Breaking News
Home / ರಾಜಕೀಯ / ಮೀಡಿಯಾ-ಸೋಷಿಯಲ್ ಮೀಡಿಯಾ, ಊರು-ಕೇರಿ ತುಂಬೆಲ್ಲ ಕಾಂತಾರ ಸಮಾಚಾರ.

ಮೀಡಿಯಾ-ಸೋಷಿಯಲ್ ಮೀಡಿಯಾ, ಊರು-ಕೇರಿ ತುಂಬೆಲ್ಲ ಕಾಂತಾರ ಸಮಾಚಾರ.

Spread the love

ಕಾಂತಾರ.. ಒಂದು ದಂತಕತೆ! ಮೀಡಿಯಾ-ಸೋಷಿಯಲ್ ಮೀಡಿಯಾ, ಊರು-ಕೇರಿ ತುಂಬೆಲ್ಲ ಇದರದ್ದೇ ಕಥೆ-ಕಾಲಕ್ಷೇಪ. ರಿಷಬ್ ವೈಯಕ್ತಿಕ ಇಷ್ಟಾನಿಷ್ಟಗಳ ಕಾರಣ ಅಲ್ಲಲ್ಲಿ ಆಕ್ಷೇಪ-ಹಸ್ತಕ್ಷೇಪವೂ ಎದ್ದಿದೆ, ಅದು ಬೇರೆ ಮಾತು ಬಿಡಿ. ಆದರೆ ಒಬ್ಬ ಪ್ರೇಕ್ಷಕನಾಗಿ ಚಿತ್ರದೊಳಗೆ ಹೊಕ್ಕಿ ಬಂದಂತಹ ಅನುಭವವಂತು ಆಗಿದೆ ಅನ್ನೋದು ಬಹುಜನರ ಲೈಕ್, ಕಮೆಂಟ್, ಶೇರ್ ಗಳಲ್ಲಿ ಕಾಣುತ್ತಿರುವ ಸಹಜ ಸಾಮಾನ್ಯ ಸಮಾಚಾರ. ಚಿತ್ರವನ್ನು ನೋಡಿದ ಕೂಡಲೇ ಅನಾಮತ್ತು 35 ವರ್ಷಗಳ ಹಿಂದಿನ ದಂತಕತೆಯೊಂದು ನೆನಪಾಗುತ್ತಿದೆ. ಅದುವೇ ಒಂದು ಮುತ್ತಿನ ಕತೆ! ಆ ದಿನಗಳ ಮಟ್ಟಿಗೆ CULT STATUS ಗಿಟ್ಟಿಸಿಕೊಂಡರೂ, ಅಣ್ಣಾವ್ರ ಹಿಟ್ ಆಗದ ಚಿತ್ರಗಳ ಸಾಲಲ್ಲಿ ಸಾರ್ವಕಾಲಿಕವಾಗಿ ಮೊದಲಿಗನಾಗಿಬಿಟ್ಟ ಐತು! ಆದರೆ ಆ ಐತುವಿನ ಪಾತ್ರ ಮಾತ್ರ ನೋಡಿದವರನ್ನ ಕಾಡಬಲ್ಲ ನೆನಕೆ ಅನ್ನೋದರಲ್ಲಿ ಅನುಮಾನವಿಲ್ಲ. ಕಾಂತಾರ ಗೆದ್ದಿರೋದೆ ಇಲ್ಲಿ.

ಕಥೆಯೂ ಗೆದ್ದಿದೆ, ಕಥಾನಾಯಕನೂ ಗೆದ್ದಿದ್ದಾನೆ! ದೈವಕ್ಕೆ ಕಟ್ಟಿದ್ದ ”ಹೊಂಬಾಳೆ”ಯ ಗರಿ ನಾರು ಅಲ್ಲಾಡಿದ ಪರಿಗೆ ಗಲ್ಲಾಪೆಟ್ಟಿಗೆ ಗಲಗಲ ಕುಣಿದುಬಿಟ್ಟಿದೆ.

ಒಂದು ಮುತ್ತಿನ ಕಥೆಯನ್ನ ಉದ್ದೇಶಪೂರ್ವಕವಾಗಿ ಇಲ್ಲಿ ಎಳೆದು ತಂದಿದ್ದಕ್ಕೆ ಕಾರಾಣವೂ ಇದೆ. ಕಾಂತಾರ ಒಂದು ದಂತಕತೆಯಾದರೆ, ಮುತ್ತಿನ ಕತೆಯ ಇಬ್ಬರು, ಚಂದನವನದ ಸಾರ್ವಕಾಲಿಕ ದಂತಕತೆಗಳು. ಕಡಲ ಕಿನಾರೆಯ ಕನಸು-ಕನವರಿಕೆಗಳನ್ನ ಅಣ್ಣಾವ್ರು ಈಜಿದ ಪರಿ ಅವಿಸ್ಮರಣೀವಾದರೆ, ಶಂಕರಣ್ಣ ಅದನ್ನು ತೋರಿದ ಪರಿ ಅತ್ಯದ್ಭುತವಾಗಿತ್ತು.

ಸಿನಿಮಾ ಪರಿಭಾಷೆಯಲ್ಲೇ ನೋಡೋದಾದ್ರೆ VIDEO VILLAGE ಅಂತ ಕರೆಸಿಕೊಳ್ಳುವ ಸಾವಿರಾರು ಫ್ರೇಮ್ ಗಳ ನಡುವೆ ಮಾಸ್ಟರ್ ಶಾಟ್ ಗಳನ್ನ ಹೆಕ್ಕಿ ಜೋಡಿಸುವ ನಿರ್ದೇಶಕನ ತಾಕತ್ತು ಗೊತ್ತಾಗೋದೆ ಇಲ್ಲಿ. ಕಂಬಳದ ಕೋಣಗಳನ್ನು ಹಿಡಿದಷ್ಟೇ ತಾಕತ್ತಿನಲ್ಲಿ ಚಿತ್ರಕಥೆಯನ್ನು ಹಿಡಿದು ಸವಾರಿ ಮಾಡಲಾಗಿದೆ, ಶಿವನ ನಟನೆಯಲ್ಲಿ ಅಣ್ಣಾವ್ರ ಪರಕಾಯ ಪ್ರವೇಶದ ಮಾದರಿಯನ್ನು ಯಶಸ್ವಿಯಾಗಿ ಪ್ರಯತ್ನ ಮಾಡಿರುವ ರಿಷಬ್, ನಿರ್ದೇಶಕನಾಗಿಯೂ ಕೂಡ ನೈಜತೆಯೊಂದನ್ನ, ನೇಟಿವಿಯೊಂದನ್ನ ಕಟ್ಟಿಕೊಡುವುದಕ್ಕೆ ಶಂಕರಣ್ಣನಷ್ಟೇ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮುತ್ತಿನ ಕತೆಯಲ್ಲಿ ನೀರು, ನೀರೊಳಗಿನ ಮುತ್ತು ಕತೆಯಾದರೆ, ಕಾಂತಾರದಲ್ಲಿ ಕಾಡು, ಕಾಡೊಳಗಿನ ಕತ್ತಲೆಯೇ ಕತೆಯಾಗಿದೆ.

ಕಾಂತಾರದ ಶಿವಲೀಲೆಯನ್ನು ಹೇಳುವ ಮುದ್ದಾದ ಮಾಯಾಂಗಿ-ಮೌನದ ಸಾರಂಗಿ ಹಾಡು, ಐತು-ಕಾಕಿಯ ಪ್ರೇಮ-ಕಾಮಗಳನ್ನು ಬಣ್ಣಿಸುವ ಮಲ್ಲಿಗೆ ಹೂವಿನಂತ ಅಂದ ನಿನ್ನಲ್ಲಿ ಅನ್ನೋ ಹಾಡನ್ನ ನೆನಪಿಸುತ್ತದೆ. ಕೆಮಿಸ್ಟ್ರಿಯಿಂದ ಜಿಯಾಗ್ರಫಿವರೆಗೆ ಯಾವುದರಲ್ಲೂ ನೆಲದ ಗುಣ ಮರೆಮಾಚಿ ಫ್ಯಾಂಟಸಿಗಳಿಗೆ ಜೋತು ಬಿದ್ದಿಲ್ಲ ಚಿತ್ರತಂಡ. ಭಾವನೆಗಳಿಗೆ ಗಡಿ ರೇಖೆಯೇನು ಇರೋದಿಲ್ವಲ್ಲ? ಇದೇ ಕಾರಣಕ್ಕೆ ಕರಾವಳಿಯ ಕತೆ ಗಡಿ ದಾಟಿ ಮನಮುಟ್ಟುವ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಿದೆ.

ಮರ ಕತ್ತರಿಸುವ ಶಬ್ಧ ಪುಷ್ಪನನ್ನು ನೆನಪಿಸಬಹುದು, ಹಾಸ್ಯದ ಪಂಚ್ ಗಳು ಮತ್ಯಾವುದೋ ಚಿತ್ರವನ್ನು ನೆನಪಿಸಬಹುದು… ಹೀಗೆ ಹುಡುಕುತ್ತಲೇ ಹೋದರೆ ಒಂದು ಸೀನು, ಇನ್ನೊಂದು ಟ್ಯೂನು ಅಂತ ಕಾಪಿ ಕ್ಯಾಟ್ ಅಪವಾದ ಹೊರಿಸಿ ಕೈತೊಳೆದುಕೊಳ್ಳುವುದು ತುಂಬಾ EASY! ಆದರೆ ಕಡೆಯ 15 ನಿಮಿಷಕ್ಕೆ ಯಾವ ನೆಪವಿದೆ? ನೂರಕ್ಕೆ ನೂರು SCORE ಮಾಡಿದ್ದಾರೆ ರಿಷಬ್. ಶಿವ ಅನ್ನೋ ಹೆಸರಿಗೆ ತಕ್ಕ ರುದ್ರಪ್ರದರ್ಶನವದು.

ಪ್ರೇಕ್ಷಕನ ಸೈಕಾಲಜಿಯನ್ನು ಅರ್ಥೈಸಿಕೊಂಡೇ ಕಡೆಯ ಕ್ಷಣಗಳಿಗೆ ರೆಪ್ಪೆಮಿಟುಕಿಸದಷ್ಟು ಕುತೂಹಲ ತುಂಬಿದ್ದಾರೆ. ಚಿತ್ರ ಮುಗಿದ ಮೇಲೂ ಆ ದೈವಾಹನೆಯ ಕೂಗು ಕೇಳುತ್ತದೆ. ದೈವ ಎಲ್ಲರ ಕೈ ಹಿಡಿಯುವ ಮೂಲಕ ಜನಭಾಗಿತ್ವವೇ ದೈವತ್ವ ಎಂದು ಸಾರುವ ಕೊನೆಯ ದೃಶ್ಯ ಕಾಡುತ್ತದೆ!

ಸದಭಿರುಚಿಗೆ ಶುಭಾಶಯ. ಬಿಸಿಲ ನಾಡು, ಮಲೆನಾಡು, ಬಯಲುಸೀಮೆಯ ಸಾಂಸ್ಕೃತಿಕ ಆತ್ಮಗಳಿಗೂ ಜೀವ ತುಂಬುವ ಪ್ರೇರಣೆಯಾಗಲಿ ಅನ್ನೋದು ಸದಾಶಯ. ಚಂದನವನದ ಕಿರೀಟ ಇನ್ನಷ್ಟು ರತ್ನಖಚಿತವಾಗಲಿ.


Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ, ಅತ್ತ ವಿದೇಶಕ್ಕೆ ಹೋದರಾ ಸಂಸದ?

Spread the loveಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ವಿಡಿಯೋ ಪ್ರಕರಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ