Breaking News
Home / ರಾಜಕೀಯ / ಹದಿನೆಂಟು ಹುತಾತ್ಮರ ಪುಣ್ಯಭೂಮಿ ಕೊಗನೂರ

ಹದಿನೆಂಟು ಹುತಾತ್ಮರ ಪುಣ್ಯಭೂಮಿ ಕೊಗನೂರ

Spread the love

ಶಿರಹಟ್ಟಿ: ದೇಶವನ್ನು ಬ್ರಿಟಿಷರ ಆಡಳಿತದಿಂದ ಮುಕ್ತಗೊಳಿಸಲು ಶಿರಹಟ್ಟಿ ತಾಲ್ಲೂಕಿನ ಕೊಗನೂರು ಗ್ರಾಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಹಿಸಿದ ಪಾತ್ರ ಅದ್ಭುತವಾಗಿದ್ದು, ಇದು ಸ್ವಾತಂತ್ರ್ಯ ಯೋಧರ ಗ್ರಾಮವೆಂದೇ ಪ್ರಸಿದ್ಧಿ ಪಡೆದಿದೆ.

1942ರಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ‘ಚಲೇ ಜಾವ್‌ ಚಳವಳಿ’ಯಲ್ಲಿ ಮೈಲಾರ ಮಹಾದೇವಪ್ಪನವರ ನಾಯಕತ್ವದಲ್ಲಿ ಕೊಗನೂರಿನ 19 ಜನರು ಭಾಗವಹಿಸಿ ದೇಶಪ್ರೇಮ ಮೆರೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ ಏಕೈಕ ಪ್ರತಿನಿಧಿ ಮೈಲಾರ ಮಹಾದೇವಪ್ಪನವರು ಎಂಬುದು ಹೆಮ್ಮೆಯ ವಿಷಯ. ಇವರ ನೇತೃತ್ವದಲ್ಲಿ ಕೊಗನೂರು ಗ್ರಾಮದ 18 ಮಂದಿ ಹೋರಾಟಗಾರರನ್ನು ಒಗ್ಗೂಡಿಸಿಕೊಂಡು ಬ್ರಿಟಿಷರ ನೆಲೆಗಳನ್ನು ನಾಶ ಮಾಡಿ, ಬ್ರಿಟಿಷರಿಗೆ ಸಂಬಂಧಿಸಿದ ಟಪಾಲುಗಳನ್ನು ಬಸ್‌ನಲ್ಲಿ ಸಾಗಣೆ ಮಾಡುತ್ತಿದ್ದಾಗ ಮಾಗಡಿ-ಮುಳಗುಂದ ಮಾರ್ಗ ಮಧ್ಯ ಮತ್ತು ಗುಡಗೇರಿಯಲ್ಲಿ ಬಸ್‌ ತಡೆದು ಟಪಾಲು ಅಪಹರಣ ಮಾಡುತ್ತಿದ್ದರು.

ಕೊಗನೂರಿನ ಹದಿನೆಂಟು ಮಂದಿ ವೀರ ಯೋಧರೊಂದಿಗೆ ಕೊಗನೂರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬ್ರಿಟಿಷರು ಕಂದಾಯ ವಸೂಲಿ ಮಾಡುತ್ತಿದ್ದ ವೇಳೆ ಅವರನ್ನು ತಡೆಯುವಂತಹ ಕೆಲಸ ಮಾಡುತ್ತಿದ್ದರು. ಬ್ರಿಟಿಷರಿಗೆ ಸಂಬಂಧಿಸಿದ ಗೋವಿನಕೊಪ್ಪ‌, ಹೊನ್ನತ್ತಿ, ಬಿಜ್ಜೂರಿನಲ್ಲಿದ್ದ ಚಾವಡಿಗಳನ್ನು ಹಾನಿ ಮಾಡುತ್ತಿದ್ದರು. ಮೈಲಾರ ಮಹಾದೇವಪ್ಪನವರ ಉಪಟಳಗಳನ್ನು ತಾಳಲಾರದೆ ಬ್ರಿಟಿಷರು ಹೈರಾಣಾಗಿದ್ದರು.

1943 ಏಪ್ರಿಲ್‌ 1ರಂದು ಹೊಸರತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬ್ರಿಟಿಷರ ಕಂದಾಯ ಹಣ ಅಪಹರಣ ಮಾಡಲು ಹೋದ ಸಂದರ್ಭದಲ್ಲಿ ಮೈಲಾರ ಮಹಾದೇವಪ್ಪ, ಕೊಗನೂರಿನ ಮಡಿವಾಳ ತಿರುಕಪ್ಪ ಮತ್ತು ವೀರಯ್ಯ ಹಿರೇಮಠ ಬ್ರಿಟಿಷರ ಗುಂಡೇಟಿಗೆ ಬಲಿಯಾಗಿ, ಹುತಾತ್ಮರಾದರು.

‘1943ರಲ್ಲಿ ಗೋಣೆಪ್ಪ ಕಮತ ಮತ್ತು ಯಲ್ಲಮ್ಮ ಕಮತ ಎಂಬ ಸತಿ-ಪತಿ ಪಾಲ್ಗೊಂಡಿದ್ದರು. ಬ್ರಿಟಿಷರು ಇಬ್ಬರನ್ನು ಜೈಲಿಗೆ ಹಾಕಲಾಗಿತ್ತು, ಯಲ್ಲಮ್ಮ ಕಮತರವರು ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿರುವುದು ನಮ್ಮ ಗ್ರಾಮದ ವೀರ ಯೋಧರ ದೇಶ ಪ್ರೇಮಕ್ಕೆ ಸಾಕ್ಷಿ. ಗುಡ್ಡಪ್ಪ ಕ. ಡಿಳ್ಳೆಪ್ಪನವರ, ನಿಂಗಪ್ಪ ಕೂರಗುಂದ, ವೀರಪ್ಪ ಅಂಗಡಿ, ನೀಲಪ್ಪ ಡಿಳ್ಳೆಪ್ಪನವರ, ವೀರಭದ್ರಗೌಡ ಪಾಟೀಲ, ನೀಸಿಮ್ಮಪ್ಪ ಚನ್ನೂರು, ಫಕ್ಕಿರಪ್ಪ ರಡ್ಡೇರ, ಫಕ್ಕೀರಪ್ಪ ಕೂರಗುಂದ, ಭಗವಂತಪ್ಪ ಬೂದನೂರ, ಶಿವಯ್ಯ ಹಿರೇಮಠ, ವಾಸುರೆಡ್ಡಿ ರಡ್ಡೇರ, ರಾಮಣ್ಣ ಕೂರಗುಂದ, ಚನ್ನಪ್ಪ ಕೂರಗುಂದ ಹಾಗೂ ವಡವಿಯ ವೆಂಕಣ್ಣಚಾರ್ಯ ವಾಯಿ, ನಾಗರಮಡವಿನ ಮುದಕಪ್ಪ ಹಡಪದ, ಹೆಬ್ಬಾಳದ ಹಾಲಪ್ಪ ಉಡಚಣ್ಣವರ ಸ್ವಾತಂತ್ರ್ಯ ಸಂಗ್ರಾಮದ ಭಾಗವಹಿಸಿದ ವೀರ ಯೋಧರು’ ಎಂದು ವಕೀಲರಾದ ಡಿ.ಕೆ.ಹೊನ್ನಪ್ಪನವರ ಮಾಹಿತಿ ನೀಡಿದರು.

ಮೈಲಾರಪ್ಪನವರ ನೇತೃತ್ವದಲ್ಲಿ ನಡೆದ ಚಳವಳಿ ಇಡೀ ದೇಶದ ಜನರನ್ನು ಬಡಿದೆಬ್ಬಿಸಿತ್ತು. ಅವರ ದೇಶಭಕ್ತಿ, ರಾಷ್ಟ್ರಾಭಿಮಾನ, ತ್ಯಾಗ, ಬಲಿದಾನಗಳು ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಅನುಕರಣೀಯ. ತಮ್ಮ ಅಮೋಘ ಹೋರಾಟದ ಮೂಲಕ ಶಿರಹಟ್ಟಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕೊಗನೂರಿನ ಈ ಅಪರೂಪದ ಹೋರಾಟಗಾರರ ಇತಿಹಾಸ ದಾಖಲಾಗದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕೊಗನೂರಿನ ಹದಿನೆಂಟು ವೀರ ಯೋಧರ ಹೆಸರಿನಲ್ಲಿ ಉದ್ಯಾನ ನಿರ್ಮಿಸಿ ಸ್ಮಾರಕಗಳನ್ನು ಪ್ರತಿಷ್ಠಾಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು
ಡಿ.ಕೆ.ಹೊನ್ನಪ್ಪನವರ, ಕೊಗನೂರ ಗ್ರಾಮದ ಮುಖಂಡರು


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ