ಬಳ್ಳಾರಿ: ಕಂಠಪೂರ್ತಿ ಮದ್ಯ ಕುಡಿದು ನಶೆಯಲ್ಲಿ ತೇಲಾಡುತ್ತಿದ್ದ ಕುಡುಕನೋರ್ವ ತನ್ನ ಮನೆಗೇ ಬೆಂಕಿ ಹಚ್ಚಿದ ಘಟನೆ ಬಳ್ಳಾರಿಯ ಕೊಳ್ಳೆಗಲ್ಲು ಗ್ರಾಮದ ಶ್ರೀರಾಮುಲು ನಗರದಲ್ಲಿ ನಡೆದಿದೆ.
ಕೊಳಗಲ್ಲು ಗ್ರಾಮದ ನಿವಾಸಿ ಚಿದಾನಂದ ಕುಡಿದ ಮತ್ತಿನಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಕುಡುಕನ ಅವಾಂತರದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಈ ಚಿದಾನಂದ ಶುಕ್ರವಾರ ತಡ ರಾತ್ರಿ ವಿಪರೀತ ಮದ್ಯಸೇವನೆ ಮಾಡಿದ್ದನು. ಮದ್ಯದ ಅಮಲಿನಲ್ಲಿದ್ದ ಚಿದಾನಂದ ತನ್ನ ಮನೆಯೊಳಗಿನ ಬಟ್ಟೆಗಳಿಗೆ ಬೆಂಕಿ ಹಚ್ಚಿದ್ದಾನೆ. ಅದರಿಂದ ಇಡೀ ಮನೆಯ ಒಳಗಿದ್ದ ವಸ್ತುಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.
ಚಿದಾನಂದನ ಪತ್ನಿ ಶಾಂತಮ್ಮನವರು ಅಗಸಗಿರಿ ಕೆಲಸ ಮಾಡುತ್ತಿದ್ದು, ಬೇರೆಯವರ ಮನೆಯಿಂದ ಬಟ್ಟೆಗಳನ್ನ ತೊಳೆಯೋದಕ್ಕೆ ತಂದಿಟ್ಟಿದ್ದರು. ಪತಿಯ ಮದ್ಯದ ಚಟದಿಂದ ಈಗ ಆ ಬಟ್ಟೆಗಳೂ ಬೆಂಕಿ ಅವಘಡದಲ್ಲಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿದ ಶಾಂತಮ್ಮ, ಬಾರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ವಿಪರೀತ ಕುಡಿದು ಬಂದು ಈ ರೀತಿ ಮಾಡಿದ್ದಾನೆ. ನೋಡಿ ಮನೆಯೊಳಗೆ ಎಲ್ಲಾ ವಸ್ತುಗಳೂ ಸುಟ್ಟು ಕರಕಲಾಗಿವೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.