ಬೆಂಗಳೂರು: ಅಮೂಲ್ಯ ಲಿಯೋನಾ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಫೋಷಣೆ ಕೂಗಿದ ಬಳಿಕ ಏನು ಹೇಳುತ್ತಿದ್ದಳು ಅದನ್ನ ಪೂರ್ತಿ ಹೇಳಲು ಅವಕಾಶ ಕೊಡಬೇಕಿತ್ತು ಅಂತ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಅಮೂಲ್ಯ ಲಿಯೋನಾ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಆಕೆಯ ಭಾಷಣಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಆಕೆ ಈಗ ಹೇಳಿದ ಮಾತನ್ನು ಕೇಳಿರಲಿಲ್ಲ. ಅಮೂಲ್ಯಗೆ ಪೂರ್ತಿ ಮಾತನಾಡಲು ಅವಕಾಶ ನೀಡಬೇಕಿತ್ತು. ಆದರೆ ಮಧ್ಯದಲ್ಲಿ ಏನೋ ಸಮಸ್ಯೆಯಾಗಿದೆ. ಇದರ ಬಗ್ಗೆ ನನಗೆ ಇನ್ನೂ ಕೆಲವು ಸ್ಪಷ್ಟನೆಗಳು ಬೇಕಿದೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚಾಗಿ ಕಮೆಂಟ್ ಮಾಡುವುದಿಲ್ಲ ಎಂದು ತಿಳಿಸಿದರು.
ಏನಿದು ಪ್ರಕರಣ?
ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲೇ ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದಳು
ವೇದಿಕೆ ಮೇಲೆ ಬಂದ ಅಮೂಲ್ಯ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದರು, ಬಳಿಕ ಪೊಲೀಸರು ಕೂಡಲೇ ಅಮೂಲ್ಯಳನ್ನು ವೇದಿಕೆಯಿಂದ ಕರೆದುಕೊಂಡು ವಶಕ್ಕೆ ಪಡೆದರು
ಈಗ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಅಮೂಲ್ಯಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 5ನೇ ಎಸಿಎಂಎಂ ಜಡ್ಜ್ ಆದೇಶಿಸಿದ್ದಾರೆ. ಇಷ್ಟಾದರೂ ಕೂಡ ಅಮೂಲ್ಯಳಿಗೆ ಭಯವಾಗಲಿ, ಪಶ್ಚಾತಾಪವಾಗಿ ಆಗಿಲ್ಲ. ಬದಲಿಗೆ ವಿಕ್ಟರಿ ಸಿಂಬಲ್ ತೋರಿಸಿ ಭಂಡತನ ಮೆರೆದಿದ್ದಾಳೆ.
