಾಹ ಅಥವಾ ಹುರುಪು ಮಾಸದಂತೆ ನೋಡಿಕೊಳ್ಳುವುದಕ್ಕೆ ಏನು ಮಾಡಬೇಕು? ಅದಕ್ಕೆ ಜೀವನದ ಬಗ್ಗೆ ಸಕಾರಾತ್ಮಕ ಧೋರಣೆ ಇರಬೇಕು ಎನ್ನುವುದನ್ನು ಬಿಟ್ಟರೆ ಬೇರೆ ಉತ್ತರವಿಲ್ಲ. ಎಪ್ಪತೆôದು, ಎಂಬತ್ತು, ತೊಂಬತ್ತು ವರ್ಷ ವಯಸ್ಸಾದ ಎಷ್ಟೋ ಹಿರಿಯರು ನನ್ನ ಸಂಪರ್ಕದಲ್ಲಿದ್ದಾರೆ. ಅತ್ಯಂತ ಆರೋಗ್ಯವಂತರು. ಅವರು ಯಾವ ವ್ಯಾಯಾಮವನ್ನೂ ಮಾಡುವುದಿಲ್ಲ. ತಿಂದಿದ್ದೆಲ್ಲ ಜೀರ್ಣವಾಗುತ್ತದೆ. ರಾತ್ರಿ ಕಣ್ಣು ತುಂಬಾ ನಿದ್ದೆ ಬರುತ್ತದೆ. ಎಂಬತ್ತೊಂಬತ್ತು ವರ್ಷ ವಯಸ್ಸಿನ ವ್ಯಕ್ತಿಯ ಬಳಿ ಒಮ್ಮೆ’ಈ ವಯಸ್ಸಿನಲ್ಲೂ ಎಷ್ಟು ಚೆನ್ನಾಗಿದೆ ನಿಮ್ಮ ಆರೋಗ್ಯ’ ಎಂದಾಗ ಅವರು ಉತ್ತರಿಸಿದ್ದು ‘ಯಾಕೆ ಸ್ವಾಮೀಜಿ, I am not even ninety’ ಎಂದು. ಅದಕ್ಕೆ ಕಾರಣ ಅವರ ಸಕಾರಾತ್ಮಕ ಮನೋಭಾವ. ಈ ಧೋರಣೆಯ ಕೆಲವು ಲಕ್ಷಣಗಳು: ಯಾರಿಗೂ ಕೇಡು ಬಯಸಬಾರದು; ಯಾರ ದೋಷಗಳನ್ನೂ ಹುಡುಕಿ ಎತ್ತಿಯಾಡಬಾರದು; ಸಾಧ್ಯವಾದರೆ ಅವರ ಒಳಿತುಗಳನ್ನೇ ಪ್ರಸ್ತಾಪಿಸುತ್ತಿರಬೇಕು. ಯಾವ ವಿಷಮ ಸಂದರ್ಭದಲ್ಲೂ ಧರ್ಮಮಾರ್ಗದಿಂದ ವಿಚಲಿತರಾಗದಿರುವುದು ಮಾತ್ರ ಸಾಧನೆಯೇ ಹೊರತು ವಸ್ತುರೂಪದ ಗಳಿಕೆಯಾಗಲಿ ಕುಟಿಲ ಮಾರ್ಗದಿಂದ ಸಾಧಿಸಿದ ಅಧಿಕಾರ ಕೀರ್ತಿಗಳಾಗಲಿ ಸಿಹಿಯಾದ ವಿಷವೇ ಹೊರತು ಸಾಧನೆಯಲ್ಲ. ಸಾಧ್ಯವಾದರೆ ಒಂದು ನಿರ್ದಿಷ್ಟ ದಿನಚರಿಯನ್ನು, ಆಹಾರ, ವಿಹಾರಗಳಲ್ಲಿ ಸಾತ್ವಿಕ ಮಾರ್ಗವನ್ನು ಅನುಸರಿಸಬೇಕು. ನ್ಯಾಯವಾಗಿ ನಾವು ಅನುಭವಿಸಬಹುದಾದ ಯಾವ ಸುಖವನ್ನೂ ತ್ಯಾಗ ಮಾಡಬೇಕಾಗಿಲ್ಲ. ಭಗವದ್ಗೀತೆಯಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳಿದ್ದಾನೆ-‘ಧರ್ಮಸಮ್ಮತವಾದ ಕಾಮವೂ ನಾನೇ ಆಗಿದ್ದೇನೆ’ ‘ಧರ್ವ ವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ’ ಎಂದು. ‘ಆಸೆಯೇ ದುಃಖಕ್ಕೆ ಕಾರಣ’ ಎಂಬ ವಾಕ್ಯ ಹಿಂದೂಧರ್ಮಕ್ಕೆ ಸೇರಿದ್ದಲ್ಲ. ಧರ್ಮಸಮ್ಮತವಾದ ಆಸೆಗಳನ್ನು ಧರ್ಮಮಾರ್ಗದಲ್ಲಿ ಈಡೇರಿಸಿಕೋ ಎಂಬ ಪ್ರಾಯೋಗಿಕವಾದ ಉಪದೇಶವನ್ನು ಅದು ಕೊಟ್ಟಿರುವುದು.

 

ಜೀವನದಲ್ಲಿ ಬರುವ ಸಿಹಿ-ಕಹಿಗಳೆರಡನ್ನೂ ಸಮಾನವಾಗಿಯೇ ಒಪ್ಪಿಕೊಳ್ಳಬೇಕು ಎನ್ನುವುದನ್ನು ಸಾಂಕೇತಿಕವಾಗಿ ಸೂಚಿಸುವುದೇ ಯುಗಾದಿಯ ಸಂದೇಶ. ಬೇವು ಬೆಲ್ಲಗಳನ್ನು ಅಂದು ತಿನ್ನುವ ಉದ್ದೇಶವೇ ಅದು. ಇಲ್ಲಿ ಒಂದು ಪ್ರಶ್ನೆ ಏಳಬಹುದು. ಬೇವು ಯಾಕಾದರೂ ಜೀವನದಲ್ಲಿ ಬರಬೇಕು? ಕೇವಲ ಬೆಲ್ಲವೇ ಏಕಿರಬಾರದು. ಇದಕ್ಕೆ ಉತ್ತರ- ಬೇವು ಬೇಡ ಎಂದರೆ ಬೆಲ್ಲವನ್ನೂ ಬಿಡಬೇಕು. ಇಲ್ಲಿರುವುದು ಎರಡೇ ಮಾರ್ಗ. ಒಪ್ಪಿಕೊಂಡಲ್ಲಿ ಎರಡನ್ನೂ ಒಪ್ಪಿಕೊಳ್ಳಬೇಕು ಇಲ್ಲವೇ ಎರಡನ್ನೂ ಬಿಡಬೇಕು. ಸನಾತನ ಧರ್ಮ ಇದನ್ನೆಲ್ಲ ಆಮೂಲಾಗ್ರವಾಗಿ ಅಧ್ಯಯನ ಮಾಡಿದೆ. ಜೇನು ಬೇಕು ಜೇನುಹುಳ ಬೇಡ ಎಂದರೆ ಆಗುವುದಿಲ್ಲ; ಗುಲಾಬಿ ಬೇಕು ಮುಳ್ಳು ಬೇಡ; ಜೀವನದಲ್ಲಿ ಯೌವನವೇ ಇರಬೇಕು ವೃದ್ಧಾಪ್ಯ ಬೇಡ- ಇಂಥ ಮಾತುಗಳು ಅರ್ಥಹೀನ; ಅಪ್ರಸ್ತುತ. ಸೃಷ್ಟಿ ಇರುವುದೇ ಒಳಿತು ಕೆಡುಕುಗಳ ಮಿಶ್ರಣವಾಗಿ. ವೇದಗಳು ಇದನ್ನು ಪ್ರವೃತ್ತಿ ಜೀವನ ಎಂದು ಕರೆಯುತ್ತವೆ. ಎರಡನ್ನೂ ಬಿಟ್ಟರೆ ಅದು ನಿವೃತ್ತಿ ಜೀವನ. ಒಪ್ಪಿಕೊಂಡ ಜೀವನ ಹಾಗೂ ಬಿಟ್ಟ ಜೀವನಗಳನ್ನು ಆದರ್ಶಮಯ ಮಾಡಿಕೊಳ್ಳುವುದು ಹೇಗೆ ಎಂಬ ವಿಶ್ಲೇಷಣೆ ವಿವರಣೆ ವೇದಗಳಲ್ಲಿದೆ. ಶಂಕರಾಚಾರ್ಯರು ಭಾಷ್ಯದಲ್ಲಿ ‘ದ್ವಿವಿಧೋಹಿ ವೇದೋಕ್ತ ಧರ್ಮಃ ಪ್ರವೃತ್ತಿ ಲಕ್ಷಣೋ ನಿವೃತ್ತಿ ಲಕ್ಷಣಶ್ಚ’ ಎಂದು ತಿಳಿಸುತ್ತಾರೆ. ಗೃಹಸ್ಥರು ಪ್ರವೃತ್ತಿಯನ್ನು, ಸಂನ್ಯಾಸಿಗಳು ನಿವೃತ್ತಿ ಮಾರ್ಗವನ್ನು ಅನುಸರಿಸುತ್ತಾರೆ. ಆಗ ಮಾತ್ರವೇ ಬಾಹ್ಯ ಪ್ರಪಂಚದ ಭವ್ಯತೆ ಮತ್ತು ಆಂತರಿಕ ಪ್ರಪಂಚದ ದಿವ್ಯತೆಗಳ ಅಭಿವ್ಯಕ್ತಿಯಾಗುವುದು. ಇಂಥ ಸಂದೇಶಗಳನ್ನೆಲ್ಲ ಜಗತ್ತಿಗೆ ಅನಾದಿಕಾಲದಿಂದ ಸಾರುತ್ತಿರುವ ಏಕಮೇವ ಸಂಸ್ಕೃತಿ ಸನಾತನ ಅಥವಾ ಭಾರತೀಯ ಸಂಸ್ಕೃತಿ. ಆದ್ದರಿಂದಲೇ ಇಷ್ಟೆಲ್ಲ ಕಷ್ಟಕೋಟಲೆಗಳ ನಡುವೆಯೂ ‘ವಿಧಾತ’ ಈ ಮಹಾನ್ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾನೆ. ನಾವೆದುರಿಸಿದ ವಿಷಮ ಪರಿಸ್ಥಿತಿಗಳಲ್ಲಿನ ಒಂದು ಅಂಶವನ್ನಾದರೂ ಎದುರಿಸಲಾಗದೆ ಕೊಚ್ಚಿಹೋದ ಎಷ್ಟೋ ನಾಗರಿಕತೆಗಳು ಇವೆ. ಆದರೆ ನಾವಿನ್ನೂ ಉಳಿದಿದ್ದೇವೆ, ಅಷ್ಟೇ ಅಲ್ಲ, ಮತ್ತೆ ತಲೆಯೆತ್ತಿ ನಿಲ್ಲಲು ಸಜ್ಜಾಗುತ್ತಿದ್ದೇವೆ. ಇದೇ ಸನಾತನ ಸಂಸ್ಕೃತಿ; ಅದೇ ನಮ್ಮ ಶಕ್ತಿ!

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ