Breaking News
Home / ಜಿಲ್ಲೆ / ಬೆಂಗಳೂರು / ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಧಿವೇಶನದ ಅಗ್ನಿ ಪರೀಕ್ಷೆ

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಧಿವೇಶನದ ಅಗ್ನಿ ಪರೀಕ್ಷೆ

Spread the love

ಬೆಂಗಳೂರು: ಮುಖ್ಯಮಂತ್ರಿಯಾಗಿ ನಲವತ್ತೈದು ದಿನಗಳ ಆಡಳಿತ ನಿರ್ವಹಣೆಯಲ್ಲಿ ಸೈ ಎನಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಮಂಡಲ ಅಧಿವೇಶನ ಅಗ್ನಿಪರೀಕ್ಷೆಯಾಗಲಿದೆ.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ವಿಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದಾಗ ತಕ್ಕ ತಿರುಗೇಟು ನೀಡುವ ಮೂಲಕ ಸಿಎಂಗೆ ಬೆಂಬಲ ನೀಡುತ್ತಿದ್ದ ಬಸವರಾಜ ಬೊಮ್ಮಾಯಿ ಅವರೀಗ ಸವಾಲುಗಳಿಗೆ ಸ್ವತಃ ಎದೆಯೊಡ್ಡಬೇಕಾಗಿದೆ.

ರಾಜ್ಯ ರಾಜಕಾರಣದಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಮತ್ತು ಉಭಯ ಸದನಗಳಲ್ಲೂ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅಧಿವೇಶನದಲ್ಲಿ ವಿಪಕ್ಷಗಳು ಹೂಡಬಹುದಾದ ಅಸ್ತ್ರಗಳ ಬಗ್ಗೆ ಅಂದಾಜು ಇರುವುದು ಸಹಜ. ಅವರು ಯಾವ ರೀತಿಯ ಪ್ರತ್ಯಸ್ತ್ರಗಳ ಮೂಲಕ ಸವಾಲನ್ನು ನಿಭಾಯಿಸಲಿದ್ದಾರೆ ಎಂಬ ಕುತೂಹಲ ಇದೆ.

ತಿರುಗೇಟು ನೀಡಲು ಸಜ್ಜು :

ವಿಪಕ್ಷ ಕಾಂಗ್ರೆಸ್‌ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಳಂಬ, ಬೆಲೆ ಏರಿಕೆ ಮತ್ತಿತರ ಅಸ್ತ್ರಗಳ ಮೂಲಕ ಸರಕಾರವನ್ನು ಹಣಿಯಲು ಕಾರ್ಯತಂತ್ರ ರೂಪಿಸಿದೆ. ಅದಕ್ಕೆ ತಿರುಗೇಟು ನೀಡಲು ಸಿಎಂ ಬೊಮ್ಮಾಯಿ ಸಂಬಂಧಿತ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಜತೆಗೆ ಮಾಜಿ ಸಿಎಂಗಳಾದ ಎಸ್‌.ಎಂ. ಕೃಷ್ಣ, ಬಿಎಸ್‌ವೈ ಸಹಿತ ಹಲವು ಹಿರಿಯ ನಾಯಕರ ಸಲಹೆ ಪಡೆದುಕೊಂಡಿದ್ದಾರೆ.

ವಿಪಕ್ಷಗಳು ಪ್ರಸ್ತಾವಿಸುವ ಇಲಾಖೆಗಳಿಗೆ ಸಂಬಂಧಿ ಸಿದ ವಿಚಾರಗಳಿಗೆ ಸಂಬಂಧಪಟ್ಟ ಸಚಿವರೇ ಉತ್ತರ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಸೂಚನೆ ಯನ್ನೂ ಸಿಎಂ ನೀಡಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ; ಜಾತಿ ಜನಗಣತಿ ವರದಿ ಬಿಡುಗಡೆ ವಿಚಾರ ಚರ್ಚೆ ಯಲ್ಲಿದೆ. ಕಾಂಗ್ರೆಸ್‌ನಲ್ಲಿ ಈ ಬಗ್ಗೆ ಭಿನ್ನ ಧ್ವನಿ ಇದೆ. ಅದು ಸದನದಲ್ಲಿ ಪ್ರತಿಧ್ವನಿಸಿದರೆ ಸಿಎಂ ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

“ಅತ್ಯುತ್ತಮ ಶಾಸಕ’ ಪ್ರಶಸ್ತಿ :

ಸೋಮವಾರ ಆರಂಭವಾಗಲಿರುವ ಅಧಿ ವೇಶನ ಹತ್ತು ದಿನ ನಡೆಯಲಿದೆ. ವಿಪಕ್ಷಗಳಿಂದ ಎಷ್ಟೇ ಪ್ರತಿಭಟನೆ, ಧರಣಿ ಎದುರಾದರೂ ಅಧಿ ವೇಶನ ಮೊಟಕುಗೊಳಿಸದೆ ಪೂರ್ಣ ಅವಧಿಯ ಕಲಾಪ ನಡೆಸಲು ಸರಕಾರ ತೀರ್ಮಾನಿಸಿದೆ. ಅಧಿವೇಶನ ಕೆಲವು ಮಹತ್ವದ ನಿರ್ಧಾರಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಅಧಿವೇಶನದಲ್ಲಿ ಜೆಡಿಎಸ್‌ ನಡೆ ಏನು ಎಂಬ ಕುತೂಹಲವೂ ಇದೆ. ಈ ಬಾರಿಯ ಅಧಿವೇಶನದಲ್ಲಿ ಕಲಾಪಗಳತ್ತ ಶಾಸಕರನ್ನು ಸೆಳೆಯುವುದಕ್ಕಾಗಿ “ಅತ್ಯುತ್ತಮ ಶಾಸಕ’ ಪ್ರಶಸ್ತಿ ನೀಡಲು ಸ್ಪೀಕರ್‌ ತೀರ್ಮಾನಿಸಿದ್ದಾರೆ. ಇದರಿಂದಲಾದರೂ ಶಾಸಕರ ಹಾಜರಿ ಹೆಚ್ಚುವುದೇ ಎಂದು ಕಾದುನೋಡಬೇಕಿದೆ.

ಅಶೋಕ್‌ ರಾಯಭಾರಿ? :

ಹಿರಿಯ ಸಚಿವ ಆರ್‌. ಅಶೋಕ್‌ ಅವರು ಕಲಬುರಗಿ ಮಹಾನಗರ ಪಾಲಿಕೆ ವಿಚಾರ ಚರ್ಚೆಯ ನೆಪದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಅಧಿವೇಶನ ಸಂದರ್ಭ ಸಿಎಂ ಬೊಮ್ಮಾಯಿಗೆ ಸಹಕಾರ ನೀಡುವಂತೆ ಅವರು ಜೆಡಿಎಸ್‌ ಬಳಿ ಕೋರಿಕೆ ಮಂಡಿಸಿದ್ದಾರೆ ಎನ್ನಲಾಗುತ್ತಿದೆ. ಅಧಿವೇಶನದಲ್ಲಿ ಕಾಂಗ್ರೆಸ್‌ ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದಾಗ ಜೆಡಿಎಸ್‌ ಸಹಾಯ ಪಡೆಯುವುದು ಇದರ ಹಿಂದಿನ ಕಾರ್ಯ ತಂತ್ರವಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ