Breaking News
Home / ಹುಬ್ಬಳ್ಳಿ / ಧಾರವಾಡ ರಂಗಾಯಣದಿಂದ ಕಿತ್ತೂರು ಚನ್ನಮ್ಮ ನಾಟಕ: ವೇದಿಕೆ ಮೇಲೆ ಆನೆ, ಒಂಟೆ, ಕುದುರೆ

ಧಾರವಾಡ ರಂಗಾಯಣದಿಂದ ಕಿತ್ತೂರು ಚನ್ನಮ್ಮ ನಾಟಕ: ವೇದಿಕೆ ಮೇಲೆ ಆನೆ, ಒಂಟೆ, ಕುದುರೆ

Spread the love

ಧಾರವಾಡ: ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ ವೀರ ರಾಣಿ ಕಿತ್ತೂರು ಚನ್ನಮ್ಮ ಅವರ ಜೀವನ ಆಧಾರಿತ ನಾಟಕವನ್ನು ಧಾರವಾಡ ರಂಗಾಯಣ ಸಿದ್ಧಪಡಿಸಿದ್ದು, ಡಿ.24ರಿಂದ ಪ್ರದರ್ಶನಗೊಳ್ಳುತ್ತಿದೆ.

ಸುಮಾರು ಮೂರೂವರೆ ತಾಸು ಸುದೀರ್ಘ ನಾಟಕದಲ್ಲಿ ಸುಮಾರು 150 ಕಲಾವಿದರು ನಟಿಸುತ್ತಿರುವುದು ಹಾಗೂ ಆನೆ, ಒಂಟೆ, ಕುದುರೆ, ಹಸುಗಳ ಬಳಕೆ ಮೂಲಕ ಬೃಹತ್ ರಂಗ ಸಜ್ಜಿಕೆಯ ನಾಟಕ ಈಗಾಗಲೇ ಸಾಕಷ್ಟು ಚರ್ಚೆಯಲ್ಲಿದೆ.

ರಂಗ ತಾಲೀಮು ಭರದಿಂದ ನಡೆಯುತ್ತಿದ್ದು 250ಕ್ಕೂ ಹೆಚ್ಚು ಜನ ಇದರಲ್ಲಿ ಭಾಗಿಯಾಗಿದ್ದಾರೆ.

ಇದಕ್ಕಾಗಿ ಕರ್ನಾಟಕ ಕಲಾ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭಗೊಂಡಿದೆ. ಡಿ.24 ಹಾಗೂ 25ರಂದು ಪ್ರದರ್ಶನಗೊಳ್ಳಲಿರುವ ಈ ನಾಟಕವನ್ನು 15 ಸಾವಿರ ಜನರ ವೀಕ್ಷಣೆಗೆ ಅವಕಾಶ ನೀಡುವ ಸಿದ್ಧತೆ ನಡೆದಿದೆ.

ಆನೆ, ಕುದುರೆ, ಒಂಟೆ, ಹತ್ತಾರು ಸೈನಿಕರು ಯುದ್ಧ ಮಾಡುವ ನೈಜ ಸನ್ನಿವೇಶವನ್ನು ತೋರಿಸುವ ಮೂಲಕ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ನೈಜ ದೃಶ್ಯಗಳನ್ನು ವೇದಿಕೆ ಮೇಲೆ ತರಲು ನಿರ್ದೇಶಕ ರಮೇಶ ಪರವಿನಾಯ್ಕರ್ ಅವರ ತಂಡ ಹಗಲಿರುಳು ದುಡಿಯುತ್ತಿದೆ.

ನಾಟಕ ಕುರಿತು ಮಾಹಿತಿ ನೀಡಿದ ರಮೇಶ, ‘ಚನ್ನಮ್ಮ ಕುರಿತ ಸುಳ್ಳದ ದೇಸಾರ ಅವರ ವೃತ್ತಿ ರಂಗಭೂಮಿಯ ನಾಟಕ ಪ್ರತಿ, ಹೆಳವರ ದಾಖಲೆ, ಸಂಗೊಳ್ಳಿ, ಕಿತ್ತೂರು, ತುರಮರಿ ಹೀಗೆ ಹಲವು ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆ, ಜಾನಪದ ಇತಿಹಾಸ, ಲಂಡನ್‌ನಲ್ಲಿರುವ ಗೆಝೆಟಿಯರ್‌ ಹೀಗೆ ಹಲವು ದಾಖಲೆಗಳನ್ನು ಪರಿಶೀಲಿಸಿ ನಾಟಕವನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ರಚನೆ, ಪರಿಷ್ಕರಣೆ ಮತ್ತು ಸಂಶೋಧನೆ ಎಂಬ ಮೂರು ತಂಡಗಳನ್ನು ರಚಿಸಿ, ಅತ್ಯಂತ ಮುತುವರ್ಜಿಯಿಂದ ನಾಟಕದ ರಚಿಸಲಾಗಿದೆ’ ಎಂದರು.

‘ಸುಮಾರು ಐದು ಗಂಟೆಯ ಈ ನಾಟಕವನ್ನು ಪರಿಷ್ಕರಣೆ ನಂತರ ಮೂರೂವರೆ ಗಂಟೆಗೆ ಇಳಿಸಲಾಗಿದೆ. ವೇದಿಕೆ ಮೇಲೆ 10 ಕುದುರೆ, ಎರಡು ಒಂಟೆ, ಆನೆ, ಹಸುಗಳನ್ನು ತಂದು ನೈಜ ದೃಶ್ಯವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇಂಥದ್ದೊಂದು ಪ್ರಯತ್ನ ಕನ್ನಡ ರಂಗಭೂಮಿ ಇತಿಹಾಸದಲ್ಲೇ ಮೊದಲು. ಚನ್ನಮ್ಮರ ಯುದ್ಧ, ರಾಯಣ್ಣನ ಹೋರಾಟ, ಜತೆಗೆ ಹಲವು ಸಮುದಾಯಗಳ ವೀರ ಯೋಧರನ್ನು ಈ ನಾಟಕದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಪರವಿನಾಯ್ಕರ್ ವಿವರಿಸಿದರು.

‘ಧಾರವಾಡದಲ್ಲಿ ಎರಡು ಪ್ರದರ್ಶನದ ನಂತರ ಕಲಬುರಗಿಯಲ್ಲಿ ಐದು ಪ್ರದರ್ಶನ, ಬೆಳಗಾವಿಯಲ್ಲಿ ಮೂರು ಪ್ರದರ್ಶನಗಳನ್ನು ಆರಂಭಿಕವಾಗಿ ಕಾಯ್ದಿರಿಸಲಾಗಿದೆ. ನಾಟಕ ವೀಕ್ಷಣೆಗೆ ₹250ರ ಗೌರವ ಪಾಸ್‌ ಇಡಲಾಗಿದೆ. ವಿದ್ಯಾರ್ಥಿಗಳಿಗಾಗಿ ಉಚಿತ ವೀಕ್ಷಣೆಗೆ ಎಲ್‌ಇಡಿ ಪರದೆಗಳನ್ನು ಹಾಕಿಸಲಾಗುತ್ತಿದೆ. ಆ ಮೂಲಕ ದೇಶಕ್ಕಾಗಿ ಹೋರಾಡಿದ ಕಿತ್ತೂರು ಸಂಸ್ಥಾನದ ಇತಿಹಾಸವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ತಿಳಿಸಿದರು.

ರಮೇಶ ಪರವಿನಾಯ್ಕರ್ ಅವರೊಂದಿಗೆ ಮೂವರು ಸಹಾಯಕ ನಿರ್ದೇಶಕರು ಈ ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಅರುಣ ಭಟ್ ಹಾಗೂ ರಾಘವ ಕಮ್ಮಾರ ಅವರ ಸಂಗೀತವಿದೆ. ವಿಶ್ವನಾಥ ಮರಡಿ ಸೆಟ್‌ ಸಿದ್ಧಪಡಿಸಿದ್ದಾರೆ. ಮಹೇಶ ಆಚಾರ್ಯ ಅವರು ರಂಗಪರಿಕರಗಳನ್ನು ಸಿದ್ಧಗೊಳಿಸಿದ್ದಾರೆ.


Spread the love

About Laxminews 24x7

Check Also

‘ಬರ ಪರಿಹಾರ ನೀಡದೇ ಕಾಂಗ್ರೆಸ್ ದಿವಾಳಿ’

Spread the loveಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತು ಹೇಳಿಲ್ಲ. ಕೇಂದ್ರ ಸರ್ಕಾರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ