Breaking News
Home / ಜಿಲ್ಲೆ / ಬೆಂಗಳೂರು / ಸಿ.ಟಿ.ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ..?!

ಸಿ.ಟಿ.ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ..?!

Spread the love

ಬೆಂಗಳೂರು,ಡಿ.8- ಮುಂಬರುವ 2023ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಬಿಜೆಪಿ ವರಿಷ್ಠರು ಹಾಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದಾರೆ.

ಹಾಲಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರನ್ನು ಶೀಘ್ರದಲ್ಲಿ ಬದಲಾಯಿಸಿ ತೆರವಾಗಲಿರುವ ಈ ಸ್ಥಾನಕ್ಕೆ ಆರ್ ಎಸ್ ಎಸ್ ಹಾಗೂ ಸಂಘಪರಿವಾರದ ಹಿನ್ನೆಲೆಯ ರವಿ ಅವರಿಗೆ ಪಟ್ಟ ಕಟ್ಟಲು ದೆಹಲಿ ನಾಯಕರು ತೀರ್ಮಾನಿಸಿದ್ದಾರೆ.

ಒಂದು ಕಡೆ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿರುವ ವೀರಶೈವ – ಲಿಂಗಾಯತ, ಮತಗಳು, ಮತ್ತೊಂದು ಕಡೆ ರಾಜ್ಯದ ಎರಡನೇ ಅತಿ ದೊಡ್ಡ ಸಮುದಾಯವಾಗಿರುವ ಒಕ್ಕಲಿಗರು, ಹಿಂದುಳಿದಿರುವ ವರ್ಗ ಮತ್ತು ದಲಿತ ಸಮುದಾಯವನ್ನು ಓಲೈಸಿಕೊಂಡು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಲೆಕ್ಕಾಚಾರವನ್ನು ರೂಪಿಸಲಾಗಿದೆ.

ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೂ ಅದೇ ಸಮುದಾಯಕ್ಕೆ ಸೇರಿದ ಬಸವರಾಜ ಬೊಮ್ಮಯಿ ಅವರನ್ನು ಮುಖ್ಯಮಂತ್ರಿ ಮಾಡಿರುವ ಕಾರಣ ಸದ್ಯಕ್ಕೆ ಆ ಸಮುದಾಯದ ಮತಗಳು ಬಿಜೆಪಿಯಿಂದ ದೂರ ಸರಿಯುವ ಆತಂಕ ಪಕ್ಷಕ್ಕಿಲ್ಲ.

ಹಿಂದಿನ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದರೆ, ಒಕ್ಕಲಿಗರು ಈಗ ಮೊದಲಿನಂತೆ ಜೆಡಿಎಸ್ ಬೆಂಬಲಕ್ಕಿಲ್ಲ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರೇ ನಿರ್ಣಾಯಕವಾಗಿರುವ ಕಾರಣ ಮೈಸೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ,ತುಮಕೂರು ರಾಮನಗರ ಸೇರಿದಂತೆ ಮತ್ತಿತರ ಕಡೆ ಒಕ್ಕಲಿಗರನ್ನು ಓಲೈಸಲು ಅದೇ ಸಮುದಾಯದ ಸಿ.ಟಿ.ರವಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚಿಂತನೆ ನಡೆದಿದೆ.

ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿರುವ ರವಿ ಅವರು, ಪಕ್ಷ ನಿಷ್ಠೆ ಮತ್ತು ತತ್ವ ಸಿದ್ದಾಂತಗಳಿಂದ ಎಂದೂ ವಿಮುಖರಾದವರಲ್ಲ. ಗೋವಾ, ತಮಿಳುನಾಡು, ಮಹಾರಾಷ್ಟ್ರದ ಉಸ್ತುವಾರಿಯಾಗಿ ಕೆಲಸ ಮಾಡುತ್ತಿರುವ ಅವರು ಸಂಘ ಪರಿವಾರ ಮತ್ತು ಆರ್‍ಎಸ್‍ಎಸ್‍ಗೂ ಅಚ್ಚುಮೆಚ್ಚು.

ಬದಲಾವಣೆ ಏಕೆ?:
ಪ್ರಸ್ತುತ ನಳೀನ್‍ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಂಘಟನೆಯಾಗಿಲ್ಲ ಎಂಬ ಅಸಮಾಧಾನ ಕೇಳಿಬರುತ್ತಿದೆ. ರಾಜ್ಯಾಧ್ಯಕ್ಷರಾಗಿದ್ದರೂ ಈಗಲೂ ಕೂಡ ಅವರು ಕರಾವಳಿ ಜಿಲ್ಲೆಗೆ ಸೀಮಿತರಾಗಿದ್ದಾರೆ. ರಾಜ್ಯಾದ್ಯಂತ ಕಾರ್ಯಕರ್ತರನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಅಸಮಾಧಾನ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

ದತ್ತಪೀಠದ ವಿವಾದದಿಂದ ಮುನ್ನಲೆಗೆ ಬಂದಿರುವ ಸಿ.ಟಿ.ರವಿ ರಾಜ್ಯಾದ್ಯಂತ ಚಿರಪರಿಚಿತರು. ಈ ಹಿಂದೆ 2008ರಲ್ಲಿ ಸಚಿವರಾಗುವ ಮುನ್ನವೇ ಅವರ ಹೆಸರು ರಾಜ್ಯಾದ್ಯಂತ ಚಿರಪರಿಚಿತವಾಗಿತ್ತು. ಪ್ರಧಾನ ಕಾರ್ಯದರ್ಶಿಯಾಗಿದ್ದರೂ ರಾಜ್ಯದ ಮೇಲೆ ಅವರಿಗೆ ಪ್ರೀತಿ ಬಿಟ್ಟುಹೋಗಿಲ್ಲ.

ಒಂದು ಕಡೆ ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಸಿದ್ದರಾಮಯ್ಯ, ಜೆಡಿಎಸ್ ಒಕ್ಕಲಿಗರನ್ನೇ ನಂಬಿಕೊಂಡು ಮುನ್ನುಗ್ಗುತ್ತಿರುವಾಗ ಬಿಜೆಪಿ ಎಲ್ಲ ಸಮುದಾಯಗಳ ಮತ ಸೆಳೆಯಲು ವಿಶೇಷ ತಂತ್ರ ಹೆಣೆದಿದೆ.

ಯಡಿಯೂರಪ್ಪ , ಬೊಮ್ಮಾಯಿ- ವೀರಶೈವ ಮತಗಳು, ನಾರಾಯಣಸ್ವಾಮಿ, ಗೋವಿಂದ ಕಾರಜೋಳ- ದಲಿತ ಮತಗಳು, ಶ್ರೀರಾಮುಲು- ಹಿಂದುಳಿದ ಮತಗಳು, ರಮೇಶ್ ಜಾರಕಿ ಹೊಳಿ- ವಾಲ್ಮೀಕಿ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

ಸಿ.ಟಿ.ರವಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ಮುಖಂಡರಾದ ಆರ್.ಅಶೋಕ್, ಅಶ್ವಥ್ ನಾರಾಯಣ, ಡಾ.ಕೆ.ಸುಧಾಕರ್ ಮೂಲಕ ಒಕ್ಕಲಿಗರನ್ನು ಸೆಳೆಯಲು ಬಿಜೆಪಿ ವರಿಷ್ಠರು ತಂತ್ರ ರೂಪಿಸಿದ್ದಾರೆ.

ಒಂದೆರಡು ತಿಂಗಳಲ್ಲಿ ಪ್ರಕ್ರಿಯೆ ಮುಗಿಯಲಿದ್ದು, ರಾಜ್ಯದ ನೂತನ ಬಿಜೆಪಿ ಅಧ್ಯಕ್ಷರಾಗಿ ಸಿ.ಟಿ.ರವಿ ಅಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತ.
2023ರ ವಿಧಾನಸಭೆ ಚುನಾವಣೆಯನ್ನು ಯಡಿಯೂರಪ್ಪ, ಬೊಮ್ಮಾಯಿ, ಸಿ.ಟಿ.ರವಿ ಮುಖಂಡತ್ವದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಬೆಳಗಾವಿ: ಡಿಸಿಪಿ ಹೆಸರಲ್ಲೇ ನಕಲಿ ಫೇಸ್‌ಬುಕ್‌ ಖಾತೆ

Spread the love ಬೆಳಗಾವಿ: ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ ಅವರ ಹೆಸರಲ್ಲಿ ನಕಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ