Breaking News
Home / ಜಿಲ್ಲೆ / ಬೆಳಗಾವಿ / ಹೆಬ್ಬಾಳ್ಕರ್-ಜಾರಕಿಹೊಳಿ ಕುಟುಂಬಕ್ಕೆ ಪ್ರತಿಷ್ಠೆಯಾದ ಪರಿಷತ್ ಚುನಾವಣೆ

ಹೆಬ್ಬಾಳ್ಕರ್-ಜಾರಕಿಹೊಳಿ ಕುಟುಂಬಕ್ಕೆ ಪ್ರತಿಷ್ಠೆಯಾದ ಪರಿಷತ್ ಚುನಾವಣೆ

Spread the love

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಜಿಲ್ಲಾ ರಾಜಕಾರಣದ ಕಡು ವೈರಿಗಳೆಂದೇ ಬಿಂಬಿತರಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಮತ್ತೊಂದು ಸೆಣಸಾಟಕ್ಕೆ ಪರಿಷತ್ ಚುನಾವಣೆ ಕಣ ವೇದಿಕೆಯಾಗಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಕಾಂಗ್ರೆಸ್ ‌ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸಹೋದರ ಲಖನ್ ಜಾರಕಿಹೊಳಿ‌ ಪಕ್ಷೇತರ ಅಭ್ಯರ್ಥಿ ಆಗಿ ಕಣದಲ್ಲಿದ್ದಾರೆ. ತಮ್ಮ ಸಹೋದರರನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಇಬ್ಬರು ನಾಯಕರು ಈ ಚುನಾವಣೆಯನ್ನು ಪ್ರತಿಷ್ಠೆ ಆಗಿ ತೆಗೆದುಕೊಂಡಿದ್ದಾರೆ.

ಅಂದು ಆಪ್ತರಾಗಿದ್ದವರು ಇಂದು ಹಾವು ಮುಂಗುಸಿ:

ರಮೇಶ್ ಜಾರಕಿಹೊಳಿ‌- ಲಕ್ಷ್ಮಿ ಹೆಬ್ಬಾಳ್ಕರ್ ಒಂದು ಕಾಲದಲ್ಲಿ ಅತ್ಯಾಪ್ತರಾಗಿದ್ದರು. ಎರಡೂವರೆ ವರ್ಷಗಳ ಹಿಂದೆ ನಡೆದ ಸ್ಥಳೀಯ ಪಿಎಲ್​​ಡಿ ಬ್ಯಾಂಕ್ ಚುನಾವಣೆಯನ್ನು ಉಭಯ ನಾಯಕರು ಪ್ರತಿಷ್ಠೆ ಆಗಿ ತೆಗೆದುಕೊಂಡರು. ಈ ಚುನಾವಣೆಯೇ ಇಬ್ಬರೂ ನಾಯಕರ ಮಧ್ಯೆ ಬಿರುಕಿಗೆ ಕಾರಣವಾಯಿತು. ಅಲ್ಲದೇ ಮೈತ್ರಿ ಸರ್ಕಾರ ಪತನಕ್ಕೆ ಈ ಚುನಾವಣೆಯೇ ಕಾರಣ ಎಂಬುದು ಸುಳ್ಳಲ್ಲ. ನಂತರ ನಡೆದ ರಾಜಕೀಯ ಬೆಳವಣಿಗೆಯಿಂದ ರಮೇಶ್ ಕಾಂಗ್ರೆಸ್​​ಗೆ ರಾಜೀನಾಮೆ ನೀಡಿ ಬಳಿಕ ಬಿಜೆಪಿ ಸೇರಿ ಸಚಿವರೂ ಆಗಿದ್ದರು. ಪಿಎಲ್​​ಡಿ ಬ್ಯಾಂಕ್ ಚುನಾವಣೆ ಬಳಿಕ ಉಭಯ ನಾಯಕರ ಮಧ್ಯೆ ಮತ್ತೊಂದು ಸೆಣಸಾಟಕ್ಕೆ ಪರಿಷತ್ ಚುನಾವಣೆ ವೇದಿಕೆ ಆಗಿದೆ.

ರಮೇಶ್ ಅವರ ಎದುರಿವೆ ಎರಡು ಟಾಸ್ಕ್:

ರಮೇಶ್ ಜಾರಕಿಹೊಳಿ‌ ಸದ್ಯ ಬಿಜೆಪಿಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಜೊತೆಗೆ ಸಹೋದರ ಲಖನ್ ರನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. ಈ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸುವುದೇ ನನ್ನ ಗುರಿ ಎಂದು ರಮೇಶ್ ಬಹಿರಂಗ ಹೇಳಿಕೆ ನೀಡಿದ್ದಾರೆ.

ಆದರೆ ಲಖನ್​​ಗೆ ರಮೇಶ್​​ ಜಾರಕಿಹೊಳಿ ಅವರ ಪರೋಕ್ಷ ಬೆಂಬಲ ಇರುವ ಸಂಗತಿಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಲಖನ್ ಯಾರ ಮತ ಯಾಚಿಸಲಿದ್ದಾರೆ ಎಂಬುದೇ ಕುತೂಹಲ ಮೂಡಿಸಿದೆ. ಬಿಜೆಪಿಗೆ ಬರಬೇಕಾದ ಮೊದಲ ಪ್ರಾಶಸ್ತ್ಯದ ಮತಗಳನ್ನು ಲಖನ್ ಪಡೆದರೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮುಳುವಾಗಲಿದೆ. ಹೀಗಾಗಿ ಲಖನ್ ಸ್ಪರ್ಧೆ ಬಿಜೆಪಿ ನಾಯಕರ ಆತಂಕಕ್ಕೂ ಕಾರಣವಾಗಿದೆ.

ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜೊತೆಗೆ ಜಿಲ್ಲೆಯ ಇಬ್ಬರು ಸಚಿವರಾದ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆಗೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ. ಆದರೆ ಲಖನ್ ಜಾರಕಿಹೊಳಿ‌ ಸ್ಪರ್ಧೆಯಿಂದ ಬಿಜೆಪಿ ಮತಗಳು ವಿಭಜನೆಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದನ್ನು ತಡೆಯಲು ಬಿಜೆಪಿ ಹೈಕಮಾಂಡ್ ಯಾವ ತಂತ್ರ ರೂಪಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಗೆಲ್ಲಿಸುವುದು ಸತೀಶ್ ಜಾರಕಿಹೊಳಿ‌ಗೂ ಅನಿವಾರ್ಯ:

ಲೋಕಸಭೆ ಉಪಚುನಾವಣೆಯಲ್ಲಿ ಸತೀಶ್ ಸೋಲಿಗೆ ರಮೇಶ್ ‌ಜಾರಕಿಹೊಳಿ, ಲಖನ್ ಜಾರಕಿಹೊಳಿ‌ಯೇ ಕಾರಣ‌ ಎಂಬ ಆರೋಪವನ್ನು ಸ್ವತಃ ಸತೀಶ್ ರಿವೀಲ್ ಮಾಡಿದ್ದು, ಸೋಲಿನ ನೋವು ನಮ್ಮ ಕಾರ್ಯಕರ್ತರಲ್ಲಿದೆ ಎಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಕಾರಣಕ್ಕೆ ಸತೀಶ್ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಗೆಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸತೀಶ್ ಜಾರಕಿಹೊಳಿ ಕೂಡ ಪ್ರತಿ ತಾಲೂಕಿನಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ಚನ್ನರಾಜ್ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಚನ್ನರಾಜ್ ಬೆನ್ನಿಗೆ ಕಾಂಗ್ರೆಸ್ ನಾಯಕರ ಜೊತೆಗೆ ಮಾಜಿ ಸಚಿವರಾದ ಪ್ರಕಾಶ ಹುಕ್ಕೇರಿ, ಎಂ.ಬಿ ಪಾಟೀಲ ಕೂಡ ಟೊಂಕ ಕಟ್ಟಿ ನಿಂತಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ತಮ್ಮನ ಗೆಲುವಿಗಾಗಿ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ