Breaking News
Home / ಅಂತರಾಷ್ಟ್ರೀಯ / ಜಲಾವೃತವಾಗಿವೆ. ಇನ್ನೊಂದೆಡೆ, 50ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ.

ಜಲಾವೃತವಾಗಿವೆ. ಇನ್ನೊಂದೆಡೆ, 50ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ.

Spread the love

ತೆಲಸಂಗ: ಸತತ ಮಳೆಯಿಂದಾಗಿ ಗ್ರಾಮದ ಸುತ್ತಮುತ್ತಲಿನ ಜಮೀನುಗಳು ಜಲಾವೃತವಾಗಿವೆ. ಇನ್ನೊಂದೆಡೆ, 50ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ.

ಗುಡುಸಾಬ ಕರಜಗಿ ಅವರ ಮನೆಯ ಗೋಡೆ ಕುಸಿದು ಒಂದು ಆಡು ಸಾವಿಗೀಡಾಗಿದೆ. ಯಮನಪ್ಪ ಕಲಾಲ ಅವರ ಪುಟ್ಟ ಮಣ್ಣಿನ ಮನೆಗೆ ಹಾನಿಯಾಗಿದ್ದು, ಅವರು ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ.

‘ಮಣ್ಣಿನ ಇಟ್ಟಂಗಿಲೇ ಗೋಡೆ ಕಟ್ಟಿ ಮ್ಯಾಗ ಪತ್ರಾಸ್ ಹಾಕೊಂಡ ಜೀವನಾ ನಡೆಸಿದ್ದಿವ್ರಿ. ಮಳೆಯಿಂದ ಒಂದು ಮಗ್ಗಲು ಗೋಡೆ ಕುಸದೈತ್ರಿ. ದಿನಾ ಕೂಲಿ ಮಾಡಿ ಬದಕವ್ರ ನಾವು. ಹೊಲ ಇಲ್ಲ, ಮನೆ ಇಲ್ಲ ಜೀವನ ಹೆಂಗ ಮಾಡಬೇಕು ತಿಳಿವಲ್ದರೀ’ ಎಂದು ಯಮನಪ್ಪ ಕಣ್ಣೀರಿಟ್ಟರು.

‘ತೊಗರಿ, ಕಬ್ಬು, ದ್ರಾಕ್ಷಿ, ದಾಳಿಂಬೆ, ಗೋವಿನಜೋಳ ಬೆಳೆಗಳಿಗೆ ಹಾನಿಯಾಗಿದೆ. ಆದರೂ ಯಾರೊಬ್ಬ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಕೂಡಲೇ ಸಮೀಕ್ಷೆ ನಡೆಸಿ, ಸಂತ್ರಸ್ತರಿಗೆ ಆರ್ಥಿಕ ನೆರವು ಒದಗಿಸಬೇಕು’ ಎನ್ನುವುದು ಅವರ ಆಗ್ರಹವಾಗಿದೆ.

ಜೀವದ ಹಂಗು ತೊರೆದು…

ಡೋಣಿ ಹಳ್ಳ ತುಂಬಿ ಹರಿಯುತ್ತಿದ್ದು, ಜನರು ಜೀವದ ಹಂಗು ತೊರೆದು ಹಗ್ಗ ಬಳಸಿ ರಸ್ತೆ ದಾಟುವುದು ಕಂಡುಬರುತ್ತಿದೆ. ಬುಧವಾರ ಸಂಜೆ ಹಳ್ಳದ ಎರಡೂ ಬದಿಯಲ್ಲಿ ನಾಲ್ಕಾರು ಮಂದಿ ನಿಂತು ಹಗ್ಗ ಎಸೆದು ಮಹಿಳೆ ಒಬ್ಬರನ್ನು ದಾಟಿಸಿದ್ದಾರೆ.

ಜಮೀನುಗಳಿಗೆ ಹಾಗೂ ತೋಟದ ವಸತಿಗಳಿಗೆ ಹೋಗಲು ಹಲವರು ಈ ರಸ್ತೆ ಅವಲಂಬಿಸಿದ್ದಾರೆ. ಇಲ್ಲಿ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. ಮಳೆ ಬಂದಾಗ ತೊಂದರೆ ತಪ್ಪಿಲ್ಲ.

‘ಸಾಕಷ್ಟು ಬಾರಿ ವಿನಂತಿಸಿದರೂ ಅಧಿಕಾರಿಗಳು ಈ ರಸ್ತೆ ಮತ್ತು ಸೇತುವೆ ನಿರ್ಮಾಣದ ಬಗ್ಗೆ ಕಾಳಜಿ ತೋರುತ್ತಿಲ್ಲ. ತಕ್ಷಣಕ್ಕೆ ಏನಾದರೂ ವ್ಯವಸ್ಥೆ ಮಾಡುವಂತೆ ಪಿಡಿಒಗೆ ಸೂಚಿಸಿದ್ದೇನೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲಪ್ಪಗೋಳ ತಿಳಿಸಿದರು.

ಕಾಂಗ್ರೆಸ್ ಮುಖಂಡರ ಪ್ರತಿಭಟನೆ:

ಡೋಳಿ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಸಮಸ್ಯೆ ತಿಳಿಸಲು ಅಧಿಕಾರಿಗಳು ಲಭ್ಯವಾಗುತ್ತಿಲ್ಲ. ಅಥಣಿ ತಾಲ್ಲೂಕಿನಲ್ಲಿ ಮಳೆಯಿಂದ ಬೆಳೆಗಳು ನಶವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತಕ್ಷಣವೇ ಸರ್ವೇ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ’ ಎಂದು ಗಜಾನನ ಎಚ್ಚರಿಕೆ ನೀಡಿದರು.

ಮುಖಂಡ ಸತ್ಯಪ್ಪ ಬಾಗೆನ್ನವರ, ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಅನಿಲ ಸುಣದೋಳಿ, ಶ್ರೀಕಾಂತ ಪೂಜಾರಿ, ಕಾಶಿನಾಥ ಕುಂಬಾರಕರ, ಈಶ್ವರ ಉಂಡೋಡಿ, ಸುರೇಶ ಖೊಳಂಬಿ, ಅಪ್ಪು ಜಮಾದರ, ಧರೆಪ್ಪ ಮಾಳಿ, ಪ್ರದೀಪ ಕರಡಿ, ಸಿದ್ದು ಕೊಕಟನೂರ, ಆಕಶ ಬಾಣಿ, ಸೊಯಿಲ್ ನದಾಫ ಇದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ