Breaking News
Home / ಜಿಲ್ಲೆ / ಬೆಂಗಳೂರು / ಪೊಲೀಸರಿಗೆ ಸಿಎಂ ಎಚ್ಚರಿಕೆ

ಪೊಲೀಸರಿಗೆ ಸಿಎಂ ಎಚ್ಚರಿಕೆ

Spread the love

ಬೆಂಗಳೂರು,ಆ.27- ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೈಸೂರು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಸುದ್ದಿಯಾಗುತ್ತಿದ್ದು, ತಪ್ಪಿತಸ್ಥ ಆರೋಪಿಗಳನ್ನು ತಕ್ಷಣವೇ ಬಂಧಿಸದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳ ಕಾರ್ಯ ವೈಖರಿಗೆ ಸಿಎಂ ತರಾಟೆ ತೆಗೆದುಕೊಂಡಿದ್ದಾರೆ.

ದೆಹಲಿ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿದ್ದಂತೆಯೇ ಪ್ರಕರಣದ ಬಗ್ಗೆ ಪ್ರವೀಣ್‍ಸೂದ್ ಅವರಿಂದ ಮಾಹಿತಿ ಪಡೆದ ಸಿಎಂ ಅವರು ಆರೋಪಿಗಳ ಸುಳಿವು ಪತ್ತೆಯಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದು ಈಗಾಗಲೇ ನಾಲ್ಕು ದಿನಗಳಾಗಿವೆ. ಕರ್ನಾಟಕದ ಮಾನ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಈವರೆಗೂ ನಿಮಗೆ ಒಂದು ಸಣ್ಣ ಸುಳಿವು ಸಿಕ್ಕಿಲ್ಲ ಎಂದರೆ ಇದೇನ ಕಾರ್ಯವೈಖರಿ ಎಂದು ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ.

ಈ ಘಟನೆ ಬಗ್ಗೆ ಸ್ವತಃ ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಕೇಂದ್ರ ಗೃಹ ಸಚಿವರ ಕಾರ್ಯಾಲಯವು ನನಗೆ ದೂರವಾಣಿ ಕರೆ ಮಾಡಿ ಮಾಹಿತಿ ಕೋರಿದೆ. ನಿಮ್ಮ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲೇ ವಿಳಂಬ ಮಾಡುತ್ತಿದ್ದಾರೆ ಎಂದರೆ ನಾನು ಏನು ಉತ್ತರ ಕೊಡಬೇಕೆಂದು ಬೊಮ್ಮಾಯಿ ಅವರು ಡಿಜಿಪಿ ಮೇಲೆ ಕಿಡಿಕಾರಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತರಾಗಿರುವ ಚಂದ್ರಗುಪ್ತ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಪ್ರತಿಯೊಂದಕ್ಕೂ ನಾನು ಇಲ್ಲವೇ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ ನೀಡಬೇಕೆಂದರೆ ಇವರ ಕೆಲಸವಾದರೂ ಏನು ಎಂದು ಪ್ರಶ್ನಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಶಿಸ್ತು ಕ್ರಮದ ಎಚ್ಚರಿಕೆ: ಈ ಪ್ರಕರಣದಿಂದ ನಮ್ಮ ಸರ್ಕಾರ ಹಾಗೂ ರಾಜ್ಯಕ್ಕೆ ದೊಡ್ಡ ಹಿನ್ನಡೆಯಾಗಿದೆ. ಯಾರೇ ಭಾಗಿಯಾಗಿರಲಿ ಎಷ್ಟೇ ಪ್ರಭಾವಿಗಳಾಗಿರಲಿ ತಕ್ಷಣವೇ ಬಂಧಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಾನು ಶಿಸ್ತು ಕ್ರಮ ಜರುಗಿಸಲು ಹಿಂದೆಮುಂದೆ ನೋಡುವುದಿಲ್ಲ ಎಂದು ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ.

ಹೋದ ಪುಟ್ಟ, ಬಂದ ಪುಟ್ಟ ಎಂಬಂತೆ ಹೇಗೋ ಮಾಡಿದರಾಯಿತು ಎಂಬ ಮನೋಭಾವನೆ ಬೇಡ. ಕರ್ತವ್ಯದಲ್ಲಿ ಉದಾಸೀನ ತೋರುವವರ ಮೇಲೆ ನಾನು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇನೆ. ಪ್ರಸ್ತುತ ಸಂದರ್ಭದಲ್ಲಿ ಮೈಸೂರು ನಗರ ಆಯುಕ್ತರನ್ನು ವರ್ಗಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆರೋಪಿಗಳ ಬಂಧನವಾದ ಬಳಿಕ ಆಯುಕ್ತರನ್ನು ಎತ್ತಂಗಡಿ ಮಾಡದೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಮೈಸೂರಿನಲ್ಲಿ ಗುಪ್ತಚರ ವಿಭಾಗ ಏನು ಮಾಡುತ್ತಿದೆ? ನಾಲ್ಕು ದಿನವಾದರೂ ಒಬ್ಬರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಗುಪ್ತಚರ ವಿಭಾಗದಲ್ಲಿ ಅಧಿಕಾರಿಗಳು ಏಕೆ ಇರಬೇಕು? ಎಂದು ಡಿಜಿಪಿ ಅವರನ್ನು ಪ್ರಶ್ನಿಸಿದ್ದಾರೆ. ಆರೋಪಿಗಳ ಪತ್ತೆಗೆ ಆರು ತಂಡಗಳನ್ನು ರಚನೆ ಮಾಡಲಾಗಿದೆ. ಈವರೆಗೂ ಒಬ್ಬನೇ ಒಬ್ಬ ಆರೋಪಿಯನ್ನೂ ಸಹ ವಶಕ್ಕೆ ಪಡೆದಿಲ್ಲ. ಮೊಬೈಲ್ ಟವರ್ ಲೊಕೇಷನ್ ಮೂಲಕ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಬಹುದಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರ ಕಾರ್ಯ ವೈಖರಿ ನನಗೆ ತೃಪ್ತಿ ತಂದಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ನೀವು ಘಟನಾ ಸ್ಥಳಕ್ಕೆ ತೆರಳಿ ಘಟನೆ ಕುರಿತಂತೆ ನನಗೆ ಮಾಹಿತಿ ನೀಡಬೇಕು. ಮೈಸೂರಿನಿಂದ ಹಿಂತಿರುಗಿದ ನಂತರ ನೇರವಾಗಿ ಬಂದು ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ಸಿಎಂ ಡಿಜಿಪಿ ಅವರಿಗೆ ಸೂಚನೆ ಕೊಟ್ಟಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ