Breaking News
Home / ಜಿಲ್ಲೆ / ಬೆಂಗಳೂರು / ಬೆಂಕಿ ಅವಘಡ: ಪ್ರಾಣ ಉಳಿಸುವಂತೆ ಅಳಿಯನ ಬಳಿ ಅಂಗಲಾಚಿದ್ದ ಮೃತ ಮಹಿಳೆ

ಬೆಂಕಿ ಅವಘಡ: ಪ್ರಾಣ ಉಳಿಸುವಂತೆ ಅಳಿಯನ ಬಳಿ ಅಂಗಲಾಚಿದ್ದ ಮೃತ ಮಹಿಳೆ

Spread the love

ಬೆಂಗಳೂರು: ‘ಕೊಠಡಿಯಲ್ಲಿ ಬೆಂಕಿ ಬಿದ್ದಿದೆ. ಬೇಗ ಬಂದು ಕಾಪಾಡಪ್ಪ. ಬೇಗ ಬಾ…’

ದೇವರಚಿಕ್ಕನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮಂಗಳವಾರ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಸಜೀವ ದಹನವಾದ ಭಾಗ್ಯರೇಖಾ ಅವರು ತಮ್ಮ ಅಳಿಯ ಸಂದೀಪ್‌ ಬಳಿ ರಕ್ಷಣೆಗಾಗಿ ಅಂಗಲಾಚಿದ್ದ ಪರಿ ಇದು.

ಸಂದೀಪ್‌-ಪ್ರೀತಿ ದಂಪತಿ ಪ್ರೀತಿಯ ಅವರ ತಾಯಿ ಭಾಗ್ಯರೇಖಾ ವಾಸವಿದ್ದ ಫ್ಲ್ಯಾಟ್‌ನ ಪಕ್ಕದಲ್ಲೇ (ಫ್ಲ್ಯಾಟ್‌ ನಂಬರ್‌ 211) ನೆಲೆಸಿದ್ದರು. ಅತ್ತೆ ಕರೆ ಮಾಡಿ ಹೇಳಿದ ಬಳಿಕವಷ್ಟೇ ಸಂದೀಪ್‌ಗೆ ಅಗ್ನಿ ಅವಘಡದ ವಿಷಯ ಗೊತ್ತಾಗಿತ್ತು.

‘ಸಂಜೆಯ ಹೊತ್ತಿನಲ್ಲಿ ಅತ್ತೆಯ ಕರೆ ಬಂತು. ಅದನ್ನು ಸ್ವೀಕರಿಸಿದ ಕೂಡಲೇ ಅತ್ತೆ ಅಳುತ್ತಿರುವುದು ಕೇಳಿಸಿತು. ಏನಾಯ್ತು ಎಂದು ಕೇಳಿದಾಗ, ಹಾಲ್‌ನಲ್ಲಿ ಬೆಂಕಿ ಬಿದ್ದಿದೆ ಬೇಗ ಬಾರಪ್ಪ… ಎನ್ನುತ್ತಾ ಮತ್ತೆ ಅಳುವುದಕ್ಕೆ ಶುರುಮಾಡಿದರು. ಮೊಬೈಲ್‌ನಲ್ಲಿ ಮಾತನಾಡುತ್ತಲೇ ಅವರಿದ್ದ ಫ್ಲ್ಯಾಟ್‌ನತ್ತ ಓಡಿದೆ. ಬಾಗಿಲು ತೆರೆಯುವಂತೆ ಹೇಳಿದೆ. ಬೆಂಕಿ ಆವರಿಸಿಕೊಂಡಿದೆ ಬಾಗಿಲ ಬಳಿ ಬರಲೂ ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು. ಹೀಗಾಗಿ ಬಾಲ್ಕನಿಯತ್ತ ತೆರಳುವಂತೆ ಸೂಚಿಸಿದ್ದೆ’ ಎಂದು ಸಂದೀಪ್‌ ಹೇಳಿದರು.

‘ನಾವು ಬಾಗಿಲು ತೆರೆದ ಕೂಡಲೇ ಬೆಂಕಿಯ ಜ್ವಾಲೆ ನಮ್ಮತ್ತ ನುಗ್ಗಿತು. ಅದರಿಂದ ಮಾವ ಭೀಮಸೇನ್‌ ಅವರ ತಲೆಗೆ ಸುಟ್ಟ ಗಾಯಗಳಾದವು. ಕೊಠಡಿಯ ತುಂಬಾ ಬೆಂಕಿಯ ಕೆನ್ನಾಲಗೆ ಆವರಿಸಿತ್ತು. ಒಳಗೆ ಏನೂ ಕಾಣುತ್ತಿರಲಿಲ್ಲ. ಕೊನೆಯ ಕ್ಷಣದವರೆಗೂ ಅವರು ರಕ್ಷಣೆಗಾಗಿ ಕೋರಿದರು. ಹೀಗಿದ್ದರೂ ಜೀವ ಉಳಿಸಲು ಆಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಗಳನ್ನು ನೋಡಲು ಬಂದಿದ್ದ ವೃದ್ಧೆ: ಭಾಗ್ಯರೇಖಾ ಅವರ ತಾಯಿ ಲಕ್ಷ್ಮಿದೇವಿ (82 ವರ್ಷ) ಅವರು ಮಗನ ಜೊತೆ ಉತ್ತರಹಳ್ಳಿಯಲ್ಲಿ ವಾಸವಿದ್ದರು. ಮಗಳು ಅಮೆರಿಕದಿಂದ ಮರಳಿರುವ ವಿಷಯ ತಿಳಿದು ಆಕೆಯ ಯೋಗಕ್ಷೇಮ ವಿಚಾರಿಸಲೆಂದು ಮನೆಗೆ ಬಂದಿದ್ದರು.

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ತಾಯಿ-ಮಗಳು ಸಜೀವ ದಹನ

‘ಹೊಗೆಯ ವಾಸನೆ ಬಂದಿದ್ದರಿಂದ ನಾವೆಲ್ಲಾ ಮನೆಯ ಹೊರಗೆ ಬಂದು ನೋಡಿದೆವು. ಅದಾಗಲೇ ಬೆಂಕಿ ಹೊತ್ತಿ ಉರಿಯುತ್ತಿತ್ತು. ಬಾಲ್ಕನಿಗೆ ಕಬ್ಬಿಣದ ಗ್ರಿಲ್‌ ಅಳವಡಿಸದೆ ಹೋಗಿದ್ದರೆ ಮೇಲಿಂದ ಜಿಗಿದು ಜೀವ ಉಳಿಸಿಕೊಳ್ಳಬಹುದಿತ್ತು. ಆ ಮಹಿಳೆ ಕಾಪಾಡಿ, ಕಾಪಾಡಿ… ಎಂದು ಚೀರಾಡುತ್ತಿದ್ದರು. ಅವರ ಆಕ್ರಂದನ ಕೇಳಿ ದುಃಖ ಉಮ್ಮಳಿಸಿ ಬರುತ್ತಿತ್ತು. ಆ ದೃಶ್ಯವನ್ನು ನಾವೆಲ್ಲಾ ಅಸಹಾಯಕರಾಗಿ ನೋಡಬೇಕಾಯಿತು. ಆ ಸ್ಥಿತಿಯಲ್ಲಿ ಅವರನ್ನು ಕಾಪಾಡುವುದು ಸಾಧ್ಯವೇ ಇರಲಿಲ್ಲ’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ಮೊಬೈಲ್‌ನಲ್ಲಿ ಮಾತನಾಡುತ್ತಲೇ ಬೆಂಕಿಗಾಹುತಿ’
‘ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಯರ್‌ಗಳು ಸುಟ್ಟ ವಾಸನೆ ಬಂತು. ಬಾಲ್ಕನಿಗೆ ಬಂದು ನೋಡಿದಾಗ ಪಕ್ಕದ ಆಶ್ರಿತ್‌ ವಸತಿ ಸಮುಚ್ಚಯದ ಫ್ಲ್ಯಾಟ್‌ವೊಂದರಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಎರಡು ಬಾಲ್ಕನಿಗಳಲ್ಲಿ ನಿಂತಿದ್ದ ಮಹಿಳೆಯರು ನೆರವಿಗಾಗಿ ಅಂಗಲಾಚುತ್ತಿದ್ದರು. ನೋಡು ನೋಡುತ್ತಿದ್ದಂತೆಯೇ ವೃದ್ಧೆ ಬೆಂಕಿಗೆ ಆಹುತಿಯಾದರು. ಮತ್ತೊಬ್ಬ ಮಹಿಳೆ ಮೊಬೈಲ್‌ನಲ್ಲಿ ಸುಮಾರು 15 ನಿಮಿಷ ಮಾತನಾಡುತ್ತಲೇ ಇದ್ದರು’ ಎಂದು ಸ್ಥಳೀಯರಾದ ಮಂಜು ರಾಜ್‌ ತಿಳಿಸಿದರು.

‘ಮೂರನೇ ಮಹಡಿಯಲ್ಲಿದ್ದ ಅವರನ್ನು ಕಾಪಾಡುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ. ಗ್ರಿಲ್‌ ಅಳವಡಿಸಿದ್ದರಿಂದ ಮನೆಯೊಳಗೆ ಪ್ರವೇಶಿಸುವುದೂ ಅಸಾಧ್ಯವಾಗಿತ್ತು. ಮಹಿಳೆಯರಿಬ್ಬರೂ ಮೃತಪಟ್ಟ 20 ನಿಮಿಷದ ಬಳಿಕ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದಿತು’ ಎಂದರು.

 

Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ