Home / ರಾಜಕೀಯ / ಗಡಿ ಜನರಿಗಾಗಿ ಜೈ ಜೋಡಿಸಿ ನಡೆಯೋಣ: ಸಮನ್ವಯ ಸಭೆ ಫಲಪ್ರದ

ಗಡಿ ಜನರಿಗಾಗಿ ಜೈ ಜೋಡಿಸಿ ನಡೆಯೋಣ: ಸಮನ್ವಯ ಸಭೆ ಫಲಪ್ರದ

Spread the love

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಗಳಲ್ಲಿ ಸುಧಾರಣಾ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದ್ದು, ಇವುಗಳ ಅನುಷ್ಠಾನಕ್ಕೆ ಎರಡೂ ರಾಜ್ಯ ಸರ್ಕಾರಗಳಿಗೆ ರಾಜಭವನದ ಮೂಲಕ ಸೂಚನೆ ನೀಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

 

ಕರ್ನಾಟಕ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರ ನೇತೃತ್ವದಲ್ಲಿ ಕೊಲ್ಹಾಪುರದಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಹಲವು ಸಂಗತಿಗಳ ವಿನಿಮಯ ನಡೆಯಿತು. ಗಡಿ ಜನರ ಜೀವನ ಸುಧಾರಣೆ ಹಾಗೂ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಈ ಸಭೆ ಪೂರಕವಾಗಿದೆ ಎಂದೂ ರಾಜ್ಯಪಾಲರು ಸಹಮತ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಕೊಲ್ಹಾಪುರ ಜಿಲ್ಲಾಧಿಕಾರಿ, ‘2020ರ ಜೂನ್ 26ರಂದು ನಡೆದ ಅಂತರರಾಜ್ಯ ಸಭೆಯಲ್ಲಿ ನಿರ್ಧರಿಸಿದಂತೆ, ಕೃಷ್ಣಾ ನದಿಯಿಂದ ಉಂಟಾಗುವ ಪ್ರವಾಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಅಗತ್ಯವಾಗಿದೆ. ಆಲಮಟ್ಟಿ ಅಣೆಕಟ್ಟಿಯಿಂದ ಹೆಚ್ಚು ಪ್ರವಾಹ ಆಗದಂತೆ ನಿರ್ವಹಣೆ ಮಾಡಬೇಕಿದೆ’ ಎಂದರು.

ಸಾಂಗಲಿ ಜಿಲ್ಲಾಧಿಕಾರಿ ದಯಾನಿಧಿ ಮಾತನಾಡಿ, ‘2016-17ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಭೀಕರ ಬರ ಬಂದಾಗ ಮಹಾರಾಷ್ಟ್ರದಿಂದ 6.865 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿ ನೆರವಾಯಿತು. ಇಂಥ ನೆರವು ಎರಡೂ ರಾಜ್ಯಗಳ ಮಧ್ಯೆ ನೆರವೇರಬೇಕು’ ಎಂದರು.

ಸೊಲ್ಲಾಪುರದ ಹೆಚ್ಚುವರಿ ಜಿಲ್ಲಾಧಿಕಾರಿ ವಾಘಮೋರೆ ಮಾತನಾಡಿ, ‘ಗಡಿ ಜಿಲ್ಲೆಗಳಲ್ಲಿ 40 ಸಕ್ಕರೆ ಕಾರ್ಖಾನೆಗಳಿವೆ. ಕಾಕಂಬಿ, ಬೆಲ್ಲದಪುಡಿಯನ್ನೂ ಉತ್ಪಾದನೆ ಮಾಡುತ್ತಿವೆ. ಮೂರು ವರ್ಷಗಳಲ್ಲಿ ಕಾಕಂಬಿ ಸಾಗಾಣಿಕೆಗೆ ಸಂಬಂಧಿಸಿದಂತೆ 24 ಅಪರಾಧ ಪ್ರಕರಣಗಳು ದಾಖಲಾಗಿವೆ. 703 ಮೆಟ್ರಿಕ್ ಟನ್ ಮೊಲ್ಯಾಸಿಸ್ ಅಕ್ರಮ ಮದ್ಯಕ್ಕೆ ಮಾರಾಟವಾಗಿದೆ. ಎರಡೂ ರಾಜ್ಯಗಳ ಅಬಕಾರಿ ಅಧಿಕಾರಿಗಳು ಸಮನ್ವಯ ಸಾಧಿಸಿದರೆ ಇಂಥ ಪ್ರಕರಣ ತಡೆಯಬಹುದು’ ಎಂದು ಕಸಹೆ ನೀಡಿದರು.

‘ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣಹತ್ಯೆ ಪ್ರಕರಣಗಳು ಕಲಬುರಗಿ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಈ ಬಗ್ಗೆ ಅಲ್ಲಿನ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಬೇಕು. ಮಹಾರಾಷ್ಟ್ರದವರು ಅಲ್ಲಿಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಬರುತ್ತಿದ್ದಾರೆ. ಇಂಥ ಪ್ರಕರಣಗಳ ಮಾಹಿತಿ ನೀಡಿದವರ ಹೆರಸು ಗೋಪ್ಯವಾಗಿ ಇಟ್ಟು ₹ 1 ಲಕ್ಷ ಬಹುಮಾನವನ್ನು ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರವೂ ಇಂಥ ಯತ್ನ ಮಾಡಬೇಕು’ ಎಂದು ಉಸ್ಮಾನಾಬಾದ್‌ ಜಿಲ್ಲಾಧಿಕಾರಿ ಕೋರಿದರು.

ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್‌ ಹಾಗೂ ಮಹಾರಾಷ್ಟ್ರದ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಚರ್ಚೆಯಲ್ಲಿ ಪಾಲ್ಗೊಂಡರು.

*

‘ಅಕ್ರಮ ಮದ್ಯ ಸಾಗಣೆ ತಡೆಗೆ ಒಂದಾಗಿ’
‘ಗೋವಾ ರಾಜ್ಯದಿಂದ ಅಕ್ರಮ ಮದ್ಯ ಸಾಗಣೆ ತಡೆಯಲು ಶಿನ್ನೋಳಿ, ಸಂಕೇಶ್ವರ, ಕೂಗನೋಳಿ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ಕೂಲಂಕಷವಾಗಿ ತಪಾಸಣೆ ಮಾಡಬೇಕು. ಈ ಮೂಲಕ ಅಕ್ರಮ ಮದ್ಯ ಸಾಗಾಟ ತಡೆಯಲು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಅಬಕಾರಿ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಬೇಕು’ ಎಂದು ಮಹಾರಾಷ್ಟ್ರದ ಅಧಿಕಾರಿಗಳು ಕೋರಿದರು.

‘3.10 ಟಿಎಂಸಿ ಅಡಿ ಸಾಮರ್ಥ್ಯದ ಕಿತ್ವಾಡೆ ಮಧ್ಯಮ ಯೋಜನೆ’ಯು ಕೃಷ್ಣಾ ನದಿ ಜಲಾನಯನ ಪ್ರದೇಶದ ಘಟಪ್ರಭಾ ಉಪ ಜಲಾನಯನ ಪ್ರದೇಶದಲ್ಲಿದೆ. ಇದು ಎರಡೂ ರಾಜ್ಯಗಳಿಗೆ ಪ್ರಯೋಜನಕಾರಿ. ಹಾಗಾಗಿ, ಪರಸ್ಪರ ಒಪ್ಪಿಗೆಯ ಮೂಲಕ ನಿಯಮಗಳನ್ನು ಸಡಿಲಿಸಿ- ಷರತ್ತುಗಳನ್ನು ಅನ್ವಯಿಸಿ ಕಾರ್ಯಾನುಷ್ಠಾನ ಮಾಡಬೇಕು’ ಎಂದೂ ಹೇಳಿದರು.

‘ಜಾನುವಾರುಗಳಲ್ಲಿ ಚರ್ಮಮುದ್ದೆ ರೋಗ ನಿಯಂತ್ರಣ, ಮೇವು ಕೊರತೆ ನೀಗಿಸುವುದು ಸೇರಿದಂತೆ ಗಡಿ ಗ್ರಾಮಗಳ ರೈತರ ನೆರವಿಗೆ ಎರಡೂ ರಾಜ್ಯಗಳ ಅಧಿಕಾರಿಗಳು ಸ್ಪಂದಿಸಬೇಕು’ ಎಂದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ