ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಮತ್ತೊಂದು ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಯಲ್ಲಿ 7,466 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಒಂಭತ್ತನೇ ಸ್ಥಾನಕ್ಕೆ ಏರಿದೆ.
ಭಾರತದಲ್ಲಿ ಈವರೆಗೂ 1,65,799 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ 1,60,979 ಸೋಂಕಿತರು ಹೊಂದಿ ಒಂಭತ್ತನೇ ಸ್ಥಾನದಲ್ಲಿದ್ದ ಟರ್ಕಿಯನ್ನು ಹಿಂದಿಕ್ಕಿದೆ. ಇತ್ತಿಚೀಗಷ್ಟೇ ಭಾರತ, ಪೆರು, ಇರಾನ್, ಕೆನಡಾವನ್ನು ಹಿಂದಿಕ್ಕಿ ಹತ್ತನೇ ಸ್ಥಾನದಲ್ಲಿತ್ತು.
ಇಂದಿನ ವರದಿಯಲ್ಲಿ ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 7,466 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 175 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೂ ಕೊರೊನಾ ಪೀಡಿತರ ಸಂಖ್ಯೆ 1,65,799ಕ್ಕೆ ಏರಿಕೆಯಾದರೆ 89,987 ಸಕ್ರಿಯ ಪ್ರಕರಣ ಹಾಗೂ 71,105 ಮಂದಿ ಕೊರೊನಾ ಗುಣಮುಖ ಹೊಂದಿದ್ದಾರೆ. ಈವರೆಗೂ ದೇಶದಲ್ಲಿ 4,706 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.
ಕಳೆದೊಂದು ವಾರದಿಂದ ದೇಶದಲ್ಲಿ ಕೊರೊನಾ ಸೋಂಕು ನಿರಂತರವಾಗಿ ಹೆಚ್ಚಾಗುತ್ತಿದೆ. ಮೇ 21 ರಂದು 6,088, ಮೇ 22 ರಂದು 6,654, ಮೇ 23 ರಂದು 6,767, ಮೇ 24 ರಂದು 6,977, ಮೇ 25 ರಂದು 6,535, ಮೇ 26 ರಂದು 6,387, ಮೇ 27 ರಂದು 6,566 ಮತ್ತು ಮೇ 28 ರಂದು 7,466 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ಭಾರತ, ಫ್ರಾನ್ಸ್ ಮತ್ತು ಜರ್ಮನಿಯನ್ನು ಹಿಂದಿಕ್ಕುವ ಸಾಧ್ಯತೆಗಳಿದೆ. ದಿನ ಕಳೆದಂತೆ ಭಾರತ ಅತಿ ಹೆಚ್ಚು ಕೊರೊನಾ ಪೀಡಿತ ಟಾಪ್ ಐದು ದೇಶಗಳ ಪಟ್ಟಿ ಸೇರುವ ಸಾಧ್ಯತೆ ಇದ್ದು, ಆತಂಕ ಹೆಚ್ಚು ಮಾಡಿದೆ.