Breaking News
Home / ರಾಜಕೀಯ / ಯುವ ವಕೀಲರಿಗೆ ಮೋಹನ್ ಶಾಂತನಗೌಡರ್ ಸ್ಫೂರ್ತಿ : ಸಿಎಂ ಬೊಮ್ಮಾಯಿ

ಯುವ ವಕೀಲರಿಗೆ ಮೋಹನ್ ಶಾಂತನಗೌಡರ್ ಸ್ಫೂರ್ತಿ : ಸಿಎಂ ಬೊಮ್ಮಾಯಿ

Spread the love

ಬೆಂಗಳೂರು,ಸೆ.18- ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಮೋಹನ್ ಶಾಂತನಗೌಡರ್ ಸಾಧನೆ ಯಾವಾಗಲೂ ಶಾಶ್ವತವಾಗಿದ್ದು, ಯುವ ವಕೀಲರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಮ್ಮಿಕೊಂಡಿದ್ದ ನ್ಯಾಯಮೂರ್ತಿ ಶ್ರೀ ಮೋಹನ್ ಶಾಂತನಗೌಡರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಳಹಂತದಿಂದ ಬಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಕ್ಕೇರಿದರೂ ಮೋಹನ್ ಶಾಂತನಗೌಡರ್ ಎಂದಿಗೂ ಹಮ್ಮುಬಿಮ್ಮು ತೋರಿದವರಲ್ಲ. ಯಾವಾಗಲೂ ಸಾಮಾನ್ಯರಂತೆ ಇರುತ್ತಿದ್ದರು. ಅವರು ಎಷ್ಟೇ ಸಾಧನೆ ಮಾಡಿದರೂ ಸ್ಥಿತ ಪ್ರಜ್ಞರಾಗೇ ಇರುತ್ತಿದ್ದರು. ಹೀಗಾಗಿ ನಮ್ಮೆಲ್ಲರಿಗೂ ಅವರು ಆದರ್ಶನೀಯರು ಎಂದು ಸ್ಮರಿಸಿದರು.

ಸಾಧಕನಿಗೆ ಸಾವು ಎಂದಿಗೂ ಅಂತ್ಯವಿಲ್ಲ. ಮೋಹನ್ ಶಾಂತನಗೌಡರ್ ಸಾವನ್ನೂ ಮೀರಿದ ಸಾಧಕರಾಗಿದ್ದರು. ಹೀಗಾಗಿ ಅವರ ಸಾಧನೆ ಸದಾ ಜೀವಂತವಾಗಿರುತ್ತದೆ. ಅವರ ಮಾರ್ಗದರ್ಶನಗಳೇ ಯುವ ವಕೀಲರಿಗೆ ಆದರ್ಶ ಎಂದು ಹೇಳಿದರು.ಮೋಹನ್ ಶಾಂತನಗೌಡರ್ ಅವರ ಶ್ರದ್ದಾಂಜಲಿ ಮಾಡುವಂತಹ ಕಾರ್ಯಕ್ರಮ ಬರುತ್ತದೆ ಎಂದು ನಾನು ಎಂದಿಗೂ ಕೂಡ ಊಹೆ ಮಾಡಿರಲಿಲ್ಲ. ಅವರು ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರ ಒಡನಾಡಿಯಾಗಿದ್ದರು. ದೆಹಲಿಗೆ ಹೋದಾಗ ಇಲ್ಲವೇ ಹುಬ್ಬಳ್ಳಿಗೆ ಬಂದಾಗ ನಮ್ಮ ಮನೆಗೆ ಬಂದು ಜೋಳದ ರೊಟ್ಟಿ ತಿನ್ನುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.

ಬಹಳ ದೊಡ್ಡ ಹುದ್ದೆ ತಲುಪಿದರೂ ಅವರ ವ್ಯಕ್ತಿತ್ವದಲ್ಲಿ ಎಂದಿಗೂ ಬದಲಾವಣೆಯಾಗಿರಲಿಲ್ಲ. ಅವರ ಸರಳತೆ ನಮಗೆ ಎಂದೆಂದಿಗೂ ಅನುಕರಣೀಯ. ಅವರಿಂದ ಕಲಿಯಬೇಕಾದದ್ದು ಬಹಳಷ್ಟಿತ್ತು. ಆದರೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆಂದು ಭಾವಿಸಿರಲಿಲ್ಲ ಎಂದು ಸಿಎಂ ಭಾವುಕರಾದರು. ಅವರು ಜನಸಾಮಾನ್ಯರ ನ್ಯಾಯಾಧೀಶರಾಗಿಯೇ ಸೇವೆಯಲ್ಲಿ ಇರುವವರೆಗೂ ಕೆಲಸ ಮಾಡಿದರು. ಅವರು ಕೊಡುತ್ತಿದ್ದ ತೀರ್ಪುಗಳು, ನ್ಯಾಯದ ಪರವಾಗಿ, ಜನಸಾಮಾನ್ಯರ ಪರವಾಗಿ ಇರುತ್ತಿದ್ದವು ಎಂದು ಹೇಳಿದರು.

ಧೀಮಂತ ವ್ಯಕ್ತಿತ್ವ ಮತ್ತು ಅದ್ಭುತವಾದ ಜ್ಞಾನ ಸಂಪತ್ತನ್ನು ಹೊಂದಿದ್ದರು. ನ್ಯಾಯಾಂಗದಲ್ಲಿದ್ದರೂ ರಾಜಕೀಯ ಸಂಬಂಧ ಕೂಡ ಇತ್ತು. ಧಾರವಾಡದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದಾಗ ನಮ್ಮ ತಂದೆಯನ್ನು ನೋಡಲು ಬರುತ್ತಿದ್ದರು ಎಂದರು. ಹಳ್ಳಿಗಾಡಿನಿಂದ ಬಂದರೂ ತಾವು ಉನ್ನತ ಹುದ್ದೆಯಲ್ಲಿದ್ದರೂ ಬದಲಾಗಲಿಲ್ಲ. ನಮ್ಮ ಜೋಳದ ರೊಟ್ಟಿ ತಿನ್ನುತ್ತಿದ್ದವರೆಲ್ಲ ದೆಹಲಿಗೆ ಹೋದಾಗ ಆಲೂಬಜ್ಜಿ ತಿನ್ನಬೇಕಾದ ಪರಿಸ್ಥಿತಿ ಬರುತ್ತಿತ್ತು. ನೀವು ದೆಹಲಿಗೆ ರೊಟ್ಟಿ ಕಟ್ಟಿಕೊಂಡು ಹೋಗುತ್ತಿದ್ರ ಎಂದು ಅವರನ್ನು ನಾವೆಲ್ಲ ಕೇಳುತ್ತಿದ್ದೆವು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ವಿ.ರಮಣ ಅವರು ಮಾತನಾಡಿ, ಮೋಹನ್ ಶಾಂತನಗೌಡರ್ ಅವರ ಸರಳತೆ, ಸಾಮಾನ್ಯ ಜನರೊಂದಿಗೆ ಅವರು ಬೆರೆಯುವ ರೀತಿ, ನ್ಯಾಯದ ಪರವಾಗಿ ಯಾವಾಗಲೂ ಮಿಡಿಯುತ್ತಿದ್ದ ರೀತಿ ಆದರ್ಶನೀಯ ಎಂದರು. ಅವರನ್ನು ಕಳೆದುಕೊಂಡು ನ್ಯಾಯಾಂಗದ ವ್ಯವಸ್ಥೆಗೆ ದೊಡ್ಡ ನಷ್ಟವಾಗಿದೆ. ವ್ಯಕ್ತಿ ಎಷ್ಟೇ ಉನ್ನತ ಹುದ್ದೆಗೆ ಹೋದರೂ ನಾವು ಬೆಳೆದು ಬಂದ ಹಾದಿಯನ್ನು ಮರೆಯಬಾರದೆಂದು ನಮಗೆಲ್ಲ ಹೇಳುತ್ತಿದ್ದರು ಎಂದು ಸ್ಮರಿಸಿದರು.

ಶಾಂತನಗೌಡರ್ ಬೆಳೆದುಬಂದ ಹಾದಿಯನ್ನು ಸ್ಮರಿಸಿದ ಮುಖ್ಯ ನ್ಯಾಯಮೂರ್ತಿಗಳು, ನನ್ನ ಉಂಗುರದಲ್ಲಿದ್ದ ಕಲ್ಲನ್ನು ಹುಡುಕಿಕೊಟ್ಟಿದ್ದರು. ಒಂದು ಸಮಯದಲ್ಲಿ ಉಂಗುರದಲ್ಲಿದ್ದ ಕಲ್ಲು ಕಳೆದುಹೋಗಿತ್ತು. ಅದನ್ನು ಅವರೇ ಹುಡುಕಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಅದು ಸಿಕ್ಕಿದ್ದರಿಂದ ನಾನು ನನ್ನ ಉಂಗುರಕ್ಕೆ ಹಾಕಿಕೊಂಡಿದ್ದೇನೆ ಎಂದರು.

ನ್ಯಾಯಮೂರ್ತಿಗಳಾದ ನಜೀರ್, ಎ.ಎಸ್. ಬೋಪಣ್ಣ, ಅಭಯ್ ಶ್ರೀನಿವಾಸ್ ಓಕಾ, ಬಿ.ವಿ. ನಾಗರತ್ನ, ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಭಾರಿ ಮುಖ್ಯ ನ್ಯಾಯಾಧೀಶರಾದ ಸತೀಶ್ ಚಂದ್ರ ಶರ್ಮಾ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ