Breaking News
Home / ರಾಜಕೀಯ / ಈ ಶಿಕ್ಷಕ, ಶ್ರೇಷ್ಠ ತತ್ವಜ್ಞಾನಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್

ಈ ಶಿಕ್ಷಕ, ಶ್ರೇಷ್ಠ ತತ್ವಜ್ಞಾನಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್

Spread the love

ಭಾರತದ ಮೊದಲ ಉಪರಾಷ್ಟ್ರಪತಿಯಾಗಿ, ರಾಷ್ಟ್ರಪತಿಗಳಾಗಿ, ರಷ್ಯಾದ ರಾಯಭಾರಿಯಾಗಿ, ಇನ್ನೂ ಮೊದಲಾದ ದೇಶದ ಅತ್ಯುನ್ನತ ಹುದ್ದೆಗಳನ್ನು, ಉನ್ನತ ಹುದ್ದೆಗೆ ಏರಿದವರು ಈ ಶಿಕ್ಷಕ, ಶ್ರೇಷ್ಠ ತತ್ವಜ್ಞಾನಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರು. ಅವರು ಓರ್ವ ಶಿಕ್ಷಕರಾಗಿ ಶಿಕ್ಷಕ ಸ್ಥಾನದ ಘನತೆಯನ್ನು ಆಧುನಿಕ ಕಾಲ ಘಟ್ಟದಲ್ಲಿ ಮೇಲ್ಮಟ್ಟಕ್ಕೆ ಕೊಂಡೊಯ್ದವರು. ಅವರ ಹುಟ್ಟಿದ ದಿನ ಸೆಪ್ಟಂಬರ್ 5ನ್ನು ದೇಶದ ತುಂಬೆಲ್ಲಾ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಂತೆ ಮಾಡಿದರು.

ಪ್ರಾಚೀನ ಕಾಲದಿಂದಲೂ ಗುರುವಿನ ಮಹಿಮೆ ತಿಳಿಯದವರಾರೂ ಇಲ,್ಲ ನಮ್ಮ ದೇಶದಲ್ಲಿ ಗುರುವಿಗೆ ಮೊದಲ ಸ್ಥಾನ ನೀಡಿರುವರು. ಅದು ಇಂದಿಗೂ ಆಚರಣೆಯಲ್ಲಿರುವುದನ್ನು ಶಿಕ್ಷಕ ದಿನಾಚರಣೆಯ ಮುಖಾಂತರ ನೋಡಬಹುದು. ತಮಗೆ ಕಲಿಸಿದ ಗುರುಗಳಿಗೆ ಗೌರವಿಸುವರು. ಕಾಣಿಕೆ ಕೊಡುವರು. ಗುರು ಎಂದರೆ ಅರಿವಿನ ದಾರಿಯನ್ನು ತೋರುವವ ಎಂಬ ಬಲವಾದ ನಂಬಿಕೆ ಹರಮುನಿದರು ಗುರು ಕಾಯುವ ಎಂಬ ಆತ್ಮವಿಶ್ವಾಸ ಜತೆಗೆ. ಗುರುವನ್ನು ಬ್ರಹ, ವಿಷ್ಣು, ಮಹೇಶ್ವರ ಎಂದು ಪೂಜಿಸುವರು. ಈ ಮೂಲಕ ಪ್ರಾಚೀನ ಕಾಲದ ಶಿಕ್ಷಣದ, ಶಿಕ್ಷಕರ ಮತ್ತು ಡಾ.ರಾಧಾಕೃಷ್ಣನ್ ರ ವಿಚಾರಗಳನ್ನು ಒಂದಿಷ್ಟು ಮೆಲುಕು ಹಾಕೋಣ.

ಗುರು ಬ್ರಹ್ಮ, ಗುರು ವಿಷ್ಣು, ಗುರುದೈವತ್ ಪರಂನಾಸ್ತಿ, ತಸ್ಮೈ ಶ್ರೀಗುರುವೇ ನಮಃ: ಭಾರತದಲ್ಲಿ ಪುರಾತನ ಕಾಲದಿಂದಲೂ ಗುರುವಿಗೆ ಅಪಾರವಾದ ಗೌರವ. ಭಕ್ತಿ, ಶೃದ್ಧೆ ಜೊತೆಗೆ ಉನ್ನತ ಸ್ಥಾನ ನೀಡಿರುವರು. ಮನುಷ್ಯನು ಗುರುವಿನಿಂದ ಶ್ರದ್ದಾಪೂರ್ವಕವಾಗಿ ಜ್ಞಾನ ಸಂಪಾದನೆ ಮಾಡಬೇಕು. ಮನುಷ್ಯನ ಜೀವನದ ಪರಮೋದ್ಯೇಶ ಬ್ರಹ್ಮ ಜ್ಞಾನವನ್ನು ಪಡೆದು ಕೊಳ್ಳುವುದೇ ಆಗಬೇಕು. ಆತ್ಮಗುಣಗಳನ್ನು ಸಂಪಾದಿಸಿಕೊಂಡು ಅಹಂಕಾರದಿಂದ ದೂರವಾಗಿ ಸತ್ಯ, ಧರ್ಮ, ಅಧ್ಯಯನ, ಅಧ್ಯಾಪನ, ದಾನ ಮೊದಲಾದ ಪರಮ ಧರ್ಮಗಳನ್ನು ರೂಢಿಸಿಕೊಂಡು ಈ ಬ್ರಹ್ಮ ಜ್ಞಾನವನ್ನು ಗುರುವಿನಿಂದಲೆ ಪಡೆಯುತ್ತಿದ್ದರು.

ವೇದ ಕಾಲದಿಂದಲೂ ಗುರುವಿನಿಂದ ಜ್ಞಾನಪಡೆದು ಎಲ್ಲರು ಸಾರ್ಥಕತೆ ಹೊಂದುತ್ತಿದ್ದರು. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದು ಪುರಂದರ ದಾಸರು ಹೇಳಿರುವರು. ಈ ಜ್ಞಾನವನ್ನು ಹೊಂದಲು ಗುರು-ಶಿಷ್ಯ ಪರಂಪರೆಯು ವೇದ ಕಾಲದಿಂದಲೂ ಅಗ್ರಹಾರಗಳಲ್ಲಿ, ಘಟಿಕಾ, ದೇವಸ್ಥಾನ, ಕೋಟೆ, ಮಠ ಮಂದಿರಗಳಲ್ಲಿ ಜ್ಞಾನ ನೀಡುತ್ತಿದ್ದರು. ಅಂದಿನಿಂದ ಇಂದಿನವರೆಗೂ ದೇಶದ ಭವಿಷ್ಯ ನಿರ್ಮಾಣವಾಗುವುದು ವರ್ಗಕೋಣೆಯಲ್ಲಿ ಎನ್ನುತ್ತಾರೆ ಅದು ಗುರುವಿನಿಂದ. ಒಂದಕ್ಷರವಂ ಕಲಿಸಿದಾತ ಗುರುವಿಗೆ ಸಮಾನ.

ನಹಿ ಜ್ಞಾನೇನ ಸದೃಶ್ಯಂ ಎಂದರೆ. ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ. ಅದಕ್ಕಾಗಿ ಇಂದು ಶಿಕ್ಷಣವು ಜೀವನೋಪಾಯಕ್ಕೆ ಒಂದು ಪ್ರಮುಖ ಮಾರ್ಗವಾಗಿದೆ. ಇಂದಿಗೂ ಗುರುವಿಗೆ ದೇಶವೆ ತಲೆಬಾಗುತ್ತದೆ. ಗುರುವಿಗೆ ಪ್ರಮುಖ ಸ್ಥಾನವನ್ನು ನೀಡಿದೆ. ಅದಕ್ಕೆ ನಿದರ್ಶನವಾಗಿ ಅನೇಕ ಮಹನೀಯರು ಪೂಜ್ಯನೀಯವಾದ ಸ್ಥಾನದಲ್ಲಿದ್ದು ಅವರಿಗೆ ಗೌರವ ಸಮರ್ಪಿಸಲು ಪ್ರತಿ ವರ್ಷ ಸೆಪ್ಟಂಬರ 5 ರಂದು ಶಿಕ್ಷಕ ದಿನಾಚರಣೆಯನ್ನು ಆಚರಿಸುವರು. ಇದಕ್ಕೆ ಮೂಲ ಕಾರಣಿಭೂತರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ನರವರು.

ಡಾ.ರಾಧಾಕೃಷ್ಣನ್ನರವ ಜೀವನ ಮತ್ತು ಆದರ್ಶಗಳನ್ನು ಕುರಿತು ಸಂಕ್ಷೀಪ್ತವಾಗಿ ಈ ಮೂಲಕ ಮೆಲುಕು ಹಾಕೋಣ. ಸರ್ವಪಲ್ಲಿ ರಾಧಾಕೃಷ್ಣನ್ ರವರು 1888ರಲ್ಲಿ ಸೆಪ್ಟಂಬರ್ 05 ರಂದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಜನಿಸಿದರು. ತಂದೆ. ವೀರಸ್ವಾಮಿ. ತಾಯಿ ಸೀತಮ್ಮ. ತಂದೆ ಜಮೀನ್ದಾರರ ಬಳಿ ನೌಕರರಾಗಿದ್ದರು. ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಮಗನನ್ನು ಪುರೋಹಿತನನ್ನಾಗಿ ಮಾಡಬೇಕೆಂದಿದ್ದರು. ಮಗ ತುಂಬಾ ಜಾಣನಾಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ಕಾಲರ್ ಶಿಪ್‍ನಿಂದ ಪೂರೈಸಿದರು.

 

16ನೇ ವಯಸ್ಸಿಗೆ ಶಿವಕಾಮಮ್ಮನವರ ಜೊತೆ ವಿವಾಹ ನೇರವೆರಿಸಿದರು. ಮುಂದೆ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ ಪದವಿಯನ್ನು ತತ್ವಶಾಸ್ತ್ರದಲ್ಲಿ ಪಡೆದರು. ಇವರು ಸ್ನಾತಕೋತ್ತರ ಪದವಿಯನ್ನು ಓದುವಾಗ ದಿ ಎಥಿಕ್ ಆಫ್ ವೇದಾಂತ ಎಂಬ ಪ್ರಬಂಧ ಮಂಡಿಸಿದ್ದರು. 20 ವರ್ಷದ ವಿದ್ಯಾರ್ಥಿಯಲ್ಲಿನ ಹಲವು ಬಗೆಯ ಸಿದ್ದಾಂತಗಳು ವೇದಾಂತ ವಿಚಾರಗಳು ಅವರ ಶಿಕ್ಷಕರಿಗೆ ಅಚ್ಛರಿ ಮೂಡಿಸಿತ್ತು. ಉನ್ನತ ಮಟ್ಟಕ್ಕೆ ಎರುವನು ಎಂದು ಆಗಲೆ ಊಹೆ ಮಾಡಿದ್ದರು.

1909 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ತಮ್ಮ ಅಚ್ಚುಮೆಚ್ಚಿನ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಭಾರತದ ಹಿಂದೂ ಸನಾತನ ಧರ್ಮದ ಸಾರ, ವೇದ, ಉಪನಿಷತ್ತು, ಜೈನ ತತ್ವಜ್ಞಾನ, ಶಂಕರ,ರಾಮಾನುಜ, ಮಧ್ವ. ಪ್ಲೇಟೋ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿ ಮೇಲೆರಿದರು.

1918 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿಗೆ ತತ್ವಜ್ಞಾನ ವಿಭಾಗಕ್ಕೆ ಉಪನ್ಯಾಸಕರಾಗಿ ಆಯ್ಕೆಯಾದರು. ಇವರು ತತ್ವಜ್ಞಾನ ಕುರಿತು ದೇಶ ವಿದೇಶದ ಪತ್ರಿಕೆಗಳಿಗೆ ಲೇಖನ ಬರೆದರು. ದಿ ಫಿಲಾಸಫಿ ಆಫ್ ರವೀಂದ್ರನಾಥ ಠ್ಯಾಗೋರ ದಿ ರೀಜನ್ ಆಫ್ ರಿಲಿಜಿನ್ ಇನ್ ಕಾಂಟೆಂಪರರಿ ಫಿಲಾಸಫಿ ಮುಂತಾದ ಪುಸ್ತಕಗಳನ್ನು ಬರೆದಿರುವರು.

ಆಕ್ಸ ಫರ್ಡ್ ವಿಶ್ವವಿದ್ಯಾಲಯಕ್ಕೆ ಆ ದೇಶದವರ ಅಹ್ವಾನದ ಮೇರೆಗೆ ಹೋಗಿ ಧರ್ಮ ಮತ್ತು ನೀತಿಶಾಸ್ತ್ರದ ಮೇಲೆ ಉಪನ್ಯಾಸ ನೀಡಿದರು. ಭಾರತದ ಧರ್ಮವನ್ನು ಸಾಗರದ ಆಚೆಗೆ ಕೊಂಡೊಯ್ದವರು ವಿದೇಶಿಯರಿಗೆ ತಲುಪಿಸಿದರು.ಆಂಧ್ರ ಮತ್ತು ಬನಾರಸ್ ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿ ಸೇವೆ ಸಲ್ಲಿಸಿದರು. ತಮ್ಮ ಶಿಕ್ಷಕ ವೃತ್ತಿಯ ಅನುಭವಗಳನ್ನು ಬಳಸಿ ವಿ.ವಿ.ಗಳನ್ನು ಸರ್ವತೋಮುಖ ಅಭಿವೃದ್ದಿಗೊಳಿಸಿದರು. ಸೊವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡು ಸ್ಟ್ಯಾಲಿನ್ ರಂತಹ ಮೇಧಾವಿಗಳಿಗೆ ಸರಿಸಮಾನರಾಗಿದ್ದರು. 1952ರಲ್ಲಿ ಭಾರತದ ಉಪ ರಾಷ್ಟ್ರಪತಿಯಾದರು.

ಮುಂದೆ 1962 ರಲ್ಲಿ ರಾಷ್ಟ್ರಪತಿಗಳಾದರು. ಇದು ಶಿಕ್ಷಕರಾದವರು ಮೊದಲ ರಾಷ್ಟ್ರಪತಿಯಾದ ದಾಖಲೆಯಾಗಿತ್ತು.ಇವರು ಉಪ ರಾಷ್ಟ್ರಪತಿಗಳಾಗಿ ನೇಮಕವಾದಾಗ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿದ್ದರು. ಅವರ ಅಚ್ಚುಮೆಚ್ಚಿನ ಶಿಷ್ಯರು ಹೂವಿನ ಅಲಂಕಾರ ಮಾಡಿದ ಸಾರೋಟದಲ್ಲಿ ಶೃಂಗರಿಸಿ ವಿವಿಯಿಂದ ರೈಲ್ವೆನಿಲ್ದಾಣದವರೆಗೆ ರಾಧಾಕೃಷ್ಣನ್ನರವರನ್ನು ಸ್ವತಃ ವಿದ್ಯಾರ್ಥಿಗಳು ಹೆಗಲುಗೊಟ್ಟು ತಾವೇ ಎಳೆದುಕೊಂಡು ಹೊಗಿ ಬಿಳ್ಕೊಟ್ಟಿದ್ದರು.

ಇದು ಅವರ ಮೇಲಿನ ಅಪಾರ ಪ್ರೀತಿ ತೋರಿದ ರೀತಿ. ಗುರ-ಶಿಷ್ಯರ ಬಾಂಧವ್ಯಕ್ಕೆ ನಿದರ್ಶನ, ಎಲ್ಲ ಭಾರತೀಯರ ಮನದಲ್ಲಿ ಇಂದಿಗು ಮಾಸದೆ ಅಚ್ಚಳಿಯದೆ ಉಳಿದಿದೆ. ಇವರು ರಾಷ್ಟ್ರಪತಿಗಳಾಗಿ ರಾಜ್ಯಸಭೆಯಲ್ಲಿ ಸಂಸ್ಕøತದಲ್ಲಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದರು.

ಹೀಗೆ ಒಬ್ಬ ಒಬ್ಬ ಶಿಕ್ಷಕರಾಗಿ. ಶಿಕ್ಷಣ ತಜ್ಞರಾಗಿ ಭಾರತದ ಉಪರಾಷ್ಟ್ರಪತಿ, ರಾಷ್ಟ್ರಪತಿಗಳಾಗಿ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಅಚ್ಚಳಿಯದಂತೆ ಉಳಿಸಿದವರು ಡಾ ರಾಧಾಕೃಷ್ಣನ್ ರವರು ಅದಕ್ಕಾಗಿಯೇ ಅಮೇರಿಕದಲ್ಲಿ ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿರುವರು.

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬ್ರಿಟನ್ ಆಕ್ಸಫರ್ಡ್ ವಿಶ್ವವಿದ್ಯಾನಿಲಯ. ಅಮೇರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯ. ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವವು. ಒಟ್ಟಾರೆ ನಮ್ಮ ದೇಶದ ಸರ್ವತೊಮುಖ ಏಳ್ಗೆಗಾಗಿ ಶ್ರಮಿಸಿದ, ಇವರ ಹುಟ್ಟಿದ ದಿನವನ್ನು 1962 ರಿಂದ ಸೆಪ್ಟಂಬರ 5 ನೇ ದಿನವನ್ನು ಶಿಕ್ಷಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ಅವರ ಹಿತ ನುಡಿಗಳು: ವಿದ್ಯೆಯ ಗುರಿ ಸಂಪಾದನೆಯಲ್ಲ. ವಿದ್ಯೆಯು ವಿವೇಚನೆಯನ್ನು ಒದಗಿಸುವಂತಾಗಬೇಕು. ಅನ್ನ ಹಸಿವನ್ನು ನಿಗಿಸುತ್ತದೆ. ಅಕ್ಷರ ಜ್ಞಾನ ಅಜ್ಞಾನವನ್ನು ತೊಲಗಿಸುತ್ತದೆ ನಿನ್ನ ಪ್ರವರ್ತನೆ ಹತ್ತು ಮಂದಿಗೆ ಮಾರ್ಗದರ್ಶನ ನೀಡುವಂತಿರಬೇಕು. ಹತ್ತು ಮಂದಿ ವಿಮರ್ಶಿಸುವಂತೆ ಇರಬಾರದು. ಬದಲಾಯಿಸಲಾಗದ ಭೂತಕಾಲದ ಬಗ್ಗೆ ಯೋಚಿಸದೆ, ಕೈಯಲ್ಲಿರುವ ಭವಿಷ್ಯಕ್ಕಾಗಿ ಶ್ರಮಿಸು. ದುಃಖವನ್ನು ಮರೆಸುವ ದಿವ್ಯ ಔಷಧ.. ಕೆಲಸದಲ್ಲಿ ನಿಮಗ್ನತೆಗೊಳ್ಳುವುದು. ಜೀವನದಲ್ಲಿ ಕೋಟಿ ಸಂಪಾದಿಸಿದರು ಸಿಗದ ಆನಂದ.

ಒಳ್ಳೆಯ ಮಿತ್ರನು ಸಿಕ್ಕಾಗ ಮಾತ್ರ ದೊರೆಯಲು ಸಾಧ್ಯ. ಇರುವೆಯನು ಕಂಡು ಕ್ರಮ ಶಿಕ್ಷಣ ಕಲಿ, ಭೂಮಿಯನ್ನು ಕಂಡು ಸಹಿಷ್ಣತೆ ಕಲಿ. ಮರವನ್ನು ಕಂಡು ಬೆಳೆಯುವುದನ್ನು ಕಲಿ. ಶಿಕ್ಷಕರನ್ನು ಕಂಡು ಉತ್ತಮ ಗುಣ ಕಲಿ. ಹೀಗೆ ತಮ್ಮ ಅಪಾರವಾದ ಅನುಭವದ ಮುಖಾಂತರ ತತ್ವಜ್ಞಾನವನ್ನು ಹಿತ ನುಡಿಗಳ ಮೂಲಕ ತಿಳಿಸಿರುವರು.

ಶಿಕ್ಷರಾದವರು ರಾಧಾಕೃಷ್ಣನ್ ರವರ ಜೀವನ ಸಾಧನೆ ಅರಿತು ಗುರು ಬ್ರಹ್ಮ ಎಂಬುದನ್ನು ಅರಿತು ಉತ್ತಮ ಜ್ಞಾನವನ್ನು, ಗುಣಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಒಳ್ಳೆಯ ಜೀವನಕ್ಕೆ ಮಾರ್ಗದರ್ಶಕರಾಗೋಣ. ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯೋಣ.

#ಶರಣಪ್ಪ ಕೆ.ಹೂಲಗೇರಿ, ಉಪನ್ಯಾಸಕರು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ