Home / ಅಂತರಾಷ್ಟ್ರೀಯ / ಜಿಲ್ಲೆಯಲ್ಲಿ ಚಲನಚಿತ್ರ ಮಂದಿರಗಳು ಅ. 15ರಿಂದ ಪುನರಾರಂಭಗೊಳ್ಳುತ್ತಿಲ್ಲ.

ಜಿಲ್ಲೆಯಲ್ಲಿ ಚಲನಚಿತ್ರ ಮಂದಿರಗಳು ಅ. 15ರಿಂದ ಪುನರಾರಂಭಗೊಳ್ಳುತ್ತಿಲ್ಲ.

Spread the love

ಬೆಳಗಾವಿ: ಕೋವಿಡ್-19 ಕಾರಣದಿಂದ ಹೇರಲಾಗಿದ್ದ ನಿರ್ಬಂಧದಿಂದ ವಿನಾಯಿತಿ ನೀಡಿದ್ದರೂ ಜಿಲ್ಲೆಯಲ್ಲಿ ಚಲನಚಿತ್ರ ಮಂದಿರಗಳು ಅ. 15ರಿಂದ ಪುನರಾರಂಭಗೊಳ್ಳುತ್ತಿಲ್ಲ.

ಏಳು ತಿಂಗಳುಗಳಿಂದ ಚಲನಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಟ್‌ಗಳನ್ನು ಬಂದ್ ಮಾಡಲಾಗಿದೆ. ನಗರದಲ್ಲಿ 6 ಏಕ ಪರದೆ ಚಲನಚಿತ್ರ ಮಂದಿರಗಳು ಹಾಗೂ 2 ಮಲ್ಟಿಪ್ಲೆಕ್ಸ್‌ಗಳಿವೆ. ಜಿಲ್ಲೆಯ ಚಲನಚಿತ್ರ ಮಂದಿರಗಳ ಸಂಖ್ಯೆ 30ಕ್ಕೂ ಜಾಸ್ತಿ ಇದೆ. ಇಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ಪುನರಾರಂಭಿಸಲು ಮಾಲೀಕರು ಸದ್ಯಕ್ಕೆ ಉತ್ಸಾಹ ತೋರುತ್ತಿಲ್ಲ.

‘ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟಕರವಾಗಿರುವುದು, ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಉಂಟಾಗಿರುವ ಭೀತಿ ಮತ್ತು ಸರ್ಕಾರದಿಂದ ನೆರವು ದೊರೆಯದೆ ಇರುವುದರಿಂದ ಸದ್ಯಕ್ಕೆ ಪ್ರದರ್ಶನ ಆರಂಭಿಸುವ ಕುರಿತು ನಿರ್ಧರಿಸಿಲ್ಲ.

ಪರಿಸ್ಥಿತಿ ಅವಲೋಕಿಸಿ ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು’ ಎನ್ನುತ್ತಾರೆ ಮಾಲೀಕರು.

ಪಾಲಿಸುವುದು ಕಷ್ಟವಾಗಿದೆ:

‘ಚಲನಚಿತ್ರ ಮಂದಿರಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಷರತ್ತುಗಳನ್ನು ಪಾಲಿಸುವುದು ಪ್ರಾಯೋಗಿಕವಾಗಿ ಬಹಳ ಕಷ್ಟವಾಗುತ್ತದೆ. ಹೀಗಾಗಿ, ಹಿಂದೇಟು ಹಾಕುತ್ತಿದ್ದೇವೆ’ ಎಂದು ಚಲನಚಿತ್ರ ಪ್ರದರ್ಶಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಅವಿನಾಶ ಪೋತದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿತ್ರಮಂದಿರವನ್ನು ಆಗಾಗ ಸ್ಯಾನಿಟೈಸ್ ಮಾಡಬೇಕು. ಒಟ್ಟು ಸಾಮರ್ಥ್ಯದ ಶೇ 50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಬೇಕು. ಪ್ರತಿಯೊಬ್ಬರ ಮಾಹಿತಿ, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು. ತಪಾಸಣೆಗೆ ಒಳಪಡಿಸಬೇಕು. ಸ್ಯಾನಿಟೈಸರ್‌ ಒದಗಿಸಬೇಕು. ಟಿಕೆಟ್‌ ಕೌಂಟರ್ ಹಾಗೂ ಆವರಣದಲ್ಲಿ ಪ್ರೇಕ್ಷಕರು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಎಲ್ಲರ ಮಾಹಿತಿ ಕಲೆ ಹಾಕುವುದಕ್ಕೆ ಬಹಳ ಸಮಯ ಹಿಡಿಯುತ್ತದೆ. ಹೀಗಾಗಿ, ಇನ್ನೊಂದೆರಡು ವಾರ ಪರಿಸ್ಥಿತಿ ಅವಲೋಕಿಸಲಿದ್ದೇವೆ. ಹೀಗಾಗು, ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಮಾಹಿತಿ ನೀಡಿದರು.

ಬೇಡಿಕೆ ಈಡೇರಿಸಬೇಕು:

‘ಚಲನಚಿತ್ರ ಮಂದಿರಗಳಿಗೆ ವಿದ್ಯುತ್‌ ಬಿಲ್‌ ವಿಧಿಸುವಾಗ ‘ವಾಣಿಜ್ಯ’ ಎಂದು ಪರಿಗಣಿಸಲಾಗುತ್ತಿದೆ. ‘ಉದ್ಯಮ’ ಎಂದು ಪರಿಗಣಿಸಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದೆ ಮಂಡಿಸಿದ್ದೇವೆ. ಅದಕ್ಕೆ ಸ್ಪಂದನೆ ದೊರೆತಿಲ್ಲ. ಈಗ ಶೇ 50ರಷ್ಟು ಮಾತ್ರವೇ ಗ್ರಾಹಕರಿಗೆ ಅವಕಾಶ ಕೊಡುವುದರಿಂದ ನಷ್ಟವೇ ಆಗುತ್ತದೆ’ ಎನ್ನುತ್ತಾರೆ ಅವರು.

‘ಸದ್ಯ ಜನರನ್ನು ಆಕರ್ಷಿಸುವ ಚಲನಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ, ಈ ಸಂದರ್ಭದಲ್ಲಿ ಆರಂಭಿಸಿದರೆ ಲಾಭವಾಗುವುದಿಲ್ಲ. ಅಲ್ಲದೇ, ಕೊರೊನಾ ಭೀತಿ ಇರುವುದರಿಂದಾಗಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎನ್ನುವ ವಿಶ್ವಾಸವೂ ಇಲ್ಲ. ಮುಂದೆ, ಎಲ್ಲ ಪ್ರೇಕ್ಷಕರ ಮಾಹಿತಿ ಸಂಗ್ರಹಿಸಬೇಕು ಎಂಬ ಷರತ್ತಿನಿಂದ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು. ಪರಿಸ್ಥಿತಿ ಚೇತರಿಸಿಕೊಂಡ ಬಳಿಕ ಅಥವಾ ಜನರನ್ನು ಸೆಳೆಯಬಲ್ಲ ಸಿನಿಮಾ ಬಿಡುಗಡೆ ಆಗುವವರೆಗೆ ಪ್ರದರ್ಶನ ಶುರು ಮಾಡುವುದು ಬೇಡ ಎನ್ನುವುದು ಮಾಲೀಕರ ನಿಲುವಾಗಿದೆ’ ಎಂದು ತಿಳಿಸಿದರು.

ಮಲ್ಟಿಪ್ಲೆಕ್ಸ್‌ನವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ