ನವದೆಹಲಿ, ಏ.21- ವಿಶ್ವಾದ್ಯಂತ 1.70 ಲಕ್ಷ ಜನರನ್ನು ತಿಂದು ತೇಗಿರುವ ಕಿಲ್ಲರ್ ಕೊರೊನಾ ವೈರಸ್ ನಿಗ್ರಹಕ್ಕೆ ಜಗತ್ತಿನೆಲ್ಲೆಡೆ ವೈದ್ಯಕೀಯ ಪ್ರಯೋಗಗಳು ನಡೆಯುತ್ತಿರುವಾಗಲೇ ಪ್ಲಾಸ್ಮಾ ಚಿಕಿತ್ಸೆ ಭರವಸೆಯ ಆಶಾ ಕಿರಣ ಮೂಡಿಸಿದೆ.
ದೆಹಲಿಯಲ್ಲಿ ನಿನ್ನೆ 45 ವರ್ಷದ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾದ ಬಳಿಕ ಈ ವಿಧಾನವನ್ನು ಭಾರತದಲ್ಲಿ ಅತ್ಯಂತ ಜಾಗ್ರತೆಯಿಂದ ಬಳಸುವುದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಡ್ರಗ್ ಕಂಟ್ರೋಲರ್ ಹಸಿರು ನಿಶಾನೆ ತೋರಿಸಿದೆ.
ಇದರಿಂದಾಗಿ ಕೊರೊನಾ ನಿಗ್ರಹಕ್ಕೆ ಇದು ರಾಮಬಾಣವಾಗ ಬಹುದೆಂಬ ಆಶಾ ಭಾವನೆ ವ್ಯಕ್ತವಾಗಿದೆ.
# ಏನಿದು ಪ್ಲಾಸ್ಮಾ ಚಿಕಿತ್ಸೆ :
ಇದನ್ನು ಕಾನ್ವಲ್‍ಸೆಂಟ್ ಪ್ಲಾಸ್ಮಾ ಥೆರಪಿ (ಸಿಪಿಟಿ). ಇದು ಅತ್ಯಂತ ಸರಳ ವಿಧಾನ. ಸೋಂಕು ಪೀಡಿತ ರೋಗಿಯನ್ನು ಈ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಆತ ಚೇತರಿಸಿಕೊಂಡ ಅಥವಾ ಗುಣಮುಖನಾದ ನಂತರ ಆತನ ರಕ್ತದಲ್ಲಿರುವ ರೋಗ ಪ್ರತಿರೋಧಕ ಕಣಗಳನ್ನು ಮತ್ತೋರ್ವ ಸೋಂಕಿತ ವ್ಯಕ್ತಿಯ ದೇಹದೊಳಗೆ ಸೇರಿಸಲಾಗುತ್ತದೆ.
ರೋಗಿಯ ದೇಹ ಪ್ರವೇಶಿಸಿದ ರೋಗ ಪ್ರತಿರೋಧಕ ಕಣಗಳು ಆತನ ರಕ್ತದಲ್ಲಿರುವ ವೈರಾಣುಗಳ ವಿರುದ್ಧ ಹೋರಾಡುತ್ತದೆ. ಅಲ್ಲದೆ ಆತನಲ್ಲಿರುವ ಸ್ವಾಭಾವಿಕ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಇದನ್ನು ಸರಳವಾಗಿ ಹೇಳುವುದಾದರೆ ಈ ಚಿಕಿತ್ಸೆಯನ್ನು ಮುಳ್ಳಿನಿಂದ ಮುಳ್ಳನ್ನು ತೆಗೆಯುವ ವಿಧಾನಕ್ಕೆ ಹೋಲಿಸಬಹುದು.
ರೋಗ ಪೀಡಿತ ವ್ಯಕ್ತಿ ಗುಣಮುಖನಾದ ನಂತರ ಆತನಿಗೆ ನೀಡಲಾಗಿದ್ದ ಪ್ಲಾಸ್ಮಾ ಚಿಕಿತ್ಸೆಯ ರೋಗ ಪ್ರತಿರೋಧಕ ಕಣಗಳನ್ನು ಮತ್ತೊಬ್ಬ ರೋಗಿಗೆ ಬಳಸಿ ಆತನಲ್ಲಿನ ರೋಗಕಾರಕ ವೈರಸ್‍ಗಳನ್ನು ನಿರ್ಮೂಲನೆ ಮಾಡಲಾಗುತ್ತದೆ. ಚೀನಾ, ಅಮೆರಿಕಾ ನಂತರ ಇದೀಗ ಭಾರತದಲ್ಲಿ ನಡೆಸಲಾದ ಕ್ಲಿನಿಕಲ್ ಟ್ರಯಲ್ (ಪ್ರಾಯೋಗಿಕ ಪರೀಕ್ಷೆ) ಯಶಸ್ವಿಯಾಗಿದ್ದು , ಇದೇ ಮೊದಲ ಬಾರಿಗೆ ಅತ್ಯುತ್ತಮ ಫಲಿತಾಂಶ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಐಸಿಎಂಆರ್‍ಎ ಮತ್ತು ಡಿಸಿ ಈ ವಿಧಾನವನ್ನು ಅತ್ಯಂತ ಎಚ್ಚರಿಕೆಯಿಂದ ಬಳಸುವಂತೆ ಹಸಿರು ನಿಶಾನೆ ತೋರಿದೆ. ರೋಗಿಗೆ ಪ್ಲಾಸ್ಮಾ ಚಿಕಿತ್ಸೆ (ರಕ್ತದಲ್ಲಿನ ದ್ರವ ರೂಪದಲ್ಲಿನ ರೋಗ ಪ್ರತಿರೋಧಕ ಕಣಗಳು)ಗೆ ಒಳಪಡಿಸುವ ಮುನ್ನ ಇದನ್ನು ಹೆಪಟೈಟಿಸ್ ಬಿ , ಎಚ್‍ಐವಿ ಮೊದಲಾದ ರೋಗಗಳ ಪರೀಕ್ಷೆಗೆ ಒಳಪಡಿಸಿದ ನಂತರವಷ್ಟೇ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
2014ರಲ್ಲಿ ಮಾರಕ ಎಬೋಲಾ ವೈರಸ್ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಬಳಸಲು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿತ್ತು. ಆದರೆ ಈ ಪ್ರಯೋಗ ನಿರೀಕ್ಷಿತ ಫಲಿತಾಂಶ ನೀಡಿರಲಿಲ್ಲ. ಬಹುತೇಕ ಇತರ ಔಷಧಿಗಳಂತೆ ಪ್ಲಾಸ್ಮಾ ಚಿಕಿತ್ಸೆ ಕೂಡ ಅಡ್ಡ ಪರಿಣಾಮಗಳನ್ನು ಹೊಂದಿದೆ. ಇದು ವ್ಯಕ್ತಿಯ ಸ್ವಾಭಾವಿಕ ರೋಗ ಪ್ರತಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ ಇದರಿಂದ ಇತರ ಸೋಂಕುಗಳು ಹರಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.