Home / ರಾಜಕೀಯ / ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ

ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ

Spread the love

ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಜು.18ರಂದು ಮತದಾನ ನಡೆಯಲಿದ್ದು, ಅದರಂತೆ ರಾಜ್ಯದಲ್ಲೂ ಮತದಾನಕ್ಕೆ ವಿಧಾನಸೌಧದ 106ನೇ ಸಂಖ್ಯೆಯ ಕೊಠಡಿ ಸಜ್ಜುಗೊಂಡಿದೆ.

ರಾಷ್ಟ್ರಪತಿ ಚುನಾವಣೆಗೆ ಮತದಾರರಾಗಿರುವ 224 ಶಾಸಕರ ಜತೆಗೆ ವಿಶೇಷ ಅನುಮತಿ ಪಡೆದಿರುವ ಇಬ್ಬರು ಸಂಸದರು ವಿಧಾನಸೌಧದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮತದಾನ ಮಾಡಲಿದ್ದಾರೆ.

 

ಕೇಂದ್ರ ಚುನಾವಣ ಆಯೋಗದ ವಿಶೇಷ ವೀಕ್ಷಕ ಅಮಿತ್‌ ಕುಮಾರ್‌ ಘೋಷ್‌ ಮಾರ್ಗದರ್ಶನದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಹಾಗೂ ಸಹಾಯಕ ಚುನಾವಣಾ ಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರ ನೇತೃತ್ವದಲ್ಲಿ ಮತದಾನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಲೋಕಸಭಾ ಸದಸ್ಯರು ಸಂಸತ್ತಿನಲ್ಲಿ ಮತ ಚಲಾಯಿಸಬೇಕು. ಆದರೆ ವಿಶೇಷ ಸಂದರ್ಭಗಳಲ್ಲಿ ಕೇಂದ್ರ ಚುನಾವಣ ಆಯೋಗದ ಅನುಮತಿ ಪಡೆದು ಆಯಾ ರಾಜ್ಯಗಳಲ್ಲೂ ಸಂಸದರು ಮತ ಹಾಕಬಹುದು. ಅದರಂತೆ, ಚಾಮರಾಜ ನಗರದ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಹಾಗೂ ರಾಜ್ಯ ಸಭಾ ಸದಸ್ಯರಾಗಿರುವ ಎಚ್‌.ಡಿ. ದೇವೇಗೌಡರು ವಿಧಾನಸೌಧದಲ್ಲಿ ಮತ ಚಲಾಯಿಸಲಿದ್ದಾರೆ.

ರಾಜ್ಯದಲ್ಲೇ ದೇವೇಗೌಡ,
ಶ್ರೀನಿವಾಸ ಪ್ರಸಾದ್‌ ಮತದಾನ
ಶ್ರೀನಿವಾಸ ಪ್ರಸಾದ್‌ ಅವರು 10 ದಿನಗಳ ಹಿಂದೆಯೇ ಚುನಾವಣ ಆಯೋಗದಿಂದ ಅನುಮತಿ ಪಡೆದು ಕೊಂಡಿದ್ದರು. ಎಚ್‌.ಡಿ. ದೇವೇಗೌಡರಿಗೆ ಆರೋಗ್ಯದ ಸಮಸ್ಯೆ ಹಿನ್ನೆಲೆ ಯಲ್ಲಿ ಆಯೋಗದಿಂದ ವಿಶೇಷ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಗೌಪ್ಯ ಮತದಾನ ನಡೆಯಲಿದ್ದು, ವಿಧಾನಸೌಧದ 106ನೇ ಸಂಖ್ಯೆಯ ಕೊಠಡಿಯನ್ನು ಮತದಾನ ಕೇಂದ್ರವನ್ನಾಗಿ ಮಾಡಲಾಗಿದೆ. ಇಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ವಿಧಾನ ಸಭೆ ಸಚಿವಾಲಯ ಹಾಗೂ ಮುಖ್ಯ ಚುನಾವಣಾ ಧಿಕಾರಿಗಳ ಕಚೇರಿ ಅಧಿಕಾರಿಗಳು ಸೇರಿ ಒಟ್ಟು 70ಕ್ಕೂ ಹೆಚ್ಚು ಸಿಬಂದಿಯನ್ನು ಮತದಾನ ಪ್ರಕ್ರಿಯೆಯ ನಿರ್ವಹಣೆಗೆ ನಿಯೋಜಿಸ ಲಾಗಿದೆ. ವಿದ್ಯುತ್‌ ಹಾಗೂ ಮತ್ತಿತರ ತಾಂತ್ರಿಕ ವಿಷಯಗಳ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆ ಸಿಬಂದಿಯನ್ನು ನೇಮಿಸಲಾಗಿದೆ. ಭದ್ರತೆಗೆ ಅಗತ್ಯ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿದೆ ಮತದಾನ ಕೇಂದ್ರಕ್ಕೆ ಸಿಸಿ ಟಿವಿ ಕೆಮರಾ ಅಳವಡಿಸಲಾಗಿದೆ.

ಪ್ರತ್ಯೇಕ ವ್ಯವಸ್ಥೆ
ಮತದಾನಕ್ಕಾಗಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಸರತಿ ಸಾಲು ಹಾಗೂ ದಟ್ಟಣೆ ತಪ್ಪಿಸಲು ವಿಧಾನಸೌಧದ ಕೊಠಡಿ ಸಂಖ್ಯೆ 109 ಅನ್ನು “ವೇಟಿಂಗ್‌ ರೂಂ’ ಮಾಡಲಾಗಿದೆ. ಇಲ್ಲಿ ಚುನಾವಣೆಗಳು, ಮತದಾರರ ಜಾಗೃತಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವೇಟಿಂಗ್‌ ರೂಂ ಹಾಗೂ ಮತದಾನ ಕೇಂದ್ರದ ಕೊಠಡಿಯವರೆಗೆ ಚುನಾವಣೆ ಮತ್ತು ಮತದಾರರ ಜಾಗೃತಿಗೆ ಸಂಬಂಧಿಸಿದ ವಿಶೇಷ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.

ಕೇಂದ್ರ ಚುನಾವಣ ಆಯೋಗದ ಮಾರ್ಗದರ್ಶನದಂತೆ ರಾಷ್ಟ್ರಪತಿ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಲಿದೆ. ಗೌಪ್ಯ ಮತದಾನ ಆಗಿರುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಹೇಳಿದ್ದಾರೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ