Breaking News
Home / ರಾಜಕೀಯ / ರಾಷ್ಟ್ರಪತಿ ಚುನಾವಣೆ ಮತಮೌಲ್ಯದ ಲೆಕ್ಕಾಚಾರವೇನು? ಇಲ್ಲಿದೆ ಮಾಹಿತಿ

ರಾಷ್ಟ್ರಪತಿ ಚುನಾವಣೆ ಮತಮೌಲ್ಯದ ಲೆಕ್ಕಾಚಾರವೇನು? ಇಲ್ಲಿದೆ ಮಾಹಿತಿ

Spread the love

ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆಯು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಿಂತ ಸ್ವಲ್ಪ ಭಿನ್ನವಾಗಿರುತ್ತದೆ.

ಈ ಪ್ರಕ್ರಿಯೆಯಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳ ಸದಸ್ಯರು ರಾಷ್ಟ್ರಪತಿ ಚುನಾವಣೆಯ ಮತದಾರರಾಗಿರುತ್ತಾರೆ.

ಆದರೆ, ರಾಷ್ಟ್ರಪತಿ ಅವರು ನಾಮನಿರ್ದೇಶನ ಮಾಡಿದ ರಾಜ್ಯಸಭೆಯ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ. ಒಬ್ಬ ಜನಪ್ರತಿನಿಧಿ ಚಲಾಯಿಸುವ ಮತವನ್ನು ಒಂದು ಮತ ಎಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ, ಆಯಾ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಅಲ್ಲಿನ ಶಾಸಕನ ಮತಮೌಲ್ಯ ನಿರ್ಧಾರವಾಗುತ್ತದೆ.

ಉದಾಹರಣೆಗೆ, ಕರ್ನಾಟಕದ ಜನಸಂಖ್ಯೆಯ ಅನುಸಾರ ರಾಜ್ಯದ ವಿಧಾನಸಭೆಯ ಒಬ್ಬ ಸದಸ್ಯ ಚಲಾಯಿಸುವ ಮತವು 131 ಮತ ಮೌಲ್ಯ ಹೊಂದಿರುತ್ತದೆ. ಆದರೆ ಕರ್ನಾಟಕಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಪ್ರತಿಯೊಬ್ಬ ಶಾಸಕನ ಮತಮೌಲ್ಯವು 208 ಆಗಿರುತ್ತದೆ. ಚಿಕ್ಕ ರಾಜ್ಯವಾದ ಸಿಕ್ಕಿಂನ ಪ್ರತೀ ಶಾಸಕನ ಮತಮೌಲ್ಯ 7 ಎಂದು ನಿಗದಿಗೊಳಿಸಲಾಗಿದೆ. ಹೀಗೆ ಲೆಕ್ಕಾಚಾರ ಹಾಕಿದಾಗ, ಒಂದು ರಾಜ್ಯದ ಶಾಸಕನ ಮತಮೌಲ್ಯಕ್ಕೂ ಮತ್ತೊಂದು ರಾಜ್ಯದ ಶಾಸಕನ ಮತಮೌಲ್ಯಕ್ಕೂ ವ್ಯತ್ಯಾಸ ಇರುತ್ತದೆ. ಈ ಪ್ರಕಾರ, ಕರ್ನಾಟಕವು 29,344 (ಪ್ರತೀ ಶಾಸಕನ ಮತಮೌಲ್ಯ 131X224 ಶಾಸಕರು) ಮತಮೌಲ್ಯ ಹೊಂದಿದೆ. ಆದರೆ ಎಲ್ಲ ಸಂಸತ್ ಸದಸ್ಯರಿಗೆ ಒಂದೇ ಮತಮೌಲ್ಯ ಗೊತ್ತುಪಡಿಸಲಾಗಿದೆ. ಲೋಕಸಭೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರತೀ ಸದಸ್ಯನ ಮತಮೌಲ್ಯವನ್ನು 708 ಎಂದು ನಿರ್ಧರಿಸಲಾಗಿದೆ.

ಪ್ರಾಶಸ್ತ್ಯ: ಮತಪತ್ರಗಳ ಮೂಲಕ (ಬ್ಯಾಲೆಟ್ ಪೇಪರ್) ಚುನಾವಣೆ ನಡೆಯುತ್ತದೆ. ಮತದಾರರು (ಸಂಸದರು ಮತ್ತು ಶಾಸಕರು) ತಮಗೆ ನೀಡಲಾದ ಮತಪತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ತಮ್ಮ ಆದ್ಯತೆ ಯಾರು ಎಂದು ಗುರುತು ಹಾಕಬೇಕು. ಸಂಸತ್ ಸದಸ್ಯರಿಗೆ ಹಸಿರು, ಶಾಸಕರಿಗೆ ಗುಲಾಬಿ ಬಣ್ಣದ ಮತಪತ್ರ ನೀಡಲಾಗುವುದು. ತಮ್ಮ ಮೊದಲ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ 1 ಎಂದೂ (ಮೊದಲ ಆಯ್ಕೆ), ಎರಡನೇ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ 2 ಎಂದೂ (ಎರಡನೇ ಆಯ್ಕೆ) ನಮೂದಿಸಬೇಕು. ಮತ ಎಣಿಕೆಯ ವೇಳೆ ಮೊದಲ ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸಲಾಗುತ್ತದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್‌ ಜಾರಿ ಮಾಡಿ ಇಂಥವರಿಗೇ ಮತ ಹಾಕಿ ಎಂದು ಹೇಳುವಂತಿಲ್ಲ.

ಅರ್ಹತೆ: ರಾಷ್ಟ್ರಪತಿ ಆಗಲು ಬಯಸುವ ವ್ಯಕ್ತಿಯು ಭಾರತೀಯ ನಾಗರಿಕ ಆಗಿರಬೇಕು. 35 ವರ್ಷ ವಯಸ್ಸಾಗಿರಬೇಕು. ₹15 ಸಾವಿರ ಠೇವಣಿ ಇಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ರಾಷ್ಟ್ರಪತಿ ಆಗಬಯಸುವ ಅಭ್ಯರ್ಥಿಯು ಸಂಸತ್ ಅಥವಾ ವಿಧಾನಸಭೆಯ 50 ಜನಪ್ರತಿನಿಧಿಗಳು ಬೆಂಬಲಿಸಿರುವ ಪತ್ರವನ್ನು ಸಲ್ಲಿಸಬೇಕು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ