Breaking News
Home / new delhi / ಸ್ಥಳೀಯ ಉದ್ಯಮಿಗಳೇ ಹೂಡಿಕೆಗೆ ಮುಂದಾಗಿ: ಸಚಿವ ಶೆಟ್ಟರ

ಸ್ಥಳೀಯ ಉದ್ಯಮಿಗಳೇ ಹೂಡಿಕೆಗೆ ಮುಂದಾಗಿ: ಸಚಿವ ಶೆಟ್ಟರ

Spread the love

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮ ವಲಯ ಅಭಿವೃದ್ಧಿಗಾಗಿ ಹೂಡಿಕೆದಾರರನ್ನು ಆಕರ್ಷಿಸಬೇಕು ಎಂಬ ಬೇಡಿಕೆ ಬಹುದಿನಗಳಿಂದ ಇದೆ. ಆದರೆ, ಹೊರಗಿನವರು ಬಂದು ಹೂಡಿಕೆ ಮಾಡಲಿ ಎಂದು ಕಾಯುವುದಕ್ಕಿಂತ ಸ್ಥಳೀಯರೇ ಮುಂದೆ ಬಂದರೆ ಹೆಚ್ಚು ಪ್ರಯೋಜನವಾಗಲಿದೆ. ಯಾವುದೇ ಪ್ರದೇಶದ ಅಭಿವೃದ್ಧಿಗೆ ಸ್ಥಳೀಯ ಹೂಡಿಕೆಯ ಪಾತ್ರ ದೊಡ್ಡದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಸಲಹೆ ನೀಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಎಚ್‌ಕೆಸಿಸಿಐ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ವಾಣಿಜ್ಯೋದ್ಯಮಿಗಳೊಂದಿಗೆ ಸಚಿವರ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೈಗಾರಿಕಾ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದೆ.

ಉದ್ಯಮ ಸ್ಥಾಪನೆಗೆ ಅಡ್ಡಿಯಾಗಿದ್ದ ಹಲವು ನಿಯಮಗಳನ್ನು ಸಡಿಲಿಸಲಾಗಿದೆ. ಅದರಲ್ಲೂ ಭೂ ಸುಧಾರಣೆ ಕಾಯ್ದೆಯ ‘ಸೆಕ್ಷನ್‌ 79ಎ ಮತ್ತು 79ಬಿ’ ತೆಗೆದುಹಾಕಲಾಗಿದೆ. ಇದರಿಂದ ಕೃಷಿ ಭೂಮಿಯಲ್ಲೂ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗಿದೆ. ಉದ್ಯಮಿಗಳು ರೈತರಿಂದ ನೇರವಾಗಿ 100 ಎಕರೆವರೆಗೂ ಭೂಮಿ ಖರೀದಿಸಬಹುದು. ಇದರಿಂದ ರೈತರಿಗೆ ಯಾವುದೇ ರೀತಿಯ ಅನ್ಯಾಯ ಆಗುವುದಿಲ್ಲ. ಸ್ಥಳೀಯರು ಈ ಅವಕಾಶ ಬಳಸಿಕೊಳ್ಳಲು ಮುಂದಾಗಬೇಕು’ ಎಂದೂ ಹೇಳಿದರು.

‘ಉದ್ಯಮ ಸ್ಥಾಪನೆಗೆ ಉದ್ದಿಮೆದಾರರು ಪಡುವ ಸಂಕಷ್ಟಗಳನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಿದ್ದು, ₹ 15 ಕೋಟಿ ವರೆಗಿನ ಯೋಜನೆಗಳ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಮೊತ್ತದ ನಾಲ್ಕು ಯೋಜನೆಗಳಿಗೆ ನಾನು ಮತ್ತು ಮುಖ್ಯಮಂತ್ರಿ ನೇತೃತ್ವದ ಸಮಿತಿ ಒಪ್ಪಿಗೆ ನೀಡುತ್ತದೆ’ ಎಂದರು.

ಹೆಚ್ಚಿನ ದರ ಕೇಳಿದರೆ ಕ್ರಮ: ‘ಜಿಲ್ಲೆಯ ಕಪನೂರ, ನಂದೂರ, ಕೆಸರಟಗಿ ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಉದ್ಯಮಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಉದ್ಯಮಿಗಳ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಕೆಐಎಡಿಬಿ ಮುಂದೆ ಅಭಿವೃದ್ಧಿಪಡಿಸುವ ವಸಾಹತು ಪ್ರದೇಶಗಳಲ್ಲಿ ಆರಂಭಿಕದ ದರ ನಿಗದಿಪಡಿಸಿದ ನಂತರ 2-3 ವರ್ಷದಲ್ಲಿ ದರ ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಶೇ 20ಕ್ಕಿಂತ ಹೆಚ್ಚಿನ ದರ ಏರಿಸಬಾರದು ಎಂದು ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.

ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ ಮಾತನಾಡಿ, ‘ನಂಜುಂಡಪ್ಪ ವರದಿ ಮತ್ತು 371ಜೆ ಅನ್ವಯ ಹಿಂದುಳಿದ ಪ್ರದೇಶವಾದ ಇಲ್ಲಿ ನೂತನ ಕೈಗರಿಕಾ ನೀತಿಯಲ್ಲಿ ಅಭಿವೃದ್ಧಿಪಡಿಸಬಹುದಾದ ಫೇಸ್-1ರಲ್ಲಿ ಕಲಬುರ್ಗಿ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲಿ ಉತ್ತಮ ರೈಲು ಸಂಪರ್ಕ ಹೊಂದಿರುವುದರಿಂದ ವಾಡಿಯಲ್ಲಿ ರೈಲ್ವೆ ಇಲಾಖೆಯಿಂದ ಇನ್‍ಲ್ಯಾಂಡ್ ಕಂಟೇನರ್ ಡಿಪೊ ಮತ್ತು ವಾಯು ಸಂಪರ್ಕಕ್ಕೆ ಈ ಭಾಗ ಜೋಡಣೆಯಾಗಿದ್ದರಿಂದ ಕಲಬುರ್ಗಿ ವಿಮಾನ ನಿಲ್ದಾಣಾದಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ರಫ್ತಿಗೆ ಪೂರಕವಾಗಿ ಕಾರ್ಗೊ ವಿಮಾನ ಸಂಚಾರ ಅರಂಭಿಸಬೇಕು’ ಎಂದು ಮನವಿ ಮಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ, ಸುನೀಲ ವಲ್ಯಾಪುರೆ, ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ, ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ, ಕೆ.ಐ.ಎ.ಡಿ.ಬಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್.ಶಿವಶಂಕರ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ವಿ. ರಘೋಜಿ, ಉದ್ಯಮಿಗಳಾದ ಶರಣಬಸಪ್ಪ ಪಪ್ಪಾ, ಸುರೇಶ ಜಿ. ನಂದ್ಯಾಳ, ಭಾರತಿ ಪಾಟೀಲ, ಶಿವಶರಣಪ್ಪ ಮದಗುಣಕಿ, ಮಾನಕರ ಹಾಗೂ ಅನೇಕ ಉದ್ಯಮಿಗಳು ಇದ್ದರು.

ಲಾಕ್‌ಡೌನ್‌ ಮಧ್ಯೆಯೂ ₹ 31 ಸಾವಿರ ಕೋಟಿ ಹೂಡಿಕೆ

‘ಕೊರೊನಾ ವೈರಾಣು ನಿಯಂತ್ರಣಕ್ಕೆ ಮಾಡಿದ ಲಾಕ್‌ಡೌನ್ ಕಾರಣ ಕೈಗಾರಿಕೆಗಳು ಕೂಡ ತೊಂದರೆ ಅನುಭವಿಸುತ್ತಿವೆ. ಈ ಸಂಕಷ್ಟದ ನಡುವೆಯೇ ರಾಜ್ಯದಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸಲು ₹ 31 ಸಾವಿರ ಕೋಟಿ ಹೂಡಿಕೆಯಾಗಿದೆ. 65 ಸಾವಿರ ಹೊಸ ಉದ್ಯೋಗಗಳು ಸೃಷ್ಠಿಯಾಗಿವೆ’ ಎಂದು ಸಚಿವ ಶೆಟ್ಟರ ತಿಳಿಸಿದರು.

‘ಕಲಬುರ್ಗಿಯಲ್ಲಿ ದಾಲ್‍ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಹಿಂದಿನ ಸಲ ನೀಡಿದ ಭರವಸೆಯಂತೆ ಅಲ್ಲಿ ರಸ್ತೆ ನಿರ್ಮಿಸಿಕೊಡಲಾಗಿದೆ. ಮುಚ್ಚಿರುವ ದಾಲ್‍ಮಿಲ್‍ಗಳ ಪುನಶ್ವೇತನಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು’ ಎಂದರು.

‘‌ಹಿಂದಿನ ಕೇಂದ್ರ ಸರ್ಕಾರ ಜಿಲ್ಲೆಗೆ ‘ನಿಮ್ಜ್‌’ ಘೋಷಣೆ ಮಾಡಿತ್ತು. ಅದಕ್ಕೆ ಪೂರಕಾಗಿರುವ ಕೆಲಸಗಳನ್ನು ಮಾಡಲಿಲ್ಲ. ಹೀಗಾಗಿ ಅದು ಕೈ ಜಾರಿದೆ. ಈಗ ಮತ್ತೆ ಪರಿಗಣಿಸುವಂತೆ ಕೋರಿ ಹೊಸ ಪ್ರಸ್ತಾವ ಸಲ್ಲಿಸಲು ಚರ್ಚೆ ನಡೆಸಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

 


Spread the love

About Laxminews 24x7

Check Also

ಉಪ್ಪು ತಿಂದವರು ನೀರು ಕುಡಿಯಲೇಬೇಕು:H.D.K.

Spread the loveಬೆಂಗಳೂರು: ಹಾಸನ ಸಂಸದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ವೈರಲ್ ಪ್ರಕರಣ ರಾಜ್ಯ ರಾಜಕೀಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ