Breaking News
Home / Uncategorized / ಸಚಿವರ ಪಟ್ಟಿ ಫೈನಲ್: ನಾಳೆ ಪ್ರಮಾಣವಚನ ಸ್ವೀಕಾರ; ಸಂಪುಟಕ್ಕೆ 20-24 ಮಂತ್ರಿಗಳ ಸೇರ್ಪಡೆ..

ಸಚಿವರ ಪಟ್ಟಿ ಫೈನಲ್: ನಾಳೆ ಪ್ರಮಾಣವಚನ ಸ್ವೀಕಾರ; ಸಂಪುಟಕ್ಕೆ 20-24 ಮಂತ್ರಿಗಳ ಸೇರ್ಪಡೆ..

Spread the love

ರಾಜ್ಯದ ಮುಖ್ಯಮಂತ್ರಿಯಾದ ದಿನದಿಂದ ಬಸವರಾಜ ಬೊಮ್ಮಾಯಿ ಅವರಿಗೆ ಕಬ್ಬಿಣದ ಕಡಲೆಯಾಗಿ ಕಾಡುತ್ತಿದ್ದ ಸಂಪುಟ ವಿಸ್ತರಣೆಗೆ ಕಡೆಗೂ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಬುಧವಾರ 20ರಿಂದ 24 ಸಚಿವರು ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತ ಎಂದು ಪಕ್ಷದ ಉನ್ನತ ಮೂಲಗಳಿಂದ ಗೊತ್ತಾಗಿದೆ.

ಸೋಮವಾರ ರಾತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಚಿವರ ಪಟ್ಟಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಂಗಳೂರು ತಲುಪಿದ ಬಳಿಕ, ಸಚಿವರಾಗಲಿರುವ ಶಾಸಕರಿಗೆ ಸಿಎಂ ಖುದ್ದು ಕರೆ ಮಾಡಿ, ಪ್ರಮಾಣವಚನಕ್ಕೆ ತಯಾರಾಗುವಂತೆ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ರ್ಚಚಿಸಲೆಂದೇ ವರಿಷ್ಠರು ಬೊಮ್ಮಾಯಿ ಅವರನ್ನು ಭಾನುವಾರ ದೆಹಲಿಗೆ ಕರೆಸಿಕೊಂಡಿದ್ದರು. ಆದರೆ, ಭಾನುವಾರ ರಾತ್ರಿ ವರಿಷ್ಠರ ಭೇಟಿ ನಡೆದಿರಲಿಲ್ಲ.

ಸೋಮವಾರ ಸಿಎಂ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ, ರಾಜ್ಯಕ್ಕೆ ವೀಕ್ಷಕರಾಗಿ ಬಂದಿದ್ದ ಧಮೇಂದ್ರ ಪ್ರಧಾನ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳಲಿರುವ ತಮ್ಮ ಆದ್ಯತಾ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಈ ವೇಳೆ ವರಿಷ್ಠರೂ ಒಂದಿಷ್ಟು ಬದಲಾವಣೆಗೆ ಸಲಹೆ ನೀಡಿದ್ದು, ನಡ್ಡಾ ಭೇಟಿ ವೇಳೆ ಅವರಿಂದ ಸಿಎಂ ಅಂತಿಮ ಅನುಮೋದನೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ವರಿಷ್ಠರು ಕೂಡ ರಾಜ್ಯ ಬಿಜೆಪಿಯ ವಿವಿಧ ನಾಯಕರು, ಆರ್.ಎಸ್.ಎಸ್. ಮುಖಂಡರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಸಚಿವ ಸ್ಥಾನದ ಹಂಚಿಕೆ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ.

ಕಾರ್ಕಳ ಶಾಸಕ ಸುನಿಲ್ ಕುಮಾರ್, ಸುರಪುರ ಶಾಸಕ ರಾಜುಗೌಡ, ಕಲಬುರಗಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿ ಐದಾರು ಹೊಸ ಮುಖಗಳಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯುವಕರಿಗೆ ಆದ್ಯತೆ ನೀಡಲು ರಾಜ್ಯ ಮತ್ತು ಕೇಂದ್ರದ ಮುಖಂಡರು ತೀರ್ವನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಲ್ಲದ್​ಗೆ ಬೆಲ್ಲವೋ ಬೇವೋ?: ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ ಮತ್ತು ಸಿ.ಪಿ. ಯೋಗೇಶ್ವರ್ ಅವರನ್ನು ಯಾವುದೇ ಕಾರಣಕ್ಕೂ ಸಂಪುಟಕ್ಕೆ ತೆಗೆದುಕೊಳ್ಳಬಾರದು ಎಂದು ಮಾಜಿ ಸಿಎಂ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಈ ಮೂವರೂ ತಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದರು ಎಂಬ ಆಕ್ರೋಶ ಬಿಎಸ್​ವೈ ಮತ್ತು ಕುಟುಂಬಸ್ಥರಲ್ಲಿದೆ. ಮಾಜಿ ಸಚಿವ ಜಗದೀಶ ಶೆಟ್ಟರ್ ಕೂಡ ಬೆಲ್ಲದ್​ಗೆ ಸಚಿವ ಸ್ಥಾನ ತಪ್ಪಿಸಲು ಭಾರಿ ಯತ್ನ ಮಾಡಿದ್ದಾರೆ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೇಲೂ ಈ ಬಗ್ಗೆ ಒತ್ತಡ ಹೇರಿದ್ದಾರೆ. ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಶೆಟ್ಟರ್ ಪ್ರತಿಪಾದನೆ. ಬೆಲ್ಲದ್​ಗೆ ವರಿಷ್ಠ ವಲಯದಲ್ಲಿ ಉತ್ತಮ ಸಂಪರ್ಕಗಳಿದ್ದು, ಮಂತ್ರಿ ಸ್ಥಾನದ ಜವಾಬ್ದಾರಿ ನೀಡುವಂತೆ ಮನವಿ ಮಾಡಿದ್ದಾರೆ. ಜೋಶಿ ಅವರಿಗೂ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆ. ಚೆಂಡು ಈಗ ಹೈಕಮಾಂಡ್ ಅಂಗಳದಲ್ಲಿದೆ. ಸಿಎಂ ಬೊಮ್ಮಾಯಿ ನಿಲುವು ಬೆಲ್ಲದ್ ಭವಿಷ್ಯ ನಿರ್ಧರಿಸಬಲ್ಲದು ಎಂದು ವಿಮಶಿಸಲಾಗಿದೆ.

ಡಿಸಿಎಂ ಹುದ್ದೆ ಸಿಎಂ ವಿವೇಚನೆಗೆ?: ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡುವ ವಿಷಯ ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ವರಿಷ್ಠರು ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಲಾಭ/ನಷ್ಟಗಳ ಬಗ್ಗೆ ಅವಲೋಕನ ಮಾಡಿ ನೀವೇ ನಿರ್ಧರಿಸಿ ಎಂದು ತಿಳಿಸಲಾಗಿದೆ. ಒಂದು ವೇಳೆ ಡಿಸಿಎಂಗಳು ನೇಮಕವಾದಲ್ಲಿ ಜಾತಿ ಆಧಾರದ ಮೇಲೆ 4-5 ಮಂದಿಯನ್ನು ನೇಮಕ ಮಾಡುವ ಸಾಧ್ಯತೆಗಳಿವೆ. 2023ರ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂಗಳನ್ನು ನೇಮಕ ಸೂಕ್ತ ಕ್ರಮ ಎನ್ನುವುದು ರಾಜ್ಯ ಬಿಜೆಪಿಯ ಕೆಲ ಹಿರಿಯ ನಾಯಕರ ಅಭಿಪ್ರಾಯ.

12 ವಲಸಿಗರಿಗೂ ಸಚಿವ ಸ್ಥಾನ?: ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದ 17 ಶಾಸಕರಲ್ಲಿ 12 ಮಂದಿ ಕಳೆದ ಸಂಪುಟದಲ್ಲಿ ಸಚಿವರಾಗಿದ್ದರು. ಈ 12 ಮಂದಿಗೆ ಈ ಬಾರಿಯೂ ಸ್ಥಾನ ನೀಡಬೇಕು ಎನ್ನುವುದು ಹೈಕಮಾಂಡ್ ನಿಲುವು ಎನ್ನಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದವರನ್ನು ಕೈಬಿಟ್ಟಲ್ಲಿ ಬೇರೆ ರಾಜ್ಯದಲ್ಲಿ ಇರುವ ಇಂಥದ್ದೇ ಕೆಲವು ಮುಖಂಡರಿಗೆ ತಪ್ಪು ಸಂದೇಶ ರವಾನೆಯಾದಂತೆ ಆಗಲಿದೆ. ಹೀಗಾಗಿ, 12 ಮಂದಿಯನ್ನು ಉಳಿಸಿಕೊಳ್ಳಬೇಕು ಎಂದು ವರಿಷ್ಠ ಮುಖಂಡರೊಬ್ಬರನ್ನು ಭೇಟಿಯಾದ ವೇಳೆ ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಲಾಗಿದೆ. ವಲಸಿಗರಲ್ಲಿ ನಾಲ್ಕೈದು ಮಂದಿಯನ್ನು ಕೈಬಿಡಬೇಕು ಎಂಬ ವಾದಗಳಿವೆ. ಅಂತಿಮವಾಗಿ ಜೆಪಿ ನಡ್ಡಾ ನೀಡುವ ಸಲಹೆಯೂ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಹೇಳಲಾಗುತ್ತಿದೆ.

ಸುರೇಶ್ ಕುಮಾರ್​ಗೆ ಇಲ್ಲ ಮಂತ್ರಿಗಿರಿ?: ಹಿರಿಯ ಶಾಸಕ ಸುರೇಶ್ ಕುಮಾರ್​ಗೂ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿ ಇದೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಎಸ್.ಎ. ರಾಮದಾಸ್ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ 12 ವಲಸಿಗ ಶಾಸಕರು ಮಂತ್ರಿ ಸ್ಥಾನ ಉಳಿಸಿಕೊಂಡರೆ ಬ್ರಾಹ್ಮಣ ಕೋಟಾದಲ್ಲಿ ಶಿವರಾಮ ಹೆಬ್ಬಾರ್ ಸ್ಥಾನಕ್ಕೆ ಧಕ್ಕೆಯಾಗದು. ಒಂದು ವೇಳೆ ರಾಮದಾಸ್​ಗೆ ಅವಕಾಶ ಸಿಕ್ಕರೆ ಸುರೇಶ್ ಕುಮಾರ್ ಕೈಬಿಡಬಹುದು. ಇಲ್ಲದಿದ್ದರೆ, ಸುರೇಶ್ ಕುಮಾರರನ್ನು ಸ್ಪೀಕರ್ ಮಾಡಿ ಕಾಗೇರಿಗೆ ಮಂತ್ರಿ ಸ್ಥಾನದ ಹಂಚಿಕೆಯಾಗಬಹುದು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಈಶ್ವರಪ್ಪ ಬೆನ್ನಿಗೆ ಸಂಘದ ನಾಯಕರು: ಕುರುಬ ಸಮುದಾಯದ ಕೆ.ಎಸ್. ಈಶ್ವರಪ್ಪನವರನ್ನು ಸಂಪುಟದಿಂದ ಕೈಬಿಡುವ ಮಾತುಗಳು ಕೇಳಿಬಂದಿದ್ದರೂ, ಸಂಘದ ಕೆಲ ಮುಖಂಡರು ಅವರ ಬೆನ್ನಿಗೆ ನಿಂತಿದ್ದಾರೆ. ಅವರನ್ನು ಸಂಪುಟದಿಂದ ದೂರವಿಟ್ಟಲ್ಲಿ ಸಂಘಟನೆ ಹಾಗೂ ಕಾರ್ಯಕರ್ತ ವರ್ಗಕ್ಕೆ ತಪ್ಪು ಸಂದೇಶ ರವಾನೆ ಆಗಬಹುದು. ಸಂಘಟನೆ ಅಥವಾ ಮೂಲ ಬಿಜೆಪಿಯವರು ಹೇಗೂ ಸಿಎಂ ಸ್ಥಾನದಲ್ಲಿಲ್ಲ. ಹೀಗಿರುವಾಗ, ಸಂಘಟನೆ ಹಿನ್ನೆಲೆಯವರನ್ನು ಕೈಬಿಟ್ಟಲ್ಲಿ ಭಿನ್ನಮತಕ್ಕೆ ಕಾರಣ ಆಗಬಹುದು ಎಂಬ ವಾದವಿದೆ. ಆದರೆ, ಅವರು ಸಂಘಟನೆಗೆ ಶ್ರಮಿಸಬೇಕು ಎಂಬ ಪ್ರತಿವಾದದ ಮಧ್ಯೆ ಇದನ್ನೆಲ್ಲ ಹೈಕಮಾಂಡ್ ಹೇಗೆ ವಿಮಶಿಸಲಿದೆ ಎಂಬುದೂ ಕುತೂಹಲಕರ. ಲಂಚ ಸ್ವೀಕಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡದಿರಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಅಶೋಕ್​ಗೆ ಸ್ಥಾನ ಸಾಧ್ಯತೆ: ಮಾಜಿ ಸಚಿವ ಆರ್.ಅಶೋಕ್-ಸಿಎಂ ಬೊಮ್ಮಾಯಿ ನಡುವಿನ ಒಡನಾಟದಿಂದಾಗಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣಗೆ ಸಚಿವ ಸ್ಥಾನ ಸಿಗುವುದಿಲ್ಲವೇನೋ ಎಂಬ ಆತಂಕವಿದೆ. ವರಿಷ್ಠರ ಜತೆಗಿನ ಮಾತುಕತೆ ವೇಳೆ ಬೊಮ್ಮಾಯಿ ಅವರು ಅಶೋಕ್ ಪರ ನಿಲುವು ತಳೆದಿದ್ದಾರೆ ಎಂದು ಸಿಎಂ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ದೆಹಲಿಗೆ ಬಂದಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಿಎಂ ಬೊಮ್ಮಾಯಿಯವರನ್ನು ಕರ್ನಾಟಕ ಭವನದಲ್ಲಿ ಭೇಟಿ ಮಾಡಿ, ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಮೇಲ್ಮನೆ ಕೋಟಾದಲ್ಲಿ ಸವದಿ ಬದಲಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ, ದಲಿತ ಸಮುದಾಯದ ರವಿಕುಮಾರ್ ಸೇರ್ಪಡೆ ಮಾಡಿದರೆ ಹೇಗೆ ಎಂಬ ಮಾತುಕತೆಯೂ ನಡೆದಿದೆ.

ಇಂದು ಸಂಜೆ ವರಿಷ್ಠರು ಅಂತಿಮ ಪಟ್ಟಿ ನಮಗೆ ಕಳುಹಿಸಿ ಕೊಡ್ತಾರೆ. ಅಲ್ಲಿವರೆಗೆ ನಾವು ಕಾಯುತ್ತೇವೆ. ಹೈಕಮಾಂಡ್ ನಿರ್ಧಾರ ಅಂತಿಮ. ಅವರು ಇನ್ನೊಂದು ಸುತ್ತು ಚರ್ಚೆ ಮಾಡಿ ಫೈನಲ್ ಮಾಡ್ತಾರೆ. ಎಷ್ಟು ಮಂದಿಯನ್ನು ಸೇರಿಸಿಕೊಳ್ಳಬೇಕು ಎನ್ನುವುದನ್ನೂ ವರಿಷ್ಠರು ನಿರ್ಧಾರ ಮಾಡ್ತಾರೆ.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ


Spread the love

About Laxminews 24x7

Check Also

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Spread the love ಬೀದರ್: ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ