Home / ರಾಜಕೀಯ / ಬದುಕಿನ ಯಾನ ಮುಗಿಸಿದ ಹಿರಿಯ ನಟ

ಬದುಕಿನ ಯಾನ ಮುಗಿಸಿದ ಹಿರಿಯ ನಟ

Spread the love

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಟಿ.ಎಸ್‌. ಲೋಹಿತಾಶ್ವ(80) ಅವರು ಮಂಗಳವಾರ ಮಧ್ಯಾಹ್ನ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಸಕ್ಕರೆ ಕಾಯಿಲೆ ಹಾಗು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರಿಗೆ ನಾಲ್ಕೈದು ತಿಂಗಳ ಹಿಂದೆ ಎರಡು ಬಾರಿ ಮೂತ್ರನಾಳದ ಸೋಂಕು ಕಾಣಿಸಿಕೊಂಡಿತ್ತು.

ಈ ನಡುವೆ ಅನಾರೋಗ್ಯಕ್ಕೀಡಾದ ಅವರನ್ನು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಾಗರ್‌ ಆಸ್ಪತ್ರೆಗೆ ಕಳೆದ ಅ.4ರಂದು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲೇ ಅವರಿಗೆ ಹೃದಯಾಘಾತವೂ ಆಗಿತ್ತು. ಇದರಿಂದಾಗಿ ಮಿದುಳಿಗೂ ಹಾನಿಯಾಗಿತ್ತು. ನಂತರದಲ್ಲಿ ಅವರನ್ನು ಐಸಿಯುಗೆ ದಾಖಲಿಸಿ, ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ದಿನ ಕಳೆದಂತೆ ಅಂಗಾಂಗಳ ವೈಫಲ್ಯದಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.

‘ಕುಮಾರಸ್ವಾಮಿ ಬಡಾವಣೆಯಲ್ಲಿರುವ ಮನೆಯಲ್ಲಿ ಬುಧವಾರ ಬೆಳಗ್ಗೆ 11ರವರೆಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರದಲ್ಲಿ ತಂದೆಯ ಹುಟ್ಟೂರು ತುಮಕೂರು ಸಮೀಪದ ತೊಂಡಗೆರೆಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಅವರ ಪುತ್ರ, ನಟ ಶರತ್‌ ಲೋಹಿತಾಶ್ವ ತಿಳಿಸಿದ್ದಾರೆ.

ಲೋಹಿತಾಶ್ವ ಅವರು ರಂಗಭೂಮಿಯ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟವರು. ಮೊದಮೊದಲು ಕಲಾತ್ಮಕ ಚಿತ್ರಗಳಲ್ಲಿ ಬಣ್ಣಹಚ್ಚುತ್ತಿದ್ದ ಅವರಿಗೆ ಕಮರ್ಷಿಯಲ್‌ ಬ್ರೇಕ್‌ ನೀಡಿದ್ದು ಶಂಕರ್‌ನಾಗ್‌ ಅವರ ‘ಗೀತಾ’ ಸಿನಿಮಾ. ‘ಕತ್ತಲೆ ದಾರಿ ದೂರ’ ನಾಟಕದಲ್ಲಿ ಅವರ ವೈದ್ಯನ ಪಾತ್ರವನ್ನು ನೋಡಿದ್ದ ಶಂಕರ್‌ನಾಗ್‌ ಅವರು ಗೀತಾ ಸಿನಿಮಾದಲ್ಲಿ ವೈದ್ಯರ ಪಾತ್ರಕ್ಕೆ ಆಯ್ಕೆ ಮಾಡಿದರು. ನಂತರ ‘ಧರ್ಮ ದಾರಿ ತಪ್ಪಿತು’, ‘ಗಜೇಂದ್ರ’, ‘ಸಂಭವಾಮಿ ಯುಗೇಯುಗೇ’, ‘ಸಾಂಗ್ಲಿಯಾನ’ ಹೀಗೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಿನ ಸಿನಿಮಾದಲ್ಲಿ ‘ಮುಖ್ಯಮಂತ್ರಿ’ ಪಾತ್ರಕ್ಕೆ ಬಣ್ಣಹಚ್ಚಿದ ಖ್ಯಾತಿ ಲೋಹಿತಾಶ್ವ ಅವರದ್ದು.

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದು, 33 ವರ್ಷ ಇಂಗ್ಲಿಷ್‌ ಪ್ರಾಧ್ಯಾಪಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಚಿತ್ರರಂಗದಲ್ಲಿ ತಮ್ಮ ಗಂಭೀರ ಧ್ವನಿಗೆ ಹೆಸರಾದವರು.

‘ಮುಖ್ಯಮಂತ್ರಿ’ಯಾಗಬೇಕಿದ್ದ ಲೋಹಿತಾಶ್ವ!

ಲೋಹಿತಾಶ್ವ ಅವರು ನಾಟಕಕಾರ ರಣಜಿತ್‌ ಕಪೂರ್‌ ವಿರಚಿತ ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ‘ಮುಖ್ಯಮಂತ್ರಿ’ ನಾಟಕ ರಚಿಸಿದ್ದರು. ‘ಲೋಹಿತಾಶ್ವ ಅವರೇ ಮುಖ್ಯಮಂತ್ರಿ ಪಾತ್ರವನ್ನು ಮಾಡಬೇಕಿತ್ತು. ಆದರೆ ನಾಟಕದ ಮೊದಲ ಪ್ರದರ್ಶನದ ಸಂದರ್ಭದಲ್ಲೇ ಅವರಿಗೆ ಟೈಫಯ್ಡ್‌ ಬಂತು. ‘ನಾಟಕ ನಿಲ್ಲುವುದು ಬೇಡ. ಮುಖ್ಯಮಂತ್ರಿ ಪಾತ್ರವನ್ನು ಬೇರೆ ಯಾರಾದರೂ ಮಾಡಲಿ. ಚೇತರಿಸಿಕೊಂಡ ಬಳಿಕ ನಾನೇ ಮಾಡುವೆ’ ಎಂದು ಲೋಹಿತಾಶ್ವ ಅವರು ಹೇಳಿದ್ದರು ಎಂದು ನಟರಾದ ‘ಮುಖ್ಯಮಂತ್ರಿ’ ಚಂದ್ರು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ