ಬೆಂಗಳೂರು, ಜ.21- ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಚಟುವಟಿಕೆ ಕೇಂದ್ರವಾದ ಶಿವಾಜಿನಗರ ಇಂದು ಸಂಪೂರ್ಣ ಸ್ತಬ್ಧವಾಗಿತ್ತು.
ಸುಮಾರು ಐದು ಸಾವಿರಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳು, ಫುಟ್‍ಪಾತ್ ವ್ಯಾಪಾರಿಗಳು ತಮ್ಮ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್‍ಗೆ ಬೆಂಬಲ ನೀಡಿದ್ದರು.
ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕಂಟೋನ್ಮೆಂಟ್‍ನ 9 ಮಾರುಕಟ್ಟೆಗಳು ಬಂದ್‍ನಿಂದ ಬಿಕೋ ಎನ್ನುತ್ತಿದ್ದವು. ನಾಲಾ ವೆಜಿಟೆಬಲ್ ಮಾರ್ಕೆಟ್, ಈವಿನಿಂಗ್ ಬಜಾರ್, ಗುಜರಿ ಮಾರುಕಟ್ಟೆ, ಬಂಡಿಮೋಟಾ ಮಾರ್ಕೆಟ್, ಸ್ಟೀಫನ್ ಸ್ಟೋರ್, ಸೆಂಟ್ರಲ್ ಸ್ಟ್ರೀಟ್ ಮಾರ್ಕೆಟ್ ಸೇರಿದಂತೆ ಎಲ್ಲ ಮಾರುಕಟ್ಟೆಗಳು ಬಂದ್ ಆಗಿದ್ದವು.
ಪೀಪಲ್ಸ್ ಫೆಡರೇಷನ್‍ನವರು ಚಾಂದಿನಿ ಚೌಕ್‍ನಲ್ಲಿ ಏರ್ಪಡಿಸಿದ್ದ ಸಮಾವೇಶವನ್ನುದ್ದೇಶಿಸಿ ಮುಸ್ಲಿಂ ಮುಖಂಡರು ಮತ್ತಿತರರು ಮಾತನಾಡಿ, ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಯನ್ನು ವಿರೋಧಿಸಿದರು. ಡಾ.ಪಿ.ವಾಸು ಮಾತನಾಡಿ, ಶಿವಾಜಿನಗರ ಮಾತ್ರವಲ್ಲದೆ ಇಡೀ ದೇಶದಲ್ಲೇ ಜನ ಸಂವಿಧಾನ ಉಳಿಸಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.
ಟೌನ್‍ಹಾಲ್ ಬಳಿ ಸಂಸದ ತೇಜಸ್ವಿ ಸೂರ್ಯ ಅಕ್ಷರ ಬರದವರು ಪಂಕ್ಚರ್ ಹಾಕುತ್ತಿದ್ದಾರೆ ಎಂದು ಹೇಳಿದ್ದರು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಪಂಕ್ಚರ್ ಆಗಿದೆ. ಅದನ್ನು ನಾವು ಸರಿ ಮಾಡಬೇಕಿದೆ ಎಂದರು. ದೇಶದ ಆರ್ಥಿಕತೆಗೆ ಪಂಕ್ಚರ್ ಹಾಕುವ ಕೆಲಸ ನಾವು ಮಾಡಿದ್ದೇವೆ. ಆದರೆ, ಅಂಬಾನಿ, ಅದಾನಿ ಜತೆ ಸೇರಿ ಪ್ರಧಾನಿಯವರು ಪಂಕ್ಚರ್ ಮಾಡುತ್ತಿದ್ದಾರೆ ಎಂದು ಹೇಳಿದರು. ಜ.30ರಂದು ಅಖಂಡ ಭಾರತದಲ್ಲಿ ಮಾನವ ಸರಪಳಿ ನಿರ್ಮಿಸುವ ನಿರ್ಧಾರ ಮಾಡಲಾಗಿದೆ. ಜ.26ರಂದು ಫ್ರೀಡಂಪಾರ್ಕ್‍ನಲ್ಲಿ ಸಂವಿಧಾನ ಉಳಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಮನವಿ ಮಾಡಿದರು.
ಮೌಲ್ವಿ ಮುಸ್ತಿ, ಅಂಜಾಮ್ ಅಜಾಮ್ ಮಾತನಾಡಿ, ಭಾರತದ ಸ್ವಾತಂತ್ರ್ಯಕ್ಕೆ ಎಲ್ಲ ಧರ್ಮ ದವರೂ ಹೋರಾಟ ನಡೆಸಿದ್ದಾರೆ. ಇಂದು ಕೂಡ ಈ ಹೊಸ ಕಾಯ್ದೆ ವಿರುದ್ಧ ಹೋರಾಟ ಅನಿವಾರ್ಯ ವಾಗಿದೆ. ಕೂಡಲೇ ಈ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.