ಬೆಂಗಳೂರು: ರಾಜ್ಯಕ್ಕೆ ತಬ್ಲಿಘಿ ಜೊತೆ ಅಜ್ಮೀರ್ ಕಂಟಕ ಎದುರಾಗಿದೆ. ಹೊರ ರಾಜ್ಯದಿಂದ ಬರುವವರಲ್ಲಿ ಸೋಂಕು ಹೆಚ್ಚಾಗ್ತಾ ಇದೆ. ಅಜ್ಮೀರ್ ಯಾತ್ರೆಗೆ ಹೋಗಿದ್ದವರಲ್ಲಿ ಮತ್ತು ಅಹಮದಾಬಾದ್ ಪ್ರಯಾಣ ಮಾಡಿದ್ದವರು ರಾಜ್ಯಕ್ಕೆ ಕಂಟಕವಾಗ್ತಾ ಇದ್ದಾರೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಲೇ ಇದೆ. ಸಾವಿರ ಗಡಿಯತ್ತ ಸೋಂಕಿತರ ಸಂಖ್ಯೆ ಏರುತ್ತಿದ್ದು 925ಕ್ಕೆ ತಲುಪಿದೆ. ಅರ್ಧದಷ್ಟು ವಿದೇಶದಿಂದ ಬಂದವರಾದರೆ ಇನ್ನರ್ಧ ತಬ್ಲಿಘಿಗಳಿಂದಲೇ ಪ್ರಕರಣಗಳು ಹೆಚ್ಚಾಗಿದೆ. ಬೆಂಗಳೂರು, ಬೆಳಗಾವಿ, ಬಾಗಲಕೋಟೆ ಮತ್ತು ಕಲಬುರಗಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತಬ್ಲಿಘಿಗಳಿಂದ ಪ್ರಕರಣಗಳು ಹೆಚ್ಚಾಗಿದೆ. ಆದರೆ ಈಗ ತಬ್ಲಿಘಿ ಜೊತೆ ಅಜ್ಮೀರ್ ಕಂಟಕ ಶುರುವಾಗಿದೆ. ರಾಜಸ್ಥಾನದ ಅಜ್ಮೀರ್ ಯಾತ್ರೆಗೆ ಹೋಗಿದ್ದವರಲ್ಲಿ ಮತ್ತು ಅಹಮದಾಬಾದ್ ಜಮಾತ್‍ನಲ್ಲಿ ಭಾಗವಹಿಸಿ ರಾಜ್ಯಕ್ಕೆ ವಾಪಸ್ ಆದವರಲ್ಲಿ ಕೊರೊನಾ ಸೋಂಕು ಪತ್ತೆಯಾಗ್ತಿದೆ.
ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ಹೋಗಿ ವಾಪಸ್ ಆದ 38 ಜನರ ಪೈಕಿ 31 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆತಂಕದ ವಿಚಾರ ಅಂದ್ರೆ ಇವರಷ್ಟೇ ಅಲ್ಲ, ರಾಜ್ಯದಿಂದ 500 ಮಂದಿ ಅಜ್ಮೀರ್ ಹೋಗಿದ್ರಂತೆ. ಅದರಲ್ಲಿ 38 ಜನರಷ್ಟೇ ವಾಪಸ್ಸಾಗಿದ್ದಾರೆ. ಇನ್ನುಳಿದವರು ಬರಬೇಕಿದ್ದು, ಅವರು ಬಂದ್ಮೇಲೆ ಸೋಂಕು ಉಲ್ಬಣಿಸುವ ಭಯ ಸರ್ಕಾರವನ್ನು ಕಾಡತೊಡಗಿದೆ.
ರಾಜ್ಯಕ್ಕೆ ಅಜ್ಮೀರ್ ಕಂಟಕ: ಬೆಳಗಾವಿ – 22, ಬಾಗಲಕೋಟೆ – 08 , ದಾವಣಗೆರೆ – 01
ಅಹಮದಾಬಾದ್ ಜಮಾತ್‍ನಲ್ಲಿ ಪಾಲ್ಗೊಂಡು ರಾಜ್ಯಕ್ಕೆ ವಾಪಸ್ಸಾದವರಲ್ಲಿ ಸೋಂಕು ಕಾಣಿಸಿಕೊಳ್ತಿದೆ. ರಾಜ್ಯದ 8ಕ್ಕೂ ಜಿಲ್ಲೆಗಳಿಗೆ ವಾಪಸ್ ಆದವರಿಗೆ ವೈರಸ್ ಅಟ್ಯಾಕ್ ಆಗಿದೆ. ಈ ಪ್ರಕರಣಗಳು ಮತ್ತಷ್ಟು ಜಾಸ್ತಿ ಆಗುವ ಎಲ್ಲ ಲಕ್ಷಣಗಳು ಕಾಣ್ತಿವೆ.
ಅಹಮದಾಬಾದ್ ಕಂಟಕ: ಬಾಗಲಕೋಟೆ – 15, ದಾವಣಗೆರೆ – 06, ಚಿತ್ರದುರ್ಗ – 03, ತುಮಕೂರು – 03, ಯಾದಗಿರಿ – 02, ಧಾರವಾಡ – 09, ಗದಗ – 01
ಒಟ್ಟಿನಲ್ಲಿ ನೂರಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‍ನಲ್ಲಿದ್ದು, ಅವರ ಕೊರೊನಾ ಪರೀಕ್ಷೆಯ ರಿಸಲ್ಟ್ ಇಂದು ಬರುವ ಸಾಧ್ಯತೆ ಇದ್ದು, ಇಂದು ಎಷ್ಟು ಸಂಖ್ಯೆ ಇದೆಯೋ ಎಂಬುದನ್ನು ಕಾದು ನೋಡಬೇಕಿದೆ.