Breaking News
Home / ಜಿಲ್ಲೆ / ಬೆಂಗಳೂರು / ದೂರದೃಷ್ಟಿ ಇಟ್ಟುಕೊಂಡು ಸಮರ್ಥವಾಗಿ ವಿದ್ಯುತ್ ನಿರ್ವಹಣೆ ಮಾಡಿ

ದೂರದೃಷ್ಟಿ ಇಟ್ಟುಕೊಂಡು ಸಮರ್ಥವಾಗಿ ವಿದ್ಯುತ್ ನಿರ್ವಹಣೆ ಮಾಡಿ

Spread the love

ಬೆಂಗಳೂರು : ವಿದ್ಯುತ್ ಕ್ಷೇತ್ರದಲ್ಲಿ ಸಾವಲಂಬಿ ಆಗುವುದರ ಜೊತೆಗೆ ಸಮರ್ಥವಾಗಿ ವಿದ್ಯುತ್ ನಿರ್ವಹಣೆಯನ್ನು ದೂರದೃಷ್ಟಿಯನ್ನು ಇಟ್ಟುಕೊಂಡು ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸೂಚನೆ ನೀಡಿದರು.‌

ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಸಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆ ಇನ್ನು ಬಹಳ ವ್ಯವಸ್ಥಿತವಾಗಿ ಮಾಡಬೇಕು. ಮಾರುಕಟ್ಟೆ ಸ್ಥಿತಿಗತಿಯನ್ನು ಆಧರಿಸಿ ಹೆಚ್ಚಿನ ದರಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವಂತಾಗಬೇಕು. ಕರ್ನಾಟಕ ವಿದ್ಯುತ್ ನಿಗಮದಿಂದ ವಿದ್ಯುತ್ ಉತ್ಪಾದನೆ ಅತ್ಯಂತ ದಕ್ಷತೆಯಿಂದ ಆಗಬೇಕು. ಜಲ ಮತ್ತು ವಿದ್ಯುತ್ ಘಟಕಗಳು ಅತಿ ಹೆಚ್ಚು ಕಾರ್ಯ ಕ್ಷಮತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಲಾಗಿರುವ ಬೋರ್ ವೆಲ್ ಗಳಿಗೆ ಯಾವುದೇ ರೀತಿಯ ತಡ ಮಾಡದೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕೋವಿಡ್ ಸಂದರ್ಭದಲ್ಲಿ ವಿಶೇಷವಾಗಿ ಆಸ್ಪತ್ರೆಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯದ 15 ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ 7 ಗಂಟೆಗಳ ವಿದ್ಯುತ್ ಪೂರೈಕೆಯಾಗುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ 5 ಗಂಟೆಗಳ ವಿದ್ಯುತ್ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ. ಈ ಅಸಮಾನತೆಯನ್ನು ಹೋಗಲಾಡಿಸಲು ನೀಲನಕ್ಷೆಯನ್ನು ಸಿದ್ಧಪಡಿಸಿ ಕಾಲಮಿತಿಯಲ್ಲಿ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.

ವಿದ್ಯುತ್ ಸೋರಿಕೆಯನ್ನು ತಡೆಗಟ್ಟಿ ಒಟ್ಟಾರೆ ಇಂಧನ ವ್ಯವಸ್ಥೆಯ ಸುಧಾರಣೆಗೆ ಒತ್ತು ನೀಡಬೇಕು. ರಾಜ್ಯದಲ್ಲಿ ನವೀಕೃತ ಮೂಲಗಳ ಸ್ಥಾಪಿತ ಸಾಮರ್ಥ್ಯ 15184.13 ಮೆ. ವ್ಯಾಟ್.ಗಳಿದ್ದು ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. ಭವಿಷ್ಯದ ದೃಷ್ಟಿಯಿಂದ ನವೀಕೃತ ಇಂಧನಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.‌

ಗಂಗಾ ಕಲ್ಯಾಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಅಭಿವೃದ್ಧಿ ನಿಗಮಗಳು ಸೇರಿದಂತೆ ಒಟ್ಟು 18569 ಕೊಳವೆಬಾವಿಗಳ ವಿದ್ಯುದೀಕರಣಗೊಳಿಸುವ ಗುರಿ ಇದೆ. ಇದಕ್ಕಾಗಿ ಪ್ರತಿ ಪಂಪ್ ಸೆಟ್ ವಿದ್ಯುದೀಕರಣಕ್ಕೆ ಬಿಡುಗಡೆ ಮಾಡುವ 50 ಸಾವಿರ ರೂ.ಗಳ ವೆಚ್ಚವನ್ನು 1.2 ಲಕ್ಷಕ್ಕೆ ಹೆಚ್ಚಿಸುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ. ಎನ್.ಮಂಜುಳಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ