Home / ರಾಜಕೀಯ / ಬಿಜೆಪಿಯಿಂದ ಹಿಂಸಾತ್ಮಕ ರಾಜಕಾರಣ: ಸುರ್ಜೇವಾಲಾ ಆರೋಪ

ಬಿಜೆಪಿಯಿಂದ ಹಿಂಸಾತ್ಮಕ ರಾಜಕಾರಣ: ಸುರ್ಜೇವಾಲಾ ಆರೋಪ

Spread the love

ಬೆಳಗಾವಿ: ‘ಬಿಜೆಪಿ ನಾಯಕರು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮೂಲಕ ಕಾಂಗ್ರೆಸ್‌ ನಾಯಕರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸೋಲಿನ ಭಯದಿಂದ ಹತಾಶರಾಗಿ ಹಿಂಸಾತ್ಮಕ ರಾಜಕಾರಣಕ್ಕೆ ಇಳಿದಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಪಾದಿಸಿದರು.

 

ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಬೆಳಗಾವಿ ಗ್ರಾಮೀಣ ಹಾಗೂ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ ಪಕ್ಷದ ‘ಗೃಹಜ್ಯೋತಿ’ ಮತ್ತು ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಗಳ ಪ್ರಮಾಣಪತ್ರ ವಿತರಣಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ನಲ್ಲಿ ಹಲವು ನಾಯಕರು ಹಿಂಸಾತ್ಮಕ ರಾಜಕಾರಣಕ್ಕೆ ಬಲಿಯಾಗಿದ್ದಾರೆ. ಆದರೂ, ನಮ್ಮ ಪಕ್ಷ ಬೆಳೆಯುತ್ತಲೇ ಇದೆ. ನಾವೆಲ್ಲ ನಾಯಕರು ಬಹಿರಂಗವಾಗಿಯೇ ಬರುತ್ತೇವೆ. ಧೈರ್ಯವಿದ್ದರೆ ನಮ್ಮನ್ನು ಹತ್ಯೆ ಮಾಡಿ’ ಎಂದು ಸವಾಲು ಹಾಕಿದರು.

‘ಭ್ರಷ್ಟಾಚಾರದಲ್ಲಿ ಮುಳುಗಿದ ರಾಜ್ಯ ಸರ್ಕಾರ, ಜನರ ಕನಸುಗಳನ್ನೇ ಹತ್ಯೆ ಮಾಡುತ್ತಿದೆ. ಇಡೀ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇವರ ಕಮಿಷನ್‌ ದಂಧೆಯಿಂದ ಬೇಸತ್ತ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರವಾಗಿ ಒಂದೇ ಮಾತು ಆಡುತ್ತಿಲ್ಲ’ ಎಂದು ಎಂದು ಟೀಕಿಸಿದರು.

‘ನಾವು ಅಧಿಕಾರಕ್ಕೆ ಬಂದರೆ, ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸುತ್ತೇವೆ. ಅದಕ್ಕಾಗಿಯೇ ಈ ಯೋಜನೆಗಳ ಗ್ಯಾರಂಟಿ ಕಾರ್ಡ್‌ಗಳನ್ನು ನೀಡುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು ಇವುಗಳನ್ನು ಪ್ರತಿ ಬೂತ್‌ನಲ್ಲಿರುವ ಮನೆ-ಮನೆಗೆ ತಲುಪಿಸಬೇಕು’ ಎಂದರು

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ‘ಪ್ರಧಾನಿ ಹಾಗೂ ಮುಖ್ಯಮಂತ್ರಿ ಕೇವಲ ಸುಳ್ಳನ್ನೇ ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ, ನಾವು ಎಂದಿಗೂ ನುಡಿದಂತೆ ನಡೆದಿದ್ದೇವೆ. ಈಗ ಜನರಿಗೆ ನೀಡಿದ್ದ ಭರವಸೆಗಳನ್ನು ಶೇ 100ರಷ್ಟು ಈಡೇರಿಸುತ್ತೇವೆ’ ಎಂದು ಹೇಳಿದರು.

‘ಕಾಂಗ್ರೆಸ್‌ನಿಂದ ಇನ್ನೂ ಕೆಲವು ಯೋಜನೆಗಳನ್ನು ಘೋಷಿಸುವುದು ಬಾಕಿ ಇದೆ. ಕೆಲ ದಿನಗಳಲ್ಲಿ ಪ್ರಾಂತವಾರು ಹಾಗೂ ಜಿಲ್ಲಾವಾರು ಯೋಜನೆಗಳನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸುತ್ತೇವೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ‘ಮಾತೆತ್ತಿದರೆ ಸುಳ್ಳನ್ನೇ ಹೇಳುವ ನೀವು ಜನರ ಬಳಿ ಹೋಗಿ, ಯಾವ ನೈತಿಕತೆ ಮೇಲೆ ಮತ ಕೇಳುತ್ತೀರಿ?’ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿರುವ ಇವೆರಡೂ ಯೋಜನೆಗಳಿಂದ ಕುಟುಂಬ ನಿರ್ವಹಣೆಗಾಗಿ ಜನರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ