ಸಂಘಟನೆಗಳ ಮೇಲೆ ರಾಜ್ಯ ಸರ್ಕಾರ ಬ್ರಹ್ಮಾಸ್ತ್ರ
10 ಲಕ್ಷ ಭದ್ರತಾ ಠೇವಣಿ ಹಾಗೂ ಕಾರ್ಯಕ್ರಮದ ಹೊಣೆಗಾರಿಕೆಯನ್ನು ಆಯೋಜಕರೇ ಹೊತ್ತುಕೊಳ್ಳಬೇಕು
ಶಾಂತಿಯುತ ಪ್ರತಿಭಟನೆ ನೆಪದಲ್ಲಿ ಕಾನೂನು ಉಲ್ಲಂಘಿಸಿದವರಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ.
ಬೆಂಗಳೂರು,ಫೆ.21-ಕೇಂದ್ರ ಸರ್ಕಾರದ ನಾಗರಿಕ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುವ ಸಂಘಟಿತರು ಹಾಗೂ ಸಂಘಟನೆಗಳ ಮೇಲೆ ರಾಜ್ಯ ಸರ್ಕಾರ ಬ್ರಹ್ಮಾಸ್ತ್ರ ಬಳಸಲು ಮುಂದಾಗಿದೆ. ನಿನ್ನೆ ಫ್ರೀಡಂಪಾರ್ಕ್‍ನಲ್ಲಿ ಸಿಎಎ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅಮೂಲ್ಯ ಲಿಯೋನ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಗುರಿಯಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇನ್ನು ಮುಂದೆ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಇಂತಹ ಘಟನೆಗಳು ಮರುಕಳಿಸಿದರೆ ಸಂಘಟಿಕರು ಹಾಗೂ ಅದರ ಮುಖ್ಯಸ್ಥರನ್ನೇ ಹೊಣೆ ಮಾಡಲು ತೀರ್ಮಾನಿಸಿದೆ. ಇನ್ನು ಮುಂದೆ ಪ್ರತಿಭಟನೆ ನಡೆಸುವ ವೇಳೆ ಸಂಘಟಿಕರಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರತಿಭಟನೆ ವೇಳೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅದಕ್ಕೆ ನಾವೇ ಜವಾಬ್ದಾರರು ಎಂದು ಬರೆದುಕೊಡಬೇಕು.
10 ಲಕ್ಷ ಭದ್ರತಾ ಠೇವಣಿ ಹಾಗೂ ಕಾರ್ಯಕ್ರಮದ ಹೊಣೆಗಾರಿಕೆಯನ್ನು ಆಯೋಜಕರೇ ಹೊತ್ತುಕೊಳ್ಳಬೇಕು. ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳು ಇಲ್ಲವೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅದಕ್ಕೆ ಸಂಘಟನೆಗಳ ಮುಖ್ಯಸ್ಥರನ್ನೇ ಹೊಣೆ ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಗೃಹ ಇಲಾಖೆ ಕಾರ್ಯದರ್ಶಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸೂಚನೆಯೊಂದನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಶಾಂತಿಯುತ ಪ್ರತಿಭಟನೆ ನಡೆಸಲು ಯಾವುದೇ ರೀತಿಯ ನಿರ್ಬಂಧ ಹಾಕಬಾರದು. ಆದರೆ ಪ್ರತಿಭಟನೆ ನೆಪದಲ್ಲಿ ದೇಶ ವಿರೋಧಿ ಘೋಷಣೆ ಕೂಗುವುದು, ವ್ಯಕ್ತಿಗತವಾಗಿ ವೈಯಕ್ತಿಕ ನಿಂದನೆ ಮಾಡುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಸಂಘಟಿಕರೇ ಹೊಣೆ ಹೊರಬೇಕು. ಇಲ್ಲವೇ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಸರ್ಕಾರ ಪೊಲೀಸರಿಗೆ ಸೂಚನೆ ಕೊಟ್ಟಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ(ಡಿಸಿ), ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ), ತಾಲ್ಲೂಕು ಮಟ್ಟದಲ್ಲಿ ಇನ್‍ಸ್ಪೆಕ್ಟರ್ ಹಾಗೂ ಹೋಬಳಿ ಮಟ್ಟದಲ್ಲಿ ಸಬ್‍ಇನ್‍ಸ್ಪೆಕ್ಟರ್ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಕಾನೂನು ಪ್ರಕಾರವೇ ಕ್ರಮ ಜರುಗಿಸುವಂತೆ ಗೃಹ ಇಲಾಖೆಗೆ ಸೂಚನೆ ಕೊಡಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ 144 ಸೆಕ್ಷನ್ ವಿಧಿಸಲಾಗಿತ್ತು. ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಪೆಟ್ರೋಲ್ ಬಾಂಬ್ ಎಸೆದಿದ್ದರು. ಕೊನೆಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಗೋಲಿಬಾರ್ ನಡೆಸಬೇಕಾಯಿತು. ಇದರಿಂದ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಶಾಂತಿಯುತ ಪ್ರತಿಭಟನೆ ನೆಪದಲ್ಲಿ ಕಾನೂನು ಉಲ್ಲಂಘಿಸಿದವರಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ.