Breaking News
Home / Uncategorized / ಮಂತ್ರಿಗಿರಿ ಉಳಿಸಿಕೊಳ್ಳಲು ಸಚಿವೆ ಜೊಲ್ಲೆ ಯತ್ನ.? : ರಮೇಶ್ ಜಾರಕಿಹೊಳಿ ಭೇಟಿಯಾದ ಶಶಿಕಲಾ..!

ಮಂತ್ರಿಗಿರಿ ಉಳಿಸಿಕೊಳ್ಳಲು ಸಚಿವೆ ಜೊಲ್ಲೆ ಯತ್ನ.? : ರಮೇಶ್ ಜಾರಕಿಹೊಳಿ ಭೇಟಿಯಾದ ಶಶಿಕಲಾ..!

Spread the love

ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ಸುದ್ದಿಯ ನಡುವೆಯೇ ಹಲವು ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ರಾಜ್ಯದ ಏಕೈಕ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊಕ್ ಕೊಡಲಾಗುತ್ತದೆ ಎನ್ನುವ ಮಾಹಿತಿ ಇದೆ. ಹೀಗಾಗಿ ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮುಂದುವರಿಸಿದ್ದಾರೆ. 2 ದಿನಗಳ ಹಿಂದೆಯಷ್ಟೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಬಂದಿರುವ ಜೊಲ್ಲೆ ಇಂದು ಜಲಸಂಪನ್ಮೂಲ ಸಚಿವ ರಮೇಶ್‍ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶತಾಯಗತಾಯ ತಮ್ಮ ಸ್ಥಾನ ಉಳಿಸಿಕೊಳ್ಳಲು ಹವಣಿಸುತ್ತಿರುವ ಶಶಿಕಲಾ ಜೊಲ್ಲೆ, ಇದೀಗ ಸಚಿವ ಜಾರಕಿಹೊಳಿ ಮೂಲಕ ವರಿಷ್ಠರ ಮೇಲೆ ಕೊಂಚ ಒತ್ತಡ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.  

ಭಾನುವಾರ ಬೆಂಗಳೂರಿನ ಸದಾಶಿವ ನಗರದ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ಸಚಿವೆ ಜೊಲ್ಲೆ ಕೆಲ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ಅಂದಹಾಗೆ ಸದ್ಯದ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಬೆಳಗಾವಿ ಜಿಲ್ಲೆಗೆ ಮತ್ತೊಂದು ಕ್ಯಾಬಿನೆಟ್‍ ಮಂತ್ರಿಗಿರಿ ಸಿಗಲಿದೆ ಎನ್ನಲಾಗುತ್ತಿದೆ. ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರಿಗೆ ಸಚಿವಗಿರಿ ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ಜೊಲ್ಲೆ ಅವರನ್ನು ಸಂಪುಟದಿಂದ ಕೈ ಬಿಡಲು ಬಿಎಸ್ ವೈ ಹಾಗೂ ಟೀಂ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಈಗಾಗಲೇ ಗಡಿ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದ್ದು, ಪ್ರಾದೇಶಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಜೊಲ್ಲೆ ಅವರನ್ನು ಕ್ಯಾಬಿನೆಟ್ ನಿಂದ ಕೈ ಬಿಡುವ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಬೆಳಗಾವಿ ಜಿಲ್ಲೆಯಲ್ಲಿ ಡಿಸಿಎಂ ಸೇರಿದಂತೆ ನಾಲ್ವರು ಸಚಿವರಿದ್ದಾರೆ. ಅಲ್ಲದೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ, ನಿಗಮ ಮಂಡಳಿಗಳಲ್ಲಿ ಇಬ್ಬರು ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಕತ್ತಿ ಸಂಪುಟಕ್ಕೆ ಬಂದರೆ ಐವರು ಸಚಿವರು ಬೆಳಗಾವಿಗೆ ಸೇರಿದವರಾಗುತ್ತಾರೆ. ಇದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎನ್ನುವ ಕಾರಣಕ್ಕೆ ಪಕ್ಷದ ನಾಯಕರು ಜೊಲ್ಲೆ ಅವರನ್ನು ಕೈ ಬಿಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಮಹಿಳಾ ಕೋಟಾದಡಿ ಅವರೊಬ್ಬರೇ ಇರುವ ಹಿನ್ನೆಲೆಯಲ್ಲಿ ಮಂತ್ರಿಗಿರಿಯಿಂದ ಕೆಳಗಿಳಿಸಲಾರರು ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಆದರೆ ಇದರ ಮಧ್ಯೆ ತಾವು ಸಚಿವ ಜಾರಕಿಹೊಳಿ ಭೇಟಿಯಾಗಿದ್ದು, ತಮ್ಮ ಕ್ಷೇತ್ರದ ಕೆಲಸಗಳಿಗಾಗಿ ಎಂದು ಸಚಿವೆ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ. ರಮೇಶ್ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರು ಹೀಗಾಗಿ ಭೇಟಿಯಾಗಿದ್ದೇನೆ ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ. 


Spread the love

About Laxminews 24x7

Check Also

ಮತದಾನ ಮೊದಲು ನಂತರ ಮದುವೆ: ಓಡಿ ಬಂದು ಮತ ಹಾಕಿದ ವರ-ವಧು

Spread the love ಚಾಮರಾಜನಗರ ಏಪ್ರಿಲ್ 26: ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ವರನೊಬ್ಬ ಓಡಿ ಬಂದು ಮತ ಚಲಾಯಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ