Breaking News
Home / Uncategorized / ರಾಜ್ಯದಲ್ಲಿ ಗ್ರಾಮೀಣ ಪ್ರದೇಶಕ್ಕೂ ಲಗ್ಗೆಯಿಟ್ಟ ಹೆಮ್ಮಾರಿ ಕೊರೊನಾ..!

ರಾಜ್ಯದಲ್ಲಿ ಗ್ರಾಮೀಣ ಪ್ರದೇಶಕ್ಕೂ ಲಗ್ಗೆಯಿಟ್ಟ ಹೆಮ್ಮಾರಿ ಕೊರೊನಾ..!

Spread the love

ತುಮಕೂರು/ಬೆಂಗಳೂರು, ಮೇ 25- ಮಹಾಮಾರಿ ಕೊರೊನಾ ಹಳ್ಳಿ ಹಳ್ಳಿಗೂ, ಗಲ್ಲಿ ಗಲ್ಲಿಗೂ ವಕ್ಕರಿಸಿದೆ. ನಗರ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ.

ಲಾಕ್‍ಡೌನ್ ನಿಯಮಗಳನ್ನು ಚಾಚೂತಪ್ಪದೆ ಕಡ್ಡಾಯವಾಗಿ ಪಾಲಿಸುತ್ತ ಕೊರೊನಾ ಸೋಂಕಿತರನ್ನಾಗಲಿ, ಶಂಕಿತರನ್ನಾಗಲಿ ಒಳಗೆ ಬಿಟ್ಟುಕೊಳ್ಳದೆ ಗ್ರಾಮಗಳಲ್ಲಿ ಅತಿ ಎಚ್ಚರಿಕೆಯಿಂದ ನಿಗಾ ವಹಿಸಿದ್ದ ಹಿನ್ನೆಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಗ್ರಾಮಾಂತರ ಪ್ರದೇಶದಲ್ಲಿ ಪತ್ತೆಯಾಗಿರಲಿಲ್ಲ.

ಆದರೆ, ಲಾಕ್‍ಡೌನ್ ಸಡಿಲಿಕೆಯಾಗಿ ಹಳ್ಳಿಗಳಿಗೆ ಬರುವವರು, ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮಹಾಮಾರಿ ಕೊರೊನಾ ತನ್ನ ಕಬಂಧ ಬಾಹುವನ್ನು ಚಾಚಿ ಹಳ್ಳಿಗಳಿಗೂ ಕಾಲಿಟ್ಟಿದೆ.

ಬೆಳಗಾವಿಯ ಹಿರೇಬಾಗೇವಾಡಿ, ತಾಲ್ಲೂಕಿನ ಹಲವೆಡೆ ಕೊರೊನಾ ಸೋಂಕಿತರು ಕಂಡುಬಂದರೆ, ಹಾಸನದಲ್ಲಿ ನಿನ್ನೆ ಪೋಲೀಸ್ ಕಾನ್ಸ್‍ಟೆಬಲ್ ಒಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಉಡುಪಿಯಲ್ಲಿ ಚೆಕ್‍ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಕಂಡುಬಂದಿದೆ.

ಮಾಗಡಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಕೆಎಸ್‍ಆರ್‍ಟಿಸಿ ಸಿಬ್ಬಂದಿಗೆ ಕೊರೊನಾ ಇರುವುದು ಪತ್ತೆಯಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ನರ್ಸ್‍ಗಳು ಹೀಗೆ ವಾರಿಯರ್ಸ್‍ಗಳನ್ನು ಕೊರೊನಾ ಬಿಟ್ಟಿಲ್ಲ. ಗ್ರಾಮಾಂತರ ಪ್ರದೇಶಗಳಿಗೂ ಹಬ್ಬುತ್ತಿದೆ.

ಕಂಡಕ್ಟರ್‍ಗೆ ಕೊರೊನಾ: ತುಮಕೂರು ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ಮಾವಿನಕುಂಟೆ ಗ್ರಾಮದ ನಿವಾಸಿಯೂ ಆಗಿರುವ ಮಾಗಡಿ ಬಸ್ ಡಿಪೋದಲ್ಲಿ ಕೆಎಸ್‍ಆರ್‍ಟಿಸಿ ಕಂಡಕ್ಟರ್ ಕಂ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದ ಇವರು ಇದೀಗ ಲಾಕ್‍ಡೌನ್ ಸಡಿಲಿಕೆಯಾಗಿದ್ದರಿಂದ ಕರ್ತವ್ಯ ನಿಮಿತ್ತ ಮಾಗಡಿಗೆ ಹೋಗಿ ನಾಲ್ಕೈದು ದಿನ ಅಲ್ಲೇ ಇದ್ದರು. ಮೂರು ದಿನಗಳ ಹಿಂದೆ ಮಾವಿನಕುಂಟೆ ನಿವಾಸಕ್ಕೆ ಬಂದಿದ್ದು, ಇದೀಗ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಇವರು ಕೊರೊನಾ ಪರೀಕ್ಷೆಗೆ ಒಳಪಟ್ಟು ಮನೆಗೆ ಹಿಂದಿರುಗಿದ್ದರು.

ರಾತ್ರಿ ಇವರ ವೈದ್ಯಕೀಯ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಇವರ ಕುಟುಂಬದ ನಾಲ್ವರು ಸದಸ್ಯರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ.

ಇದೀಗ ಕಂಡಕ್ಟರ್ ಸಂಪರ್ಕದಲ್ಲಿದ್ದವರನ್ನು ಹಾಗೂ ಅವರ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ.

ಇಂದು ಬೆಳಗ್ಗೆ ಗ್ರಾಮಾಂತರ ಶಾಸಕ ಗೌರಿಶಂಕರ್, ತಹಸೀಲ್ದಾರ್ ಮೋಹನ್‍ಕುಮಾರ್, ಕುಟುಂಬ ಕಲ್ಯಾಣಾಧಿಕಾರಿ ನಾಗೇಂದ್ರಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿ ಕೇಶವರಾಜು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಗ್ರಾಮದಲ್ಲಿ 600ಕ್ಕೂ ಹೆಚ್ಚು ಮಂದಿ ವಾಸವಾಗಿದ್ದು, ಇಲ್ಲಿನ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಯಾರೂ ಭಯ ಪಡಬೇಕಿಲ್ಲ. ಸೋಂಕಿತ ವ್ಯಕ್ತಿಯೂ ಗುಣಮುಖರಾಗುತ್ತಾರೆ. ಸ್ವಚ್ಛತೆ ಕಾಪಾಡಿಕೊಳ್ಳಿ. ತುಮಕೂರಿನ ಪ್ರತಿ ಮನೆಮನೆಗೂ ಸ್ಯಾನಿಟೈಜರ್, ಮಾಸ್ಕ್‍ಗಳನ್ನು ನೀಡಲಾಗುತ್ತದೆ. ಗ್ರಾಮವನ್ನು ಬಿಟ್ಟು ಯಾರೂ ಹೊರಹೋಗಬೇಡಿ.

ತಮಗೆಲ್ಲರಿಗೂ ಅಗತ್ಯ ವಸ್ತುಗಳನ್ನು ಒಂದು ತಿಂಗಳಿಗಾಗುವಷ್ಟು ಸಾಮಗ್ರಿಗಳನ್ನು ವಿತರಿಸುತ್ತೇವೆ ಎಂದು ಗೌರವಿಶಂಕರ್ ಅವರು ಅಭಯ ನೀಡಿದರು. ಇಡೀ ಗ್ರಾಮದ ಎಲ್ಲರಿಗೂ ರ್ಯಾಂಡಮ್ ಟೆಸ್ಟ್ ಮಾಡುವಂತೆ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ನಾಗೇಂದ್ರಪ್ಪ ಅವರಿಗೆ ಶಾಸಕರು ಸೂಚಿಸಿದರು.

# ಮನೆ ಮನೆಗೆ ಡಿಎಚ್‍ಒ ಭೇಟಿ: ಕಟುಂಬ ಕಲ್ಯಾಣ ಇಲಾಖೆ ಅಧಿಕಾರಿ ನಾಗೇಂದ್ರಪ್ಪ, ತಹಸೀಲ್ದಾರ್ ಮೋಹನ್‍ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಕೇಶವರಾಜು, ರೆವಿನ್ಯೂ ಅಧಿಕಾರಿಗಳಾದ ವಿನಯ್ ಸೇರಿದಂತೆ ಇತರರು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ತುಂಬಿದರು. ಗ್ರಾಮದಲ್ಲಿ ಔಷಧಿ ಸಿಂಪಡಣೆ ಸೇರಿದಂತೆ ಇನ್ನಿತರ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮೋಹನ್‍ಕುಮಾರ್ ಚರ್ಚೆ ನಡೆಸಿದರು.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ