Breaking News
Home / ರಾಜಕೀಯ / ರಾಜಕೀಯಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ: ಬಿಜೆಪಿ ಸೇರಲಿದ್ದಾರಾ ರವಿ ಚನ್ನಣ್ಣನವರ್?

ರಾಜಕೀಯಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ: ಬಿಜೆಪಿ ಸೇರಲಿದ್ದಾರಾ ರವಿ ಚನ್ನಣ್ಣನವರ್?

Spread the love

ಬೆಂಗಳೂರು, ಆಗಸ್ಟ್ : ಇತ್ತೀಚೆಗೆ ಐಎಎಸ್, ಐಪಿಎಸ್ ಅಧಿಕಾರಿಗಳು ಅವಧಿ ಮುನ್ನವೇ ಸ್ವಯಂ ನಿವೃತ್ತಿ ಪಡೆದು ರಾಜಕಾರಣಕ್ಕೆ ಸೇರುತ್ತಿದ್ದಾರೆ. ಇದಕ್ಕೆ ಇತ್ತೀಚಿಗೆ ಬಿಜೆಪಿ ಸೇರಿದ ಕೆ.ಅಣ್ಣಾಮಲೈ ತಾಜಾ ಉದಾಹರಣೆಯಾಗಿದ್ದಾರೆ.

ಕರ್ನಾಟಕ ಕೇಡರ್​​ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜೀನಾಮೆ‌ ನೀಡಿ ಭಾರತೀಯ ಜನತಾ ಪಕ್ಷ ಸೇರಿದ್ದರು. ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು ಈಗ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ.

ಈಗ ಅಣ್ಣಾಮಲೈ ತುಳಿದ ಹಾದಿಯನ್ನೇ ಕರ್ನಾಟಕದ ಹಾಲಿ ಐಪಿಎಸ್​ ಅಧಿಕಾರಿಯೊಬ್ಬರು ತುಳಿಯುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

36 ವರ್ಷದ ಮೂಲತಃ ಗದಗ ಜಿಲ್ಲೆಯ ಐಪಿಎಸ್ ಅಧಿಕಾರಿ ರವಿ. ಡಿ. ಚನ್ನಣ್ಣನವರ್ ರಾಜಕೀಯ ಪ್ರವೇಶ ಪಡೆಯುತ್ತಾರೆ ಎಂಬ ಗುಸುಗುಸು ದೆಹಲಿ ವಲಯದಲ್ಲಿ ಪ್ರಾರಂಭವಾಗಿದೆ. ಇಂತಹದ್ದೊಂದು ಅನುಮಾನ ಮೂಡಲು ಕಾರಣ, ಇತ್ತೀಚೆಗೆ ದೆಹಲಿಯಲ್ಲಿ ರವಿ. ಡಿ. ಚನ್ನಣ್ಣನವರ್ ಬಿಜೆಪಿ ವರಿಷ್ಠ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನುವ ಫೋಟೋ ವೈರಲ್ ಆಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ರನ್ನು ರವಿ. ಡಿ. ಚನ್ನಣ್ಣನವರ್ ಮಂಗಳವಾರ ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ದೆಹಲಿಯ ಅಶೋಕ ರಸ್ತೆಯ ನಂಬರ್ 9 ನಿವಾಸದಲ್ಲಿ ಬಿ.ಎಲ್‌. ಸಂತೋಷ್‌ರನ್ನು ರವಿ. ಚನ್ನಣ್ಣನವರ್ ಭೇಟಿಯಾಗಿ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿಯಲ್ಲಿ ಸಚಿವ ಸಂಪುಟ ರಚನೆಗೆ ಹೈಕಮಾಂಡ್‌ನೊಂದಿಗೆ ಚರ್ಚಿಸುತ್ತಿರುವಾಗಲೇ ರವಿ. ಚನ್ನಣ್ಣನವರ್ ಕೂಡಾ ದೆಹಲಿಯಲ್ಲಿದ್ದರು. ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ವರಿಷ್ಠರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದ ವೇಳೆ ಐಪಿಎಸ್ ಅಧಿಕಾರಿ ರವಿ. ಚನ್ನಣ್ಣನವರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.

ಇದೇ ವೇಳೆ ಬಿಎಸ್​ಪಿ ಪಕ್ಷದಿಂದ ಉಚ್ಚಾಟಿತರಾದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಕೂಡ ಬಿಜೆಪಿಗೆ ಸೇರುವ ಮುನ್ನ ದೆಹಲಿಯಲ್ಲಿ ಬಿ.ಎಲ್‌. ಸಂತೋಷ್‌ರನ್ನು ಭೇಟಿಯಾಗಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಎನ್. ಮಹೇಶ್ ಭೇಟಿ ವೇಳೆಯೇ ರವಿ. ಚನ್ನಣ್ಣನವರ್, ಸಂತೋಷ್‌ರನ್ನು ಭೇಟಿಯಾಗಿದ್ದಾರೆ ಎಂದೂ ಕೆಲವು ಮೂಲಗಳು ಹೇಳುತ್ತಿವೆ.

ಐಪಿಎಸ್ ಅಧಿಕಾರಿ ರವಿ. ಚನ್ನಣ್ಣನವರ್ ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬೆಂಗಳೂರು ನಗರ ಸಿಐಡಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ಕೆಲಸದ ಜೊತೆಗೆ ಭಾಷಣದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ರವಿ. ಚನ್ನಣ್ಣನವರ್, ಸಾಮಾಜಿಕ‌ ಜಾಲತಾಣಗಳಾದ ಫೇಸ್‌ಬುಕ್, ಯುಟ್ಯೂಬ್, ವಾಟ್ಸಪ್‌ನಲ್ಲಿ ಅತೀ ಹೆಚ್ಚು ಕ್ರೀಯಾಶೀಲರಾಗಿದ್ದಾರೆ. ಅಲ್ಲದೇ ಹೆಚ್ಚು ಯುವ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ರವಿ. ಚನ್ನಣ್ಣನವರ್ ಪ್ರೇರಣೆಯುಕ್ತ ಮಾತುಗಳಿಗೆ ಯುವಜನರು ಪ್ರಭಾವಿತರಾಗಿದ್ದು ಮತ್ತು ಇವರ ಪ್ರತಿಯೊಂದು ಭಾಷಣವೂ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಅಧಿಕಾರಿ ಎನ್ನುವುದನ್ನು ಸಾಬೀತು ಮಾಡುವಂತೆ ಇರುತ್ತವೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಪೊಲೀಸ್ ಅಧಿಕಾರಿ ಬಿಜೆಪಿ ಸೇರಿ ಹಳೆ ಮೈಸೂರು ಭಾಗದ ಮೀಸಲು ಕ್ಷೇತ್ರವೊಂದರಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ಇತ್ತೀಚೆಗೆ ರವಿ. ಚನ್ನಣ್ಣನವರ್ ಮಠ- ಮಾನ್ಯಗಳಿಗೆ ಭೇಟಿ ಕೊಡುತ್ತಿದ್ದು, ಚಿತ್ರದುರ್ಗದ ಬಸವ ಮಹಾಸ್ವಾಮೀಜಿ, ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಶ್ರೀ, ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಮೈಲಾರಲಿಂಗೇಶ್ವರ ದೇವಸ್ಥಾನಕ್ಕೂ ಹೋಗಿ ಬಂದಿದ್ದರು. ಇದೇ ವೇಳೆ ಮಠಗಳ ಭೇಟಿ ಜೊತೆಗೆ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ