Breaking News
Home / new delhi / ಸಾಲ ಮರುಪಾವತಿ 2 ವರ್ಷ ವಿಸ್ತರಣೆ ಸಾಧ್ಯ: ಸುಪ್ರೀಂ ಕೋರ್ಟ್‌ಗೆ ಆರ್‌ಬಿಐ ಹೇಳಿಕೆ

ಸಾಲ ಮರುಪಾವತಿ 2 ವರ್ಷ ವಿಸ್ತರಣೆ ಸಾಧ್ಯ: ಸುಪ್ರೀಂ ಕೋರ್ಟ್‌ಗೆ ಆರ್‌ಬಿಐ ಹೇಳಿಕೆ

Spread the love

ನವದೆಹಲಿ: ಕೋವಿಡ್‌ ಪಿಡುಗಿನಿಂದಾದ ಆರ್ಥಿಕ ಹಿನ್ನಡೆಗೆ ಪರಿಹಾರವಾಗಿ ಪ್ರಕಟಿಸಲಾದ ಸಾಲ ಮರು‍ಪಾವತಿ ಮುಂದೂಡಿಕೆಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)‌ ತಿಳಿಸಿವೆ. ಆದರೆ, ವಿವಿಧ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳು ಭಿನ್ನವಾಗಿವೆ. ಹಾಗಾಗಿ, ಏಕರೂಪದ ಪರಿಹಾರವೊಂದನ್ನು ಒದಗಿಸುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ಒಟ್ಟು ಆಂತರಿಕ ಉತ್ಪನ್ನವು ಶೇ 23ರಷ್ಟು ಕುಸಿದಿದೆ. ಯಾವ ಕ್ಷೇತ್ರಕ್ಕೆ ಎಷ್ಟು ಹೊಡೆತ ಬಿದ್ದಿದೆ ಎಂಬುದನ್ನು ಇನ್ನಷ್ಟೇ ಗುರುತಿಸಬೇಕಿದೆ. ಅದರ ಆಧಾರದಲ್ಲಿ ಯಾವ ಕ್ಷೇತ್ರಕ್ಕೆ ಯಾವ ರೀತಿಯ ಪರಿಹಾರ ಅಗತ್ಯ ಎಂಬುದನ್ನು ನಿರ್ಧರಿಸಬೇಕಿದೆ ಎಂದು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ.

ಸಾಲ ಮರುಪಾವತಿ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ಮಾಡುವಂತೆ ಕೋರಿ ಗಜೇಂದ್ರ ಶರ್ಮಾ ಎಂಬವರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ. 26ರಂದು ನಡೆದ ವಿಚಾರಣೆ ಸಂದರ್ಭ
ದಲ್ಲಿ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಆರ್‌ಬಿಐಯ ಹಿಂದೆ ಅಡಗಿಕೊಳ್ಳದೆ ಪರಿಹಾರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿತ್ತು.

ಠೇವಣಿದಾರರ ಹಿತವೂ ಮುಖ್ಯ: ಸಾಲ ನೀಡಿರುವ ಬ್ಯಾಂಕುಗಳು ಕೋಟ್ಯಂತರ ಠೇವಣಿದಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇವರಲ್ಲಿ ಹೆಚ್ಚಿನವರು ತಮ್ಮ ಠೇವಣಿಗೆ ದೊರಕುವ ಬಡ್ಡಿಯ ಮೇಲೆಯೇ ಅವಲಂಬಿತರಾಗಿ ಬದುಕುತ್ತಿರುವವರು ಎಂದು ಹಣಕಾಸು ಸಚಿವಾಲಯ ಹೇಳಿದೆ.

ಪೂರ್ಣ ಬಡ್ಡಿಮನ್ನಾ ಅನುಮಾನ

ಸಾಲ ಮರುಪಾವತಿ ಮುಂದೂಡಿರುವ ಅವಧಿಗೆ ಬಡ್ಡಿ ಮನ್ನಾ ಮಾಡಬೇಕು ಎಂದು ಕೋರಿ ಗಜೇಂದ್ರ ಶರ್ಮಾ ಎಂಬವರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ಬಡ್ಡಿಯನ್ನು ಪೂರ್ಣವಾಗಿ ಮನ್ನಾ ಮಾಡುವುದರಿಂದ ಬ್ಯಾಂಕುಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಆರ್‌ಬಿಐ, ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ವಾದಿಸಿತ್ತು. ಪೂರ್ಣ ಅವಧಿಯ ಬಡ್ಡಿ ಮತ್ತು ಈ ಅವಧಿಯ ಬಡ್ಡಿಯ ಮೇಲಿನ ಬಡ್ಡಿ ಪಾವತಿಯ ಎರಡು ವಿಚಾರಗಳಿವೆ ಎಂಬುದೂ ವಿಚಾರಣೆ ಸಂದರ್ಭದಲ್ಲಿ ಪ್ರಸ್ತಾಪವಾಗಿತ್ತು.

ಬಡ್ಡಿಯ ಮೇಲೆ ಬಡ್ಡಿ ಹೇರಿಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಇನ್ನಷ್ಟು ಸಮಯ ಬೇಕು ಎಂದು ತುಷಾರ್‌ ಮೆಹ್ತಾ ಅವರು ನ್ಯಾಯಾಲಯಕ್ಕೆ ಮಂಗಳವಾರ ಹೇಳಿದ್ದಾರೆ. ಅವರು ಮುಂದೂಡಿಕೆ ಅವಧಿಯ ಪೂರ್ಣ ಬಡ್ಡಿ ಮನ್ನಾದ ವಿಚಾರವನ್ನು ಉಲ್ಲೇಖಿಸಿಲ್ಲ. ಹಾಗಾಗಿ, ಇಡೀ ಅವಧಿಯ ಬಡ್ಡಿ ಮನ್ನಾ ಸಾಧ್ಯತೆ ಕ್ಷೀಣ ಎಂದು ಹೇಳಲಾಗಿದೆ.

ವಿಸ್ತರಣೆ: ಬ್ಯಾಂಕ್‌ಗಳಿಗೆ ಅವಕಾಶ

ಬಡ್ಡಿ ದರದಲ್ಲಿ ವಿನಾಯಿತಿ ಮತ್ತು ಸಾಲ ಮರುಪಾವತಿ ಮುಂದೂಡಿಕೆಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲು ಆಗಸ್ಟ್‌ 6ರಂದು ನೀಡಿದ ಸುತ್ತೋಲೆಯಲ್ಲಿಯೇ ಬ್ಯಾಂಕುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹಣಕಾಸು ಸಚಿವಾಲಯವು ಹೇಳಿದೆ.

ಮರುಪಾವತಿ ಮುಂದೂಡಿಕೆ ವಿಸ್ತರಣೆ ಮತ್ತು ಇತರ ಸೌಲಭ್ಯಗಳು ಸಾಲಗಾರನಿಗೆ ದೊರೆಯುವ ವ್ಯಕ್ತಿಗತ ಪರಿಹಾರ. ಕೋವಿಡ್‌ ಪಿಡುಗಿನಿಂದಾದ ನಿರ್ದಿಷ್ಟ ಸನ್ನಿವೇಶಕ್ಕೆ ಆರ್‌ಬಿಐ ನೀಡಿದ ಚೌಕಟ್ಟು ಅನ್ವಯವಾಗುತ್ತದೆ. ಸೆಪ್ಟೆಂಬರ್‌ 1ರಿಂದ ತಾವು ಸುಸ್ತಿದಾರರಾಗಬಹುದು ಮತ್ತು ನಂತರದ ದಿನಗಳಲ್ಲಿ ತಮ್ಮ ಸಾಲವು ವಸೂಲಾಗದ ಸಾಲವಾಗಿ ಪರಿವರ್ತನೆ ಆಗಬಹುದು ಎಂಬ ಭೀತಿ ಇರುವ ಸಾಲಗಾರರು ಮರುಪಾವತಿ ಮುಂದೂಡಿಕೆಯ ವಿಸ್ತರಣೆ ಸೌಲಭ್ಯ ಪಡೆದುಕೊಳ್ಳಬಹುದು. ಇದು ಸುತ್ತೋಲೆಯಲ್ಲಿನ ಪರಿಹಾರ ಯೋಜನೆಯ ಭಾಗ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಪ್ರತಿ ವರ್ಗದ ಸಾಲಗಾರರಿಗೆ ವಿವಿಧ ವರ್ಗಗಳ ಬ್ಯಾಂಕುಗಳು ಅಥವಾ ಸಾಲ ನೀಡಿಕೆ ಸಂಸ್ಥೆಗಳು ವಿಧಿಸುವ ಬಡ್ಡಿಯ ದರ, ಸಾಲದ ಅವಧಿ ಹಾಗೂ ಇನ್ನಿತರ ಹಲವು ಅಂಶಗಳು ವಿಭಿನ್ನವಾಗಿರುತ್ತವೆ ಎಂದು ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಠೇವಣಿದಾರರ ಹಿತವೂ ಮುಖ್ಯ

ಸಾಲ ನೀಡಿರುವ ಬ್ಯಾಂಕುಗಳು ಕೋಟ್ಯಂತರ ಠೇವಣಿದಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇವರಲ್ಲಿ ಹೆಚ್ಚಿನವರು ತಮ್ಮ ಠೇವಣಿಗೆ ದೊರಕುವ ಬಡ್ಡಿಯ ಮೇಲೆಯೇ ಅವಲಂಬಿತರಾಗಿ ಬದುಕುತ್ತಿರುವವರು. ಒಂದು ಅಂದಾಜು ಪ್ರಕಾರ, ವಾಣಿಜ್ಯ ಬ್ಯಾಂಕುಗಳಲ್ಲಿ ಇರುವ ಠೇವಣಿ ಖಾತೆಗಳ ಸಂಖ್ಯೆ 197 ಕೋಟಿಗೂ ಹೆಚ್ಚು.


Spread the love

About Laxminews 24x7

Check Also

ಪ್ರತೀ ಬಾರಿ ರಾಜ್ಯಕ್ಕೆ ಬರೋದು ಹೊಸ ಹೊಸ ಸುಳ್ಳು ಹೇಳಿ ಹೋಗೋದು.ಮೋದಿ ವಿರುದ್ಧ ಸಿಎಂ ವಾಗ್ದಾಳಿ

Spread the love ಚಿಕ್ಕೋಡಿ : ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೆಲ್ಲಾ ಮೋದಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ. ಹೆಣ್ಣುಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ