Breaking News
Home / new delhi / ನೆರೆ ಹಾಗೂ ಅತಿವೃಷ್ಟಿಯ ಪರಿಣಾಮ, 43,300 ಹೆಕ್ಟೇರ್‌ ಬೆಳೆ ‘ಆಹುತಿ’

ನೆರೆ ಹಾಗೂ ಅತಿವೃಷ್ಟಿಯ ಪರಿಣಾಮ, 43,300 ಹೆಕ್ಟೇರ್‌ ಬೆಳೆ ‘ಆಹುತಿ’

Spread the love

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ಮಂಗಳವಾರದವರೆಗೆ 43,300 ಹೆಕ್ಟೇರ್ ಬೆಳೆಗಳು ಮುಳುಗಿವೆ.

15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ಮಲಪ್ರಭಾ ನದಿಗಳಲ್ಲಿ ಮಹಾಪೂರ ಉಂಟಾಗಿದೆ. ತೀರಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ನೀರು ವ್ಯಾಪಿಸಿದೆ. ಇದರೊಂದಿಗೆ ಬೆಳಗಾವಿ ತಾಲ್ಲೂಕಿನಲ್ಲಿ ಬಳ್ಳಾರಿ ನಾಲಾ ಪ್ರವಾಹವೂ ಉಂಟಾಗಿದೆ. ಇದರಿಂದಲೂ ಸಾವಿರಾರು ಎಕರೆ ವಿವಿಧ ಬೆಳೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಮಳೆ ಹಾಗೂ ಪ್ರವಾಹದ ಪರಿಸ್ಥಿತಿ ಮುಂದುವರಿದಿದ್ದು, ಬೆಳೆಗಳ ಹಾನಿ ‍ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬಿತ್ತನೆ ಬಹುತೇಕ ಮುಗಿದಿದೆ:

ಈ ಹಂಗಾಮಿನಲ್ಲಿ 6.88 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿತ್ತು. ಈ ಪೈಕಿ ಬಹುತೇಕ ಪ್ರದೇಶಗಳಲ್ಲಿ ಬಿತ್ತನೆಯಾಗಿದೆ.

ಭತ್ತ, ಗೋವಿನಜೋಳ, ಸೋಯಾಅವರೆ, ಹೆಸರುಕಾಳು, ಶೇಂಗಾ, ಹತ್ತಿ, ಕಬ್ಬು, ಮುಸುಕಿನಜೋಳ, ಸೂರ್ಯಕಾಂತಿ ಬೆಳೆಯಲಾಗಿದೆ.

ಕೃಷಿ ಇಲಾಖೆಯು ಸಂಗ್ರಹಿಸಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಅತಿ ಹೆಚ್ಚು (17,877 ಹೆಕ್ಟೇರ್‌) ಹಾನಿಗೆ ಒಳಗಾಗಿರುವುದು ಕಬ್ಬು ಬೆಳೆ. ನಂತರದ ಸ್ಥಾನದಲ್ಲಿ ಹೆಸರುಕಾಳು (8,500 ಹೆಕ್ಟೇರ್‌), ಮುಸುಕಿನಜೋಳ (6,043 ಹೆ.), ಭತ್ತ (3,014 ಹೆ.), ಸೋಯಾಅವರೆ (1,710 ಹೆಕ್ಟೇರ್), ಸೂರ್ಯಕಾಂತಿ (490 ಹೆ) ಹಾಗೂ ಇತರೆ (177 ಹೆ.) ಬೆಳೆಗಳಿವೆ.

ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ವರದಿ ಲಭ್ಯವಾಗಿಲ್ಲ.

‘ಅಂದಾಜು ವರದಿ ಇದಾಗಿದೆ. 43ಸಾವಿರ ಹೆಕ್ಟೇರ್‌ನಲ್ಲಿ ಭತ್ತ, ಕಬ್ಬು ಸೇರಿದಂತೆ ಬಹುತೇಕ ಬೆಳೆಗಳು ಹಲವು ದಿನಗಳಿಂದಲೂ ಮುಳುಗಿವೆ. ಇದರಿಂದಾಗಿ ಅವುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಜಂಟಿ ಸಮೀಕ್ಷೆ ಪೂರ್ಣಗೊಂಡು ಸಂಪೂರ್ಣ ವರದಿ ಸಲ್ಲಿಕೆಯಾದ ನಂತರ ಸರ್ಕಾರದಿಂದ ಮಾರ್ಗಸೂಚಿಗಳ ಪ್ರಕಾರ ರೈತರಿಗೆ ಪರಿಹಾರ ದೊರೆಯಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಹೋದ ವರ್ಷ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಬಂದಿತ್ತು. ಆಗ, 2.17 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯನ್ನು ರೈತರು ಅನುಭವಿಸಿದ್ದರು.

ಎಲ್ಲೆಲ್ಲಿ ಎಷ್ಟೆಷ್ಟು?:

ತಾಲ್ಲೂಕುವಾರು ಗಮನಿಸಿದರೆ ಮಲಪ್ರಭಾ ಸೃಷ್ಟಿಸಿರುವ ಪ್ರವಾಹದಿಂದಾಗಿ ಸವದತ್ತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ (13,004 ಹೆಕ್ಟೇರ್‌) ಬೆಳೆಗಳು ಹಾನಿಗೊಳಗಾಗಿವೆ. ಇದರಲ್ಲಿ ಹೆಸರುಕಾಳು 5,429 ಹೆ., 3,300 ಹೆ. ಹತ್ತಿ ಹಾಗೂ 2,990 ಹೆ. ಮುಸುಕಿನಜೋಳ ಜಾಸ್ತಿ ಪ್ರಮಾಣದಲ್ಲಿದೆ. ನಂತರದ ಸ್ಥಾನದಲ್ಲಿ ಗೋಕಾಕ ತಾಲ್ಲೂಕಿದೆ. ಅಲ್ಲಿ 6,500 ಹೆಕ್ಟೇರ್‌ ಕಬ್ಬು ಹಾಗೂ 1,150 ಮುಸುಕಿನಜೋಳ ಜಲಾವೃತವಾಗಿದೆ. ಮೂಡಲಗಿಯಲ್ಲಿ 5,500 ಹೆ., ಚಿಕ್ಕೋಡಿಯಲ್ಲಿ 3,466 ಹೆ. ಕಬ್ಬು ಮುಳುಗಿದೆ. ಬೆಳಗಾವಿ ತಾಲ್ಲೂಕಿನಲ್ಲಿ ಭತ್ತದ (1,880 ಹೆಕ್ಟೇರ್) ಬೆಳೆ ಹಲವು ದಿನಗಳಿಂದಲೂ ನೀರಿನಲ್ಲಿದೆ. ಅಥಣಿ ತಾಲ್ಲೂಕಿನಲ್ಲಿ ಹಾನಿ ವರದಿಯಾಗಿಲ್ಲ ಎಂದು ಇಲಾಖೆ ತಿಳಿಸಿದೆ.

***

ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಿದ ನಂತರ ನಿಖರವಾದ ಮಾಹಿತಿ ಲಭ್ಯವಾಗಲಿದೆ. ಸಮೀಕ್ಷೆ ಆರಂಭವಾಗಿದೆ
ಶಿವನಗೌಡ ಪಾಟೀಲ
ಜಂಟಿ ಕೃಷಿ ನಿರ್ದೇಶಕ

***

ನೆರೆಯಿಂದ ಅಪಾರ ಹಾನಿ ಉಂಟಾಗಿದೆ. ಹೀಗಿದ್ದರೂ ಪ್ರವಾಹ ಬಂದಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿರುವುದು ಖಂಡನೀಯ. ರೈತರೊಂದಿಗೆ ಚೆಲ್ಲಾಟ ಆಡಬಾರದು. ಸಮರ್ಪಕ ಪರಿಹಾರ ನೀಡಬೇಕು
ಸಿದಗೌಡ ಮೋದಗಿ
ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ (ಸಂ)


Spread the love

About Laxminews 24x7

Check Also

SSLC ಪರೀಕ್ಷೆ ಟಾಪರ್ ಸನ್ಮಾನಿಸಿ, ಬಹುಮಾನ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ!

Spread the love ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ