Breaking News
Home / ರಾಜಕೀಯ / ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು:H.D.K.

ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು:H.D.K.

Spread the love

ಬೆಂಗಳೂರು: ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು ಒಡಲಲ್ಲಿಟ್ಟುಕೊಂಡ ಭಾರತದಲ್ಲಿ, ಕನ್ನಡಿಗರೂ ಸೇರಿದಂತೆ ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹಲವು ಮಾರ್ಗಗಳ ಮೂಲಕ ಹೇರಲಾಗುತ್ತಿದೆ.

ಇಂದಿನ ಹಿಂದಿ ದಿವಸ್ ಕೂಡ ಅಂಥದ್ದೇ ಅಪಮಾರ್ಗ. ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಹಿಂದಿ ರಾಷ್ಟ್ರಭಾಷೆಯಲ್ಲ. ರಾಷ್ಟ್ರಭಾಷೆ ಎಂಬ ಕಲ್ಪನೆ ಸಂವಿಧಾನದಲ್ಲಿಲ್ಲ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವ, ಅದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆದೇ ಬಂದಿದೆ. ಅದು ಈಗ ವಿಪರೀತಕ್ಕೆ ಹೋಗಿದೆ. ದೇಶದ ಇತರೇ ಭಾಷಿಕರು ಇಂಥ ಪ್ರಯತ್ನಗಳ ವಿರುದ್ಧ ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು ಎಂದಿದ್ದಾರೆ.

ಹಿಂದಿ ಹೇರಿಕೆಗೆ ಕಲಿಕೆ ನೆಪ ನೀಡಲಾಗುತ್ತಿದೆ. ಕಲಿಕೆ ಎಂದಿಗೂ ಆಯ್ಕೆಯೇ ಹೊರತು ಹೇರಿಕೆಯಿಂದ ಕಲಿಕೆಯಾಗಲು ಸಾಧ್ಯವಿಲ್ಲ. ಭಾಷೆಯೊಂದರ ಹೇರಿಕೆಯು ಇನ್ನೊಂದು ಭಾಷೆಯ ಅಸ್ಮಿತೆಯನ್ನು ಪ್ರಶ್ನಿಸುವಂತಿರಬಾರದು. ಭಾಷೆಯ ಹೇರಿಕೆಯು ಮತ್ತೊಂದು ಭಾಷೆಯ ಅವಸಾನಕ್ಕೆ ದಾರಿಯಾಗಬಾರದು. ದೇಶದ ಸಂಸ್ಕೃತಿ, ವೈವಿದ್ಯತೆ, ಸಮಗ್ರತೆಗೆ ಧಕ್ಕೆ ತರಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರದ ಆಡಳಿತದಲ್ಲಿ ಹಿಂದಿ ಜಾರಿಗೆ ಬಂದಿದ್ದಕ್ಕಾಗಿ, ಹಿಂದಿ ಜಾರಿ ಹೋರಾಟ ಮಾಡಿದ ಬೋಹರ್ ರಾಜೇಂದ್ರ ಸಿಂಹ ಜನ್ಮದಿನದ ನೆನಪಿಗಾಗಿ ಸೆ.14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ರಾಜೇಂದ್ರ ಸಿಂಹ ಹುಟ್ಟುಹಬ್ಬದಲ್ಲಿ, ಹಿಂದಿ ಆಡಳಿತ ಭಾಷೆ ಆಗಿದ್ದರಲ್ಲಿ ಹಿಂದಿಯೇತರರು ಸಂಭ್ರಮಿಸುವುದು ಏನಿದೆ? ನಿರ್ಥಕ ಹಿಂದಿ ದಿವಸ ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.

ಅನ್ಯ ಭಾಷಿಕರಿಗೆ ನಿರರ್ಥಕವಾಗಿರುವ ಹಿಂದಿ ದಿವಸವನ್ನು ಆಚರಿಸುವುದೇ ಆದರೆ, ಹಿಂದಿಯೊಂದಿಗೆ ಅಧಿಕೃತ ಭಾಷೆಗಳೆನಿಸಿರುವ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ದಿನವನ್ನು ಕೇಂದ್ರ ಸರ್ಕಾರವೇ ದೇಶದಾದ್ಯಂತ ಆಚರಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ದಿನವನ್ನೂ ಘೋಷಣೆ ಮಾಡಬೇಕು. ನವೆಂಬರ್ 1 ಅನ್ನು ದೇಶದಾದ್ಯಂತ ಕನ್ನಡ ದಿನವಾಗಿ ಆಚರಿಸಬೇಕು ಎಂದು ಒತ್ತಾಹಿಸಿದ್ದಾರೆ.

ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಗೊಂದಲಕಾರಿ ಅಂಶಗಳಿವೆ. ಇದೇ ಗುರಾಣಿ ಹಿಡಿದು ಹಿಂದಿ ಹೇರಿಕೆ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಸಂವಿಧಾನವನ್ನು ಬದಲಿಸಲೇ ಬಂದಿರುವ ಬಿಜೆಪಿಗರು, ಒಂದೊಳ್ಳೆ ಕಾರಣಕ್ಕಾಗಿ ಇದನ್ನು ಬದಲಿಸಲಿ. ಈ ಮೂಲಕ ಕನ್ನಡವೂ ಸೇರಿ ಅನ್ಯ ಭಾಷೆಗಳ ಅಸ್ಮಿತೆಯನ್ನು ರಕ್ಷಿಸಲಿ ಎಂದು ಹೇಳಿದ್ದಾರೆ.

ಹಿಂದಿ ದಿವಸದಂತೇ, ತ್ರಿಭಾಷಾ ಸೂತ್ರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಹಿಂದಿ ಹೇರಿಕೆಯ ಮಾರ್ಗವೇ. ದ್ವಿಭಾಷಾ ಸೂತ್ರವೇ ಇದ್ದರೆ ನಷ್ಟವೇನು? ಹಿಂದಿ ಮಾತನಾಡುವ ಯಾವ ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ? ಹಾಗಿದ್ದ ಮೇಲೆ ಹಿಂದಿಯೇತರ ರಾಜ್ಯಗಳಿಗೆ ಮಾತ್ರ ಏಕೆ ತ್ರಿಭಾಷಾ ಸೂತ್ರ? ಎನ್‍ಇಪಿಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ