Breaking News
Home / Uncategorized / ಬೆಳಗಾವಿ: ಮುಮ್ಮಡಿಗೊಂಡ ಕನ್ನಡಿಗರ ಸಂಭ್ರಮ

ಬೆಳಗಾವಿ: ಮುಮ್ಮಡಿಗೊಂಡ ಕನ್ನಡಿಗರ ಸಂಭ್ರಮ

Spread the love

ಬೆಳಗಾವಿ : ಒಂದೆಡೆ ಸ್ತಬ್ಧಚಿತ್ರಗಳ ಮೆರವಣಿಗೆ, ಮತ್ತೊಂದೆಡೆ ಯುವಜನರ ಹಾಡು- ಕುಣಿತ.

ನಗರದಲ್ಲಿ ಮಂಗಳವಾರ ಕಂಡುಬಂದ 67ನೇ ಕರ್ನಾಟಕ ರಾಜ್ಯೋತ್ಸವದ ನೋಟವಿದು. ಮೂರು ವರ್ಷಗಳಿಂದ ಅದುಮಿಟ್ಟಿಗೊಂಡಿದ್ದ ನಾಡಭಕ್ತಿ ಏಕಾಏಕಿ ಅನಾವರಣಗೊಂಡಿತು. ಒತ್ತಕ್ಕಿ ಇಟ್ಟ ಸ್ಪ್ರಿಂಗು ನೆಗೆಯುವಂತೆ ಕನ್ನಡ ಹೃದಯಗಳು ಛಂಗನೆ ನೆಗೆದುಬಂದವು.

 

ಎರಡು ವರ್ಷಗಳಿಂದ ಕೊರೊನಾ ಕಾಟಕ್ಕೆ ಮೆರವಣಿಗೆ ಕೈಬಿಡಲಾಗಿತ್ತು. ಕಳೆದ ವರ್ಷ ನಟ ಪುನೀತ್‌ ರಾಜ್‌ಕುಮಾರ್‌ ಅಗಲಿಕೆಯ ನೋವಲ್ಲಿ ಸಾಂಕೇತಿಕವಾಗಿ ಆಚರಿಸಲಾಗಿತ್ತು. ಈ ಬಾರಿ ಎಲ್ಲ ಅಡ್ಡಿಗಳೂ ದೂರಾಗಿದ್ದರಿಂದ ಸಂಭ್ರಮ ಮುಮ್ಮಡಿಗೊಂಡಿತು.

 

ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಎತ್ತಿನಬಂಡಿಯಲ್ಲಿ ಭುವನೇಶ್ವರಿಯ ಪ್ರತಿಮೆ ಮೆರವಣಿಗೆ ಮಾಡಲಾಯಿತು. ಇದರೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಣ್ಯ ಇಲಾಖೆ, ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ವೈವಿಧ್ಯಮಯ ಸ್ತಬ್ಧಚಿತ್ರಗಳ ಮೆರವಣಿಗೆ ಮಾಡಿದವು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಕೃಷ್ಣದೇವರಾಯ, ಪುನೀತ್ ರಾಜ್‌ಕುಮಾರ್‌, ಯಕ್ಷಗಾನ, ದೈವದ ಕೋಲ, ಕಂಬಳ… ಹೀಗೆ ನಾನಾ ಬಗೆಯ ರೂಪಕಗಳು ಕಣ್ಮನ ಸೆಳೆದವು.

ಸಾರಿಗೆ ಸಂಸ್ಥೆಯಿಂದ ವಿಶೇಷವಾಗಿ ಅಲಂಕರಿಸಿದ ಎರಡು ಬಸ್‌ಗಳನ್ನೂ ಮೆರವಣಿಗೆಗೆ ಬಿಡಲಾಯಿತು. ವಿವಿಧ ರೂಪಗಳಲ್ಲಿ ಭುವನೇಶ್ವರಿಯ ಪ್ರತಿಮೆಗಳನ್ನು ಮಾಡಿ ಪೂಜಿಸಿದ ಯುವಕ- ಯುವತಿಯರು ನಾಡಗೀತೆಗೆ ದನಿಗೂಡಿಸಿದರು.

 

ಬೆಳಿಗ್ಗೆ 11ರ ಸುಮಾರಿಗೆ ಆರಂಭವಾದ ಮೆರವಣಿಗೆ ತಡರಾತ್ರಿಯೂ ಮುಂದುವರಿಯಿತು. ಲಾರಿ, ಟ್ರ್ಯಾಕ್ಟರುಗಳಲ್ಲಿ ಡಿ.ಜೆ ಸೌಂಡ್‌ ಸಿಸ್ಟಂ ಹಾಕಿಕೊಂಡು, ಹಳದಿ- ಕೆಂಪು ಬಣ್ಣದ ಕನ್ನಡ ಬಾವುಟ ಹೆಗಲೇರಿಸಿಕೊಂಡು ಯುವಜನರು ಕುಣಿದು ಕುಪ್ಪಳಿಸಿದರು. ಉದ್ದ ಕೋಲಿಗೆ ಕಟ್ಟಿದ ಬಾವುಟವನ್ನು ಎಲ್ಲ ದಿಕ್ಕಿಗೂ ತಿರುಗಿಸುತ್ತ, ಕನ್ನಡ ತಾಯಿಗೆ ನಮನ ಸಲ್ಲಿಸಿದರು. ನಾಡು- ನುಡಿಯ ಹಿರಿಮೆ ಬಿಂಬಿಸುವ ಚಲನಚಿತ್ರ ಗೀತೆಗಳು ಒಂದೊಂದಾಗಿ ಹರಿದುಬಂದವು. ಅದಕ್ಕೆ ತಕ್ಕಂತೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು.

 

ಮತ್ತೆ ಕೆಲವರು ತಮ್ಮ ಬೈಕುಗಳಿಗೆ ಕನ್ನಡ ಅಲಂಕಾರ ಮಾಡಿದರು. ಹಲವರು ಇತಿಹಾಸ ಪುರುಷರ, ಪೌರಾಣಿಕ ಪಾತ್ರಗಳ ವೇಷ ಧರಿಸಿದರು. ಇಕ್ಕೆಲಗಳಲ್ಲಿ ಸೇರಿದ್ದ ಜನ ಅವರೊಂದಿಗೆ ಸೆಲ್ಫಿ- ಫೋಟೊಗಾಗಿ ಮುಗಿಬಿದ್ದರು.


Spread the love

About Laxminews 24x7

Check Also

ಹೆಸರು ಬದಲಿಸಿಕೊಂಡ ಅಗ್ನಿಸಾಕ್ಷಿ ನಟ ವಿಜಯ್‌ ಸೂರ್ಯ; ಹೊಸ ಹೆಸರೇನು?

Spread the love ನಟ ವಿಜಯ್ ಸೂರ್ಯ ಯಾರಿಗೆ ತಾನೆ ಪರಿಚಯ ಇಲ್ಲ ಹೇಳಿ. ಗುಳಿ ಕೆನ್ನೆ, ಕ್ಯೂಟ್‌ ಸ್ಮೈಲ್‌, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ