Home / Uncategorized / ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಕೆಎಲ್​ಇ ಕಾರಣ: ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯ0

ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಕೆಎಲ್​ಇ ಕಾರಣ: ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯ0

Spread the love

ಹುಬ್ಬಳ್ಳಿ: ಗಡಿ ಜಿಲ್ಲೆ ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಕೆಎಲ್​ಇ ಸಂಸ್ಥೆ ಕಾರಣ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು. ಇಲ್ಲಿಯ ಎಂ.ಆರ್. ಸಾಖರೆ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ಕೆಎಲ್​ಇ ಸಂಸ್ಥೆ ಬೆಳಗಾವಿ ಮತ್ತು ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿದ್ದ ಅವರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಸುವರ್ಣ ವಿಧಾನಸೌಧ ನಿರ್ವಣಕ್ಕೂ ಪೂರ್ವ ಬೆಳಗಾವಿಯ ಕೆಎಲ್​ಇ ಕಾಲೇಜಿನಲ್ಲಿ 2 ಬಾರಿ ವಿಧಾನ ಮಂಡಲ ಅಧಿವೇಶನ ನಡೆದಿದೆ. ವಿಶ್ವ ಕನ್ನಡ ಸಮ್ಮೇಳನವನ್ನೂ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ಚನ್ನಮ್ಮ ವಿವಿ ನಮ್ಮ ಕ್ಯಾಂಪಸ್​ನಲ್ಲಿ ಕಾರ್ಯಾರಂಭ ಮಾಡಿದ್ದವು ಎಂದರು.

ನಾವು ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ನಿಂತಿದ್ದೇವೆ. ಮುಂದಿನ 20 ವರ್ಷಗಳಲ್ಲಿ ನಮ್ಮ ಸಂಸ್ಥೆಗಳ ಸಂಖ್ಯೆಯನ್ನು 300ರಿಂದ 500ಕ್ಕೆ ತಲುಪಿಸುವ ಉದ್ದೇಶ ಹೊಂದಿದ್ದೇವೆ. ಬೆಳಗಾವಿ ಆಸ್ಪತ್ರೆಯಲ್ಲಿ ಕಳೆದ 26 ವರ್ಷಗಳಲ್ಲಿ 56 ಲಕ್ಷ ಜನರು ಗುಣಮಟ್ಟದ ಆರೋಗ್ಯ ಸೇವೆ ಪಡೆದಿದ್ದಾರೆ. ಹೃದಯ, ಮೂತ್ರಪಿಂಡ, ಯಕೃತ್ತು ಕಸಿಯಂಥ ಕಠಿಣ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ. ದೇಶದಲ್ಲಿ ಸರ್ಕಾರ ಹೊರತು ಪಡಿಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳನ್ನು ನಡೆಸುತ್ತಿದ್ದೇವೆ. ಕೆಎಲ್​ಇಯ ಶೇ.40 ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ದೇಶದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕೆಎಲ್​ಇ ಬೆಳೆಯಲು ಡಾ. ಪ್ರಭಾಕರ ಕೋರೆ ಕಾರಣ. ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ಬಹುದೊಡ್ಡ ಹುದ್ದೆಯಲ್ಲಿ ಇದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಈ ರೀತಿಯ ವ್ಯವಸ್ಥೆಯಲ್ಲಿ ವಿದ್ಯಾದಾನ ಮಾಡಲು ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ನಾಡಿಗೆ ಹಲವಾರು ಸಾಧಕರನ್ನು ಕೊಟ್ಟ ಸಂಸ್ಥೆ ಕೆಎಲ್​ಇ. ಇದರ ಸಂಸ್ಥೆಗಳ ಸಂಖ್ಯೆಯನ್ನು 300ಕ್ಕೆತಲುಪಿಸಿದ ಕೀರ್ತಿ ಕೋರೆ ಅವರಿಗೆ ಸಲ್ಲುತ್ತದೆ. ಕಳೆದ 40 ವರ್ಷಗಳಿಂದ ಇದರ ಚುಕ್ಕಾಣಿ ಹಿಡಿದಿರುವ ಕೋರೆ ಅವರು ಇದನ್ನು ಅತ್ಯುನ್ನತ ಸ್ಥಾನಕ್ಕೆ ಒಯ್ದಿದ್ದಾರೆ. ಕೋರೆ ಅವರು ಪೂರ್ಣ ಪ್ರಮಾಣದ ರಾಜಕಾರಣ ಮಾಡಿದ್ದರೆ ಇಂದು ಅತ್ಯುನ್ನತ ಸ್ಥಾನದಲ್ಲಿ ಇರುತ್ತಿದ್ದರು ಎಂದರು.

ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ರಾಜಕೀಯ ಅಧಿಕಾರ, ಹಿತಾಸಕ್ತಿಗಳನ್ನು ಬದಿಗೆ ಸರಿಸಿ ಶಿಕ್ಷಣ ಕ್ಷೇತ್ರಕ್ಕೆ ಬದುಕನ್ನು ಸವೆಸಿದ ಮಾತೃಹೃದಯಿ ಡಾ. ಕೋರೆ ಅವರು. ಅವರ ಸೇವೆ ಉತ್ತರ ಕರ್ನಾಟಕ, ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಕೆಎಲ್​ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಶ್ರೀಶೈಲಪ್ಪ ಮೆಟಗುಡ, ಡಾ. ವಿಶ್ವನಾಥ ಪಾಟೀಲ, ಪ್ರವೀಣ ಬಾಗೇವಾಡಿ, ಕೆಎಲ್​ಇ ತಾಂತ್ರಿಕ ವಿವಿ ಡೀನ್ ಡಾ. ಪ್ರಕಾಶ ತೆವರಿ, ಆಶಾ ಕೋರೆ, ಇತರರು ಇದ್ದರು. ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಸ್ವಾಗತಿಸಿದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮಾತನಾಡಿ, ಕಳೆದ 40 ವರ್ಷಗಳಿಂದ ಕೆಎಲ್​ಇ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಡಾ. ಪ್ರಭಾಕರ ಕೋರೆ ಅವರು ಅತಿ ವೇಗವಾಗಿ ಜಗತ್ತೇ ಬೆರಗಾಗುವಂತೆ ಈ ಸಂಸ್ಥೆಯನ್ನು ಬೆಳೆಸಿದ್ದಾರೆ. ಅವರು ಕೆಎಲ್​ಇ ಸಂಸ್ಥೆಗೆ ಆಜೀವ ಕಾರ್ಯಾಧ್ಯಕ್ಷರಾಗಿ ಮುಂದುವರಿಯಬೇಕು ಎಂಬುದು ನಮ್ಮ ಆಸೆಯಾಗಿದೆ. ಇದರಿಂದ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗುತ್ತದೆ. ಆಡಳಿತ ಮಂಡಳಿ ಬದಲಾದರೂ ಕೋರೆ ಅವರೇ ಕಾರ್ಯಾಧ್ಯಕ್ಷರಾಗಿರಬೇಕು. ಅವರೊಟ್ಟಿಗೆ ನಾವೆಲ್ಲರೂ ಇದ್ದೇವೆ ಎಂದರು. ಹುಬ್ಬಳ್ಳಿಗೆ ಮೆಡಿಕಲ್ ಕಾಲೇಜ್ ಕೆಎಲ್​ಇ ಸಂಸ್ಥೆಯ ದೊಡ್ಡ ಕೊಡುಗೆ. ಕೆಲವೇ ತಿಂಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ವಣವಾಗಲಿದೆ. ಕೋರೆ ಅವರು ಏಕಲವ್ಯನ ರೀತಿ ಗುರಿ ಇಟ್ಟುಕೊಂಡು ಕೆಎಲ್​ಇ ಸಂಸ್ಥೆಯನ್ನು ಕಟ್ಟಿದ್ದಾರೆ ಎಂದು ಪ್ರಶಂಸಿಸಿದರು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ