ಬೆಂಗಳೂರು: 21 ದಿನಗಳ ಲಾಕ್‍ಡೌನ್ ನಿಂದ ಕೊರೊನಾ ನಿಯಂತ್ರಿಸಬಹುದೇ? ಕೊರೊನಾ ನಿಯಂತ್ರಣವಾಗದೇ ಇದ್ದರೆ ಮತ್ತೆ ಲಾಕ್‍ಡೌನ್ ಇರುತ್ತಾ ಈ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಣ್ಣ ಶುಭ ಸುದ್ದಿ ಸಿಕ್ಕಿದೆ. ಎರಡು ದಿನಗಳಿಂದ ಕೊರೊನಾ ಪ್ರಕರಣಗಳು ಕಡಿಮೆಯಾಗಿದೆ.
ಸಾಧಾರಣವಾಗಿ ಕೊರೊನಾ ಕಂಡು ಬಂದ ಮೊದಲ ಎರಡು ವಾರದಲ್ಲಿ ಹರಡುವ ತೀವ್ರತೆ ಕಡಿಮೆ ಇರುತ್ತದೆ. ಮೂರು, ನಾಲ್ಕು ವಾರದಲ್ಲಿ ಸಂಖ್ಯೆ ದುಪ್ಪಟ್ಟು ಆಗುತ್ತದೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಲೇ ಹೋಗುತ್ತದೆ.
ಶುಭ ಸುದ್ದಿ ಏನೆಂದರೆ ಶನಿವಾರ, ಭಾನುವಾರ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆ ದಾಖಲಾಗಿದೆ. ಶುಕ್ರವಾರ 151 ಪ್ರಕರಣ ದಾಖಲಾಗಿತ್ತು. ಶುಕ್ರವಾರ ಒಂದೇ ಬಾರಿಗೆ 151 ಪ್ರಕರಣ ಬೆಳಕಿಗೆ ಬಂದಿದ್ದನ್ನು ಗಮನಿಸಿದಾಗ ಶನಿವಾರ, ಭಾನುವಾರ ಏರಿಕೆ ಆಗಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಶನಿವಾರ, ಭಾನುವಾರ ಕಡಿಮೆ ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಮೂರು, ನಾಲ್ಕು ವಾರಗಳಲ್ಲಿ ಪ್ರಕರಣಗಳು ಏರಿಕೆ ಆಗುತ್ತಲೇ ಹೋಗುತ್ತಿತ್ತು. ಆದರೆ ಭಾರತದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗಿಲ್ಲ. ಹೀಗಾಗಿ ಇಲ್ಲಿ ಕೋವಿದ್19ಇಂಡಿಯಾ ವೆಬ್‍ಸೈಟ್ ನೀಡಿರುವ ಮಾಹಿತಿಯನ್ನು ನೀಡಲಾಗಿದೆ.
ಯಾವ ದಿನ ಎಷ್ಟು ಪ್ರಕರಣ ಬಂದಿದೆ?
ಮಾ.22 – 403(+69)
ಮಾ.23 – 505(+102)
ಮಾ.24 – 571(+66)
ಮಾ.25 – 657(+86)
ಮಾ.26 – 735(+78)
ಮಾ.27 – 886(+151)
ಮಾ.28 – 1029(+143)
ಮಾ.29 – 1139(+110)
ಕೊರೊನಾ ಸಾವಿನ ಪ್ರಕರಣಗಳು ಗಣನೆಗೆ ತೆಗೆದುಕೊಂಡಾಗ ಆತಂಕ ಎದುರಾಗುತ್ತದೆ. ಸೋಮವಾರ ಮಧ್ಯಾಹ್ನದವರೆಗೆ ಒಟ್ಟು ದೇಶದಲ್ಲಿ ಒಟ್ಟು 1192 ಮಂದಿಗೆ ಕೊರೊನಾ ಬಂದಿದ್ದು, 29 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 102 ಮಂದಿ ಗುಣಮುಖರಾಗಿದ್ದು, 1061 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರೂಕಿಂಗ್ ಇಂಡಿಯಾದ ಪ್ರಕಾರ ಒಂದು ವೇಳೆ ಲಾಕ್‍ಡೌನ್ ಘೋಷಣೆ ಮಾಡದೇ ಇದ್ದಲ್ಲಿ ಮಾರ್ಚ್ 2095 ಪ್ರಕರಣಗಳು ದಾಖಲಾಗಬೇಕಿತ್ತು.
ಎರಡು ದಿನ ಪ್ರಕರಣ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ನಾವು ಅಪಾಯದಿಂದ ಪಾರಾಗಿದ್ದೇವೆ ಎಂದರ್ಥವಲ್ಲ. ಸೋಂಕು ತಗಲಿದ 10, 11 ದಿನದ ಬಳಿಕ ಕೊರೊನಾದ ಲಕ್ಷಣಗಳು ಕಾಣಿಸಲು ಆರಂಭಿಸುತ್ತದೆ. ಹೀಗಾಗಿ ಈ ವಾರ ಮತ್ತು ಮುಂದಿನ ವಾರ ಭಾರತದ ಪಾಲಿಗೆ ನಿರ್ಣಾಯಕವಾಗಿದೆ.
ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಭಾರತ ಮಾರ್ಚ್ 22 ರಿಂದ ರದ್ದು ಮಾಡಿತ್ತು. ಹೀಗಾಗಿ ಮಾರ್ಚ್ ಮೂರು ಮತ್ತು ನಾಲ್ಕನೇಯ ವಾರದಲ್ಲಿ ಹಲವು ಮಂದಿ ವಿದೇಶದಿಂದ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ಮಂದಿಗೆ ಕೊರೊನಾ ಬರುವ ಸಾಧ್ಯತೆಯಿದೆ. ಆದರೆ ಅವರು ಈಗಾಗಲೇ ಕ್ವಾರಂಟೈನಲ್ಲಿದ್ದು, ಕ್ವಾರಂಟೈನ್ ನಿಯಮಗಳನ್ನ ಸರಿಯಾಗಿ ಪಾಲಿಸಿದ್ದರೆ ಕೊರೊನಾ ಹರಡುವ ಸಾಧ್ಯತೆ ಕಡಿಮೆಯಿದೆ.
ಲಾಕ್‍ಡೌನ್ ನಿರ್ಧಾರ ಪ್ರಕಟವಾಗುವ ಮೊದಲೇ ಭಾರತ ಸರ್ಕಾರ ಹಲವು ದೇಶಗಳ ಮೇಲೆ ನಿರ್ಬಂಧ ಹೇರಿತ್ತು. ಅಷ್ಟೇ ಅಲ್ಲದೇ ವಿದೇಶದಿಂದ ಬಂದವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಬೇಕೆಂದು ಸೂಚಿಸಿತ್ತು. ಇದಾದ ಬಳಿಕ ರಾಜ್ಯ ಸರ್ಕಾರಗಳು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಸಾರಿಗೆ ಸಂಚಾರಕ್ಕೆ ನಿಷೇಧ ಹೇರಿತ್ತು. ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿತ್ತು. ಇದಾದ ಬಳಿಕ ಜನತಾ ಕರ್ಫ್ಯೂ ಹೇರಿ ಬಳಿಕ ನರೇಂದ್ರ ಮೋದಿಯವರು 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದರು. ಈ ಎಲ್ಲ ಕ್ರಮಗಳಿಂದಾಗಿ ಕೊರೊನಾ ಹರಡುವ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.