Home / ರಾಜಕೀಯ / ಪೌರ ಕಾರ್ಮಿಕರಿಗೆ ಸದ್ಯದಲ್ಲೇ ಕೈಮಗ್ಗದ ಸಮವಸ್ತ್ರ; ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹೊಸ ಪ್ರಯೋಗ

ಪೌರ ಕಾರ್ಮಿಕರಿಗೆ ಸದ್ಯದಲ್ಲೇ ಕೈಮಗ್ಗದ ಸಮವಸ್ತ್ರ; ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹೊಸ ಪ್ರಯೋಗ

Spread the love

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪೌರ ಕಾರ್ಮಿಕರಿಗೆ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸಮವಸ್ತ್ರ ಖರೀದಿಸುತ್ತಿರುವ ಮೂರನೇ ಪಾಲಿಕೆಯಾಗಿದೆ. ಸೆಪ್ಟೆಂಬರ್ 10ರೊಳಗೆ ಸಮವಸ್ತ್ರಗಳು ಪೂರೈಕೆಯಾಗಲಿವೆ.

ಹುಬ್ಬಳ್ಳಿ: ಕರ್ನಾಟಕದ ಅತಿ ದೊಡ್ಡ ಮಹಾನಗರ ಪಾಲಿಕೆ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತದೆ. ಇಲ್ಲಿ ಏನೇ ನಡೆದರೂ ಅದು ಸುದ್ದಿಯಾಗುತ್ತದೆ. ಈ ಬಾರಿ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ವಿತರಿಸುವ ಸಮವಸ್ತ್ರಗಳನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಖರೀದಿಸಲು ನಿರ್ಧರಿಸಲಾಗಿದೆ. ಈ ಸಮವಸ್ತ್ರ ವಿತರಿಸಲು ಹಲವಾರು ಬಾರಿ ಟೆಂಡರ್ ಕರೆದಿದ್ದರೂ ಯಾರು ಕೂಡ ಭಾಗವಹಿಸದೇ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಸಮವಸ್ತ್ರ ಖರೀದಿಗೆ ಪಾಲಿಕೆಯಲ್ಲಿ ಸಾಕಷ್ಟು ಪ್ರಮಾಣದ ಹಣವೂ ಇದೆ. ಆದರೆ, ತಾಂತ್ರಿಕ ಕಾರಣಗಳಿಂದ ಸಮವಸ್ತ್ರವನ್ನು ಪೌರ ಕಾರ್ಮಿಕರಿಗೆ ವಿತರಿಸಲು ಸಾಧ್ಯವಾಗುತ್ತಿಲ್ಲ. ಸಮವಸ್ತ್ರ ವಿತರಣೆಗೆ ಈಗಾಗಲೇ 4 ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಯಾರು ಕೂಡ ಟೆಂಡರ್ ನಲ್ಲಿ ಭಾಗವಹಿಸಲೇ ಇಲ್ಲ. ಇದರಿಂದಾಗಿ ಪಾಲಿಕೆ ಅಧಿಕಾರಿಗಳಿಗೆ ಈ ವಿಚಾರ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ, ಈ ಮುಂಚೆ ಸಮವಸ್ತ್ರವನ್ನು ಖರೀದಿಸಿದ್ದಾಗ ಅನೇಕ ಆರೋಪಗಳು ಕೇಳಿ ಬಂದಿದ್ದವು. ಸಮವಸ್ತ್ರದ ಬೆಲೆ ದುಬಾರಿ ಆಗಿರೋದು ಹಾಗೂ ಅವು ಕಳಪೆ ಆಗಿರುವುದರ ಬಗ್ಗೆ ನಿರಂತರವಾಗಿ ಆರೋಪಗಳು ಕೇಳಿ ಬಂದಿದ್ದವು.
ಆದರೆ, ಅನಿವಾರ್ಯವಾಗಿ ಈ ಬಾರಿಯೂ ಹೊರಗಿನ ವ್ಯಕ್ತಿಗಳಿಂದ ಸಮವಸ್ತ್ರ ಖರೀದಿಗೆ ಟೆಂಡರ್ ಕರೆಯಲಾಗಿತ್ತು. ಇದಕ್ಕಾಗಿ ಪಾಲಿಕೆ ಬಳಿ 60.17 ಲಕ್ಷ ರೂ. ಅನುದಾನವಿದೆ. ಅಚ್ಚರಿಯ ಸಂಗತಿಯೆಂದರೆ, ಯಾರೊಬ್ಬರೂ ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲೇ ಇಲ್ಲ. ಇದರಿಂದಾಗಿ ಪಾಲಿಕೆ ಅಧಿಕಾರಿಗಳಿಗೆ ಇದೊಂದು ತಲೆ ನೋವಾಗಿ ಪರಿಣಮಿಸಿತು. ಇದೇ ಕಾರಣಕ್ಕೆ ಈ ಬಾರಿ ರಾಜ್ಯ ಸರಕಾರದ್ದೇ ಆಗಿರೋ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸಮವಸ್ತ್ರವನ್ನು ಖರೀದಿಸಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ

ಸದ್ಯಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಯಂ ಪೌರ ಕಾರ್ಮಿಕರು ಸೇರಿದಂತೆ ಹೊರ ಗುತ್ತಿಗೆ ಹಾಗೂ ನೇರ ವೇತನಕ್ಕೆ ಒಳಪಟ್ಟು ದುಡಿಯುತ್ತಿರುವ ಒಟ್ಟು 2400 ಪೌರ ಕಾರ್ಮಿಕರಿದ್ದಾರೆ. ಪೌರ ಕಾರ್ಮಿಕನಿಗೆ ತಲಾ ಒಂದು ಜೊತೆಯಂತೆ ಒಟ್ಟು 4800 ಸಮವಸ್ತ್ರಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಅಲ್ಲದೇ ಪ್ರತಿಯೊಬ್ಬ ಪೌರ ಕಾರ್ಮಿಕನಿಗೆ ನಾಲ್ಕು ಹ್ಯಾಂಡ್ ಗ್ಲೌಸ್ ಕೂಡ ಖರೀದಿಸಲಾಗುತ್ತಿದೆ. ಅನೇಕ ದಿನಗಳಿಂದ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆಯಾಗುತ್ತಿಲ್ಲ ಅನ್ನುವ ದನಿ ಕೇಳಿ ಬರುತ್ತಲೇ ಇತ್ತು. ಆದರೆ ಇದೀಗ ಸಮವಸ್ತ್ರವನ್ನು ವಿತರಿಸೋ ಮೂಲಕ ಪಾಲಿಕೆ ಅಧಿಕಾರಿಗಳು ಪೌರ ಕಾರ್ಮಿಕರ ಕಂಗಣ್ಣಿನಿಂದ ಬಚಾವ್ ಆಗಲಿದ್ದಾರೆ.

ಕೈಮಗ್ಗದ ಸಮವಸ್ತ್ರಗಳ ವಿಶೇಷತೆ ಏನು?:
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸಮವಸ್ತ್ರಗಳನ್ನು ಖರೀದಿಸಿದರೆ ಸಾಕಷ್ಟು ಅನುಕೂಲತೆಗಳಿವೆ. ಅಲ್ಲದೇ ಸಮವಸ್ತ್ರಗಳಲ್ಲಿ ವಿಶೇಷತೆಯೂ ಇದೆ. ಸಾಮಾನ್ಯವಾಗಿ ಖಾಸಗಿ ಸಂಸ್ಥೆಗಳಿಂದ ವಿತರಿಸಲಾಗುವ ಸಮವಸ್ತ್ರಗಳ ಗುಣಮಟ್ಟ ಅಷ್ಟಕ್ಕಷ್ಟೇ ಆಗಿರುತ್ತದೆ. ಆದರೆ ಕೈಮಗ್ಗದಲ್ಲಿ ತಯಾರಾಗುವ ಸಮವಸ್ತ್ರಗಳ ಗುಣಮಟ್ಟದ ಬಗ್ಗೆ ಯಾರೂ ಕೂಡ ಆಕ್ಷೇಪವೆತ್ತುವ ಹಾಗಿರುವುದಿಲ್ಲ. ಉತ್ತಮ ಗುಣಮಟ್ಟದ ಬಟ್ಟೆಯಿಂದಲೇ ಸಮವಸ್ತ್ರಗಳನ್ನು ತಯಾರಿಸಲಾಗಿರುತ್ತದೆ. ಇನ್ನು ಈ ಸಮವಸ್ತ್ರಗಳಿಗೆ ರೇಡಿಯಂ ಪಟ್ಟಿಯನ್ನು ಕೂಡ ಅಳವಡಿಸಲಾಗಿರುತ್ತದೆ. ನಸುಕಿನ ಜಾವ ಅಥವಾ ರಾತ್ರಿ ಹೊತ್ತಿನಲ್ಲಿ ಪೌರ ಕಾರ್ಮಿಕರು ರಸ್ತೆ ಬದಿಯಲ್ಲಿ ಕೆಲಸ ಮಾಡುವಾಗ ವಾಹನ ಸವಾರರಿಗೆ ಇವರು ಸ್ಪಷ್ಟವಾಗಿ ಕಾಣಿಸುತ್ತಾರೆ. ಇದರಿಂದಾಗಿ ಪೌರ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಇದೀಗ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ನಡೆದಿದೆ. ಈ ಚುನಾವಣೆ ಮುಗಿಯುತ್ತಲೇ ಪೌರ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಹ್ಯಾಂಡ್ ಗ್ಲೌಸ್ ವಿತರಣೆಯಾಗಲಿದೆ. ಸಮವಸ್ತ್ರಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ. ಇದರಿಂದಾಗಿ ಬಹಳ ದಿನಗಳವರೆಗೆ ಬಾಳಿಕೆ ಬರುತ್ತವೆ. ಈ ಬಾರಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸಮವಸ್ತ್ರ ಖರೀದಿಗೆ ನಿರ್ಧರಿಸಿದ್ದರಿಂದ ನಿಗಮಕ್ಕೂ ಕೂಡ ಒಳ್ಳೆಯದಾಗಲಿದೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪೌರ ಕಾರ್ಮಿಕರಿಗೆ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸಮವಸ್ತ್ರ ಖರೀದಿಸುತ್ತಿರುವ ಮೂರನೇ ಪಾಲಿಕೆಯಾಗಿದೆ. ಸೆಪ್ಟೆಂಬರ್ 10ರೊಳಗೆ ಸಮವಸ್ತ್ರಗಳು ಪೂರೈಕೆಯಾಗಲಿವೆ. ಈಗಾಗಲೇ ಬೃಹತ್ ಬೆಂಗಳೂರು ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಗೆ ಸಮವಸ್ತ್ರಗಳನ್ನು ಪೂರೈಕೆ ಮಾಡಿದ್ದೇವೆ. ಸರಕಾರಿ ಇಲಾಖೆಗಳಿಗೆ ಸಮವಸ್ತ್ರಗಳನ್ನು ವಿತರಣೆ ಮಾಡುವ ಮೂಲಕ ನಿಗಮವು ವಾರ್ಷಿಕ 105 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿನ ಸುಮಾರು 5000 ನೇಕಾರರಿಗೆ ಅನುಕೂಲವೂ ಆಗಿದೆ. ಇದರಿಂದ ಅವರ ಉತ್ಪನ್ನಗಳಿಗೂ ಇದೀಗ ಬೇಡಿಕೆ ಬಂದಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ