Breaking News
Home / new delhi / ಬೆಳಗಾವಿ: ರಾಸುಗಳಿಗೆ ಫೈಬರ್‌ ಕಿವಿಯೋಲೆ

ಬೆಳಗಾವಿ: ರಾಸುಗಳಿಗೆ ಫೈಬರ್‌ ಕಿವಿಯೋಲೆ

Spread the love

ಬೆಳಗಾವಿ: ಕೊರೊನಾ ವೈರಸ್‌ ಮತ್ತು ಲಾಕ್‌ಡೌನ್‌ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ‘ರಾಸುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯ ಟ್ಯಾಗ್‌ ಅಳವಡಿಕೆ’ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪುನರಾರಂಭ ಮಾಡಲಾಗಿದೆ.

ಇಲ್ಲಿ ಒಟ್ಟು 13 ಲಕ್ಷ ರಾಸುಗಳಿಗೆ (ದನ, ಆಕಳು, ಎಮ್ಮೆ, ಕೋಣಗಳಿಗೆ) 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯುಳ್ಳ ಹಳದಿ ಬಣ್ಣದ ಫೈಬರ್‌ ಕಿವಿಯೋಲೆ ಹಾಕುವ ಕಾರ್ಯಕ್ರಮ ಇದಾಗಿದೆ. ಕೋವಿಡ್-19 ಕಾಣಿಸಿಕೊಳ್ಳುವುದಕ್ಕೆ ಮುನ್ನ ಇಲ್ಲಿ 6.50 ಲಕ್ಷ ರಾಸುಗಳಿಗೆ ಅಳವಡಿಸಲಾಗಿದ್ದು, ಉಳಿದವುಗಳಿಗೆ ಹಾಕುವುದಕ್ಕಾಗಿ ಟ್ಯಾಗ್‌ಗಳನ್ನು ಇತ್ತೀಚೆಗೆ ಪೂರೈಸಲಾಗಿದೆ.

ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆ (ಎನ್‌ಡಿಡಿಬಿ) ರೂಪಿಸಿರುವ ಕಾರ್ಯಕ್ರಮಕ್ಕೆ ಪ್ರಾಣಿಗಳ ಆರೋಗ್ಯ ಮತ್ತು ಉತ್ಪಾದನೆ ಮಾಹಿತಿ ಜಾಲ (ಇನಾಫ್‌) ಸಹಯೋಗ ನೀಡಿದೆ.

ರಾಸುಗಳ ಮಾಲೀಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯ ಮಾಹಿತಿಯನ್ನು ‘ಇನಾಫ್’ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ.

ಉದ್ದೇಶಗಳೇನು?:

‘ಕೇಂದ್ರ ಸರ್ಕಾರದ ಕಾರ್ಯಕ್ರಮ ಇದಾಗಿದೆ. ರಾಸುಗಳ ಮೇಲೆ ವಹಿಸುವುದು ಟ್ಯಾಗ್‌ನ ಮುಖ್ಯ ಉದ್ದೇಶವಾಗಿದೆ. ಅವುಗಳಿಗೆ ಅಗತ್ಯ ಚುಚ್ಚುಮದ್ದು ಕೊಡಿಸಲಾಗುತ್ತಿದೆಯೇ, ನಿಗದಿತ ಆಕಳು ಅಥವಾ ಎಮ್ಮೆ ಎಷ್ಟು ಹಾಲು ನೀಡುತ್ತಿದೆ, ಬೆದೆಗೆ ಬಂದಿದ್ದು ಯಾವಾಗ, ಕರು ಹಾಕಿದ್ದು ಯಾವಾಗ, ಕೃತಕ ಗರ್ಭಧಾರಣೆ ಮಾಡಿಸಲಾಗಿದೆಯೇ? ಎಂಬಿತ್ಯಾದಿ ಸೇರಿದಂತೆ ಹಲವು ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯುವುದಕ್ಕಾಗಿ ಈ ಯೋಜನೆ ರೂಪಿಸಲಾಗಿದೆ’ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ್‌ ಕೊಳ್ಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಯೊಂದರ ಮಾಹಿತಿಯನ್ನೂ ನಿಗದಿತ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ವಿಶಿಷ್ಟ ಗುರುತಿನ ಸಂಖ್ಯೆ ನಮೂದಿಸಿದರೆ ರಾಸಿನ ಎಲ್ಲ ಅಧಿಕೃತ ಮಾಹಿತಿಯೂ ಲಭ್ಯವಾಗಲಿದೆ. ಅಂತೆಯೇ, ಅವುಗಳನ್ನು ಸಾಕುವವರ ವಿವರವನ್ನು ಕೂಡ ಸಂಗ್ರಹಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಆಧಾರ್ ರೀತಿಯಲ್ಲಿ:

‘ಈ ಟ್ಯಾಗ್‌ ಒಂದರ್ಥದಲ್ಲಿ ಆಧಾರ್‌ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಅಳವಡಿಸುವಾಗ ಕಿವಿಗೆ ಗಾಯವಾಗುವುದಿಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೂಡ ಸಹಾಯವಾಗಲಿದೆ. ಒಂದೊಮ್ಮೆ ರಾಸು ಕಳವಾದರೆ ವಿಶಿಷ್ಟ ಗುರುತಿನ ಸಂಖ್ಯೆಯ ಆಧಾರದ ಮೇಲೆ ಅದು ಯಾವ ಸ್ಥಳದಲ್ಲಿದೆ ಎನ್ನುವುದನ್ನು ತ್ವರಿತವಾಗಿ ಪತ್ತೆ ಹಚ್ಚಬಹುದಾಗಿದೆ’ ಎನ್ನುತ್ತಾರೆ ಅವರು.

‘ನಮ್ಮ ಸಿಬ್ಬಂದಿಯೇ ರಾಸುಗಳು ಇರುವ ಕಡೆಗೆ ಹೋಗಿ ಟ್ಯಾಗ್ ಹಾಕುತ್ತಾರೆ. ಕೆಲವರು ಹಾಕಿಸಲು ಮುಂದಾಗುತ್ತಿಲ್ಲ. ಅವರಿಗೆ, ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ವಿಮೆ, ಸಾಲ ಸೌಲಭ್ಯ ಹಾಗೂ ಪರಿಹಾರ ಒದಗಿಸುವ ಸಂದರ್ಭದಲ್ಲೂ ವಿಶಿಷ್ಟ ಗುರುತಿನ ಸಂಖ್ಯೆಯಿಂದ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ರಾಸೊಂದಕ್ಕೆ ಕಿವಿಯೋಲೆ ಹಾಕುವ ಇಲಾಖೆಯ ಸಿಬ್ಬಂದಿಗೆ ₹ 2.50 ಪ್ರೋತ್ಸಾಹಧನ ನೀಡಲಾಗುತ್ತದೆ.

ರಾಸುಗಳಿಗೆ ಟ್ಯಾಗ್‌ ಅಳವಡಿಸುವುದರಿಂದ ಬಹಳ ಅನುಕೂಲಗಳಿವೆ. ಹೀಗಾಗಿ, ಈ ಕಾರ್ಯಕ್ಕೆ ಹೈನುಗಾರರು ಸಹಕಾರ ಕೊಡಬೇಕು
ಡಾ.ಅಶೋಕ್ ಕೊಳ್ಳ
ಉಪ ನಿರ್ದೇಶಕ, ಪಶುಪಾಲನಾ ಇಲಾಖೆ


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ