Breaking News
Home / ಜಿಲ್ಲೆ / ಬೆಂಗಳೂರು / ಮತ್ತೆ ಸಿಡಿಯಲಿದೆಯಾ ಬೆಳಗಾವಿ ಸಾಹುಕಾರ್ ಬಾಂಬ್?

ಮತ್ತೆ ಸಿಡಿಯಲಿದೆಯಾ ಬೆಳಗಾವಿ ಸಾಹುಕಾರ್ ಬಾಂಬ್?

Spread the love

ಬೆಂಗಳೂರು, : ನಾಯಕತ್ವ ಬದಲಾವಣೆಯಾದ ಬಳಿಕ ಮತ್ತೆ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಹಿಂದೆ ಮೈತ್ರಿ ಸರ್ಕಾರ ಪತನವಾಗುವಾಗ ಆಯಕ್ಟಿವ್ ಆಗಿದ್ದವರು ಈಗ ಮತ್ತೆ ಆಯಕ್ಟಿವ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮೂಲ ಕಾರಣರಾಗಿದ್ದವರಿಗೆ ಈಗ ಅಧಿಕಾರವಿಲ್ಲದಂತಾಗಿದೆ.

ಇದೇ ಸಂದರ್ಭದಲ್ಲಿ ಗುರುವಾರ ರಾತ್ರಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಹತ್ವವ ಸಭೆ ನಡೆದಿದೆ. ಮುಂಬೈ ಮಿತ್ರ ಮಂಡಳಿಯ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅದಕ್ಕೂ ಮೊದಲು ನಿನ್ನೆ ಅಂದರೆ ಗುರುವಾರ ರಾತ್ರಿ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸದಾಶಿವನಗರದ ನಿವಾಸದಲ್ಲಿ ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರ ರಚನೆಗೆ ತಮ್ಮ ಭವಿಷ್ಯ ಪಣಕ್ಕಿಟ್ಟವರು ಸಭೆ ಸೇರಿದ್ದರು ಎಂಬ ಮಾಹಿತಿ ಬಂದಿದೆ.

ತಮ್ಮ ಮೇಲೆ ಬಂದಿದ್ದ ‘ಸಿಡಿ ಪ್ರಕರಣ’ದ ಆರೋಪದ ಬಳಿಕ ಈಗ ಮತ್ತೆ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಕ್ರಿಯರಾಗಿದ್ದಾರೆ. ಜೊತೆಗೆ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಗಿಂತ ಸಿಎಂ ಬೊಮ್ಮಾಯಿ ಸಚಿವ ಸಂಪುಟ ಬಳಿಕ ಅಸಮಾಧಾನ ಸ್ಪೋಟಗೊಂಡಿದೆ. ಜೊತೆಗೆ ಸಾಹುಕಾರ್ ಕೂಡ ಮತ್ತೆ ಸಕ್ರಿಯ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎನ್ನಲಾಗಿದ್ದು, ಇಂದು ಮತ್ತೆ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಮಂತ್ರಿ ಪದವಿ ವಂಚಿತರು ಪರೇಡ್ ನಡೆಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಜೊತೆಗೆ ಆ ಸಭೆಯಲ್ಲಿ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿದ್ದು ಕೊನೆಗೆ ಮಂತ್ರಿ ಹುದ್ದೆಯಿಂದ ವಂಚಿತರಾದ ಅರವಿಂದ ಬೆಲ್ಲದ್ ಕೂಡ ಭಾಗವಹಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮತ್ತೆ ಸಾಹುಕಾರ್ ಆಯಕ್ಟಿವ್; ರಹಸ್ಯ ಸಭೆ!

ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ಸಂಪುಟ ರಚನೆ ಹಿಂದೆಯೆ ಅಧಿಕಾರವ ವಂಚಿತರು ಮತ್ತೆ ರಹಸ್ಯ ಸಭೆ ನಡೆಸಿದ್ದಾರೆ. ಗುರುವಾರ ಮಧ್ಯಾಹ್ನ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಚರ್ಚಿಸಿದ್ದರು. ರಮೇಶ್ ಜಾರಕಿಹೊಳಿಗೆ ಸ್ವಲ್ಪ ದಿನ ಕಾಯಿರಿ ಎಂದು ಕಟೀಲ್ ಹೇಳಿದ್ದರು ಎಂದು ವರದಿಯಾಗಿತ್ತು.

ಅದಾದ ಬಳಿಕ ರಮೇಶ್ ಜಾರಕಿಹೊಳಿ ಅವರ ಸದಾಶಿವನಗರದ ನಿವಾಸದಲ್ಲಿ ರಾತ್ರಿ ರಹಸ್ಯ ಸಭೆ ನಡೆದಿದೆ ಎಂಬ ಮಾಹಿತಿ ಬಂದಿದೆ. ಈ ರಹಸ್ಯ ನಡೆಸಿದ್ದೇಕೆ? ಎಂಬ ಚರ್ಚೆ ಇದೀಗ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ಸರ್ಕಾರದ ವಿರುದ್ಧ ಮತ್ತೆ ಸಮರ ಸಾರುತ್ತಾರಾ ಬೆಳವಾಗಿ ಸಾಹುಕಾರ್ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಎದ್ದಿದೆ. ರಹಸ್ಯ ಸಭೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ರಾಜುಗೌಡ, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಸಿ.ಪಿ. ಯೋಗೇಶ್ವರ್, ಬಾಲಚಂದ್ರ ಜಾರಕಿಹೊಳಿ ಹಾಗೂ ಅರವಿಂದ ಬೆಲ್ಲದ್ ಭಾಗವಹಿಸಿದ್ದರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಹಸ್ಯ ಸಭೆಯಲ್ಲಿ ನಡೆದ ಚರ್ಚೆ ಏನು?

 

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ರಹಸ್ಯೆ ಸಭೆ ನಡೆದಿದೆ. ಸಭೆಯಲ್ಲಿ ಪ್ರಮುಖವಾಗಿ ನಾಯಕತ್ವ ಬದಲಾವಣೆ ಹಾಗೂ ಬದಲಾವಣೆ ಬಳಿಕ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೂಲಂಕುಶವಾಗಿ ಚರ್ಚೆ ನಡೆದಿದೆ. ಜೊತೆಗೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಹಾಗೂ ನಂತರ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗಳ ಬಗ್ಗೆಯೂ ಸುಧೀರ್ಘವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಮತ್ತೊಂದೆಡೆ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಹೈಕಮಾಂಡ್ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರನ್ನು ಬಳಸಿಕೊಂಡಿದೆ ಎಂಬ ಚರ್ಚೆಯೂ ಸಭೆಯಲ್ಲಿ ನಡೆದಿದೆ ಎನ್ನಲಾಗಿದೆ. ಈ ಸ್ನೇಹಿತರ ಕೂಟಕ್ಕೆ ಶಾಸಕ ಅರವಿಂದ ಬೆಲ್ಲದ್ ಅವರು ಹೊಸದಾಗಿ ಸೇರ್ಪಡೆಯಾಗಿರುವುದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ರವಾನೆಯಾದಂತಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಮಾತನಾಡಿದ್ದಾರೆ.

ನಮ್ಮ‌ ಟೈಂ ಸರಿಯಿಲ್ಲ ಅಂದ್ಕೊಂಡು ಸುಮ್ಮನಿದ್ದೇವೆ

 

ಗುರುವಾರದ ಸಭೆ ಬಳಿಕ ಶುಕ್ರವಾರವೂ ಹಲವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ಪ್ರತಾಪಗೌಡ ಪಾಟೀಲ್ ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ್ದಾರೆ. ಶಾಸಕರ ಭೇಟಿಯ ಬಳಿಕ ಯಾವುದೇ ಪ್ರತಿಕ್ರಿಯೆ ಕೊಡಲು ರಮೇಶ್ ಜಾರಕಿಹೊಳಿ ನಿರಾಕರಿಸಿದರು.

ಆದರೆ ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, “ನಾನು ಸೋತಿದ್ದೇನೆ, ಈಗ ಮಿನಿಸ್ಟರ್ ಎಲ್ಲಿ ಕೊಡ್ತಾರೆ? ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ಸಿಕ್ಕಿಲ್ಲ. ಅವರು ಮಂತ್ರಿಯಾಗಬಹುದು. ನನ್ನನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡಿ ಎಂಬ ಬೇಡಿಕೆ ಇಟ್ಟಿಲ್ಲ. ನಮ್ಮ‌ ಟೈಮ್ ಸರಿಯಿಲ್ಲ ಅಂದು ಕೊಂಡು ಸುಮ್ಮನಿದ್ದೇವೆ. ರಮೇಶ್ ಜಾರಕಿಹೊಳಿ ಸಾಹೇಬರನ್ನು ಯಾವಾಗಲೂ‌ ಭೇಟಿ‌ ಮಾಡುತ್ತಿರುತ್ತೇನೆ” ಎಂದಿದ್ದಾರೆ

ಜೊತೆಗೆ ಸಿ.ಪಿ. ಯೋಗೇಶ್ವರ್ ಸಭೆಯಲ್ಲಿ ಭಾಗವಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, “ನಾವೆಲ್ಲರು ಅವರ ಸ್ನೇಹಿತರು. ಅದಕ್ಕೆ ಇಲ್ಲಿಗೆ ಬಂದಾಗ ಊಟಕ್ಕೆ ಸೇರುತ್ತೇವೆ. ಅಂತಹ ಮಾತುಕತೆ ಏನು ನಡೆದಿಲ್ಲ. ಊಟ ಅಂದ್ಮೇಲೆ ಹಾಗೆ ಮಾತನಾಡಿದ್ದೇವೆ ಎಷ್ಟೇ. ಅದರಲ್ಲಿ ಅಂತಹ ವಿಶೇಷವೇನಿಲ್ಲ” ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಭೆ ನಡೆದಿದೆ ಅನ್ನೋದು ಗೊತ್ತಾಗಿದೆ

 

ಇನ್ನು ಮುಂಬೈ ಸ್ನೇಹಿತರ ಭೇಟಿ ಹಾಗೂ ಸಭೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಕೊಟ್ಟಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಡಿ.ಕೆ. ಶಿವಕುಮಾರ್, “ರಮೇಶ್ ಜಾರಕಿಹೊಳಿ ಮನೆಯಲ್ಲಿ ರಾತ್ರಿ ಸಭೆ ನಡೆದಿದೆ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಇಂಟೆಲಿಜೆನ್ಸ್‌ನವರು ಇದರ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ಬಿಜೆಪಿಯ ಕೆಲವು ಶಾಸಕರೂ ಸಭೆಯ ಬಗ್ಗೆ ತಿಳಿಸಿದ್ದಾರೆ. ಅವರ ಮನೆಯಲ್ಲಿ ಸಭೆ ನಡೆದಿದೆ ಅನ್ನೋದು ಗೊತ್ತಾಗಿದೆ. ಆದರೆ ಏನು‌ ಚರ್ಚೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಅದು ಅವರ ಪಕ್ಷದ ಆಂತರಿಕ‌ ವಿಚಾರ. ನಾ‌ನು‌ ಹೆಚ್ಚಿನದೇನು ಹೇಳಲ್ಲ” ಎಂದು ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆ ಬಗ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹಿಂದೆ ಮೈತ್ರಿ ಸರ್ಕಾರದ ಪತನಕ್ಕೂ ಇಂತಹುದೇ ಅಸಮಾಧಾನ ಕಾರಣವಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಪ್ರಬಲವಾಗಿದೆ. ಹೀಗಾಗಿ ಆಗಿನ ಸಂದರ್ಭದಕ್ಕೂ ಈಗಿನ ಪರಿಸ್ಥಿತಿಗೂ ಬಹಳಷ್ಟು ವ್ಯತ್ಯಾಸಗಳಿವೆ ಎನ್ನಲಾಗುತ್ತಿದೆ. ಆದರೂ ಸಣ್ಣ ಕಿಡಿ ಇಡೀ ಸರ್ಕಾರಕ್ಕೆ ಹೊತ್ತಿಕೊಳ್ಳಬಹುದು ಎಂಬ ಚರ್ಚೆಗಳಿವೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ