ಚೆನ್ನೈ: ಕೊರೊನಾ ಸೋಂಕು ತಡೆಗಟ್ಟಲು ತಯಾರಿಸಲಾದ ಔಷಧಿಯ ಸ್ಯಾಂಪಲ್ ಕುಡಿದು ಸಂಶೋಧಕರೊಬ್ಬರು ಸಾವನ್ನಪ್ಪಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
‘ನಿವಾರಣ್-90’ ಎಂಬ ಕೆಮ್ಮು ಮತ್ತು ಶೀತದ ಔಷಧಿ ಕಂಪನಿಯ ಅಧಿಕಾರಿ ಶಿವನೇಸನ್(47) ಮೃತ ವ್ಯಕ್ತಿ.
ಕೊರೊನಾ ಮಹಾಮಾರಿಗೆ ಔಷಧಿ ಕಂಡುಹಿಡಿಯಲು ದೇಶ-ವಿದೇಶಗಳಲ್ಲಿ ಸಂಶೋಧಕರು ಪೈಪೋಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲೂ ಕೂಡ ಔಷಧಿಗಾಗಿ ಸರ್ಕಾರಿ ಪ್ರಯೋಗಾಲಯಗಳು ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಲ್ಲೂ ತೀವ್ರ ಗತಿಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ.
ಕೆಮ್ಮು ಮತ್ತು ಶೀತಕ್ಕೆ ಇನ್ಸ್ಟೆಂಟ್ ಔಷಧಿ ಎಂದೇ ಖ್ಯಾತವಾದ ನಿವಾರಣ್ 90 ಕರ್ತೃ ಸಂಸ್ಥೆ ಸುಜಾತಾ ಬಯೋಟೆಕ್ ಕಂಪನಿ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಂಶೋಧಕರೂ ಆದ ಶಿವನೇಸನ್ ಲಾಕ್ಡೌನ್ ಘೋಷಣೆಯಾದ ಸಂದರ್ಭದಲ್ಲಿ ಚೆನ್ನೈನಲ್ಲಿ ಇದ್ದ ಕಾರಣ ಉತ್ತರಾಖಂಡ್ಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕೊರೊನಾ ವೈರಸ್ ನಿಗ್ರಹಕ್ಕೆ ಚೆನ್ನೈನ ಕೋಡಂಬಾಕಂನಲ್ಲಿರುವ ತಮ್ಮ ಸಂಸ್ಥೆಯ ಲ್ಯಾಬ್ನಲ್ಲಿ ಔಷಧಿ ಕಂಡುಹಿಡಿಯುವ ಕಾರ್ಯದಲ್ಲಿ ನಿರತರಾದರು.
ಸಂಸ್ಥೆಯ ಮಾಲೀಕ ಡಾ. ರಾಜಕುಮಾರ್ ಒಡಗೂಡಿ ಒಂದು ಮಿಶ್ರಣವನ್ನು ಕೂಡ ತಯಾರಿಸಿದ್ದರು. ಅದರ ಪ್ರಯೋಗಾರ್ಥ ಪರೀಕ್ಷೆಗೆ ಶಿವನೇಸನ್ ಮತ್ತು ರಾಜಕುಮಾರ್ ಇಬ್ಬರೂ ಮುಂದಾಗಿ ಅದನ್ನು ಸೇವಿಸಿದರು.
ಸೋಡಿಯಂ ನೈಟ್ರೇಟ್ ದ್ರಾವಣದ ಈ ಮಿಶ್ರಣ ಸೇವಿಸಿದ ಕೆಲ ಹೊತ್ತಿನಲ್ಲೇ ಇಬ್ಬರಿಗೂ ಅಸ್ವಸ್ಥತೆ ಕಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದರಲ್ಲಿ ಶಿವನೇಸನ್ ಮೃತಪಟ್ಟಿದ್ದಾರೆ ರಾಜಕುಮಾರ್ ಚಿಕಿತ್ಸೆಯ ನಂತರ ಸುಧಾರಿಸಿಕೊಂಡಿದ್ದು, ಆರೋಗ್ಯಕರವಾಗಿದ್ದಾರೆ.