Breaking News
Home / Uncategorized / 4.50 ಕೋಟಿ ರೂ. ವೆಚ್ಚದ ಹಾಲು ಉತ್ಪಾದಕರ ಮಕ್ಕಳಿಗೆ ವಸತಿ ನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ

4.50 ಕೋಟಿ ರೂ. ವೆಚ್ಚದ ಹಾಲು ಉತ್ಪಾದಕರ ಮಕ್ಕಳಿಗೆ ವಸತಿ ನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ

Spread the love

 

ಬೆಳಗಾವಿ : ಬೆಳಗಾವಿಯಲ್ಲಿ ನಂದಿನಿ ಮಿಲ್ಕ್ ಪ್ರೋಡಕ್ಟ್ (ಎನ್‍ಎಂಪಿ) ಘಟಕ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಶುಕ್ರವಾರದಂದು ಬೆಳಗಾವಿ ಹಾಲು ಒಕ್ಕೂಟದ ಆವರಣದಲ್ಲಿ ನಡೆದ ಹಾಲು ಉತ್ಪಾದಕರ ರೈತರ ಮಕ್ಕಳಿಗೆ 4.50 ಕೋಟಿ ರೂ. ವೆಚ್ಚದ ವಸತಿ ನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

 

 

ಎನ್‍ಎಂಪಿ ಘಟಕ ಸ್ಥಾಪನೆಗೆ ಬೆಳಗಾವಿ ಮಹಾ ನಗರದಲ್ಲಿ 40 ರಿಂದ 50 ಎಕರೆ ಜಮೀನನ್ನು ನೋಡಲಾಗುತ್ತಿದೆ. ಇಲ್ಲಿ ಎನ್‍ಎಂಪಿ ಘಟಕ ಸ್ಥಾಪನೆಯಾದರೆ ಪುಣೆ, ಮುಂಬೈ, ಗೋವಾ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಮಾರುಕಟ್ಟೆಗಳಿಗೆ ನಂದಿನಿ ಉತ್ಪನ್ನಗಳನ್ನು ತ್ವರಿತವಾಗಿ ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಹಾಲು ಉತ್ಪಾದಕರ ಮಕ್ಕಳಿಗೆ ವಸತಿ ನಿಲಯ ಕಟ್ಟಡವನ್ನು 4.50 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ನಿರ್ಮಿಸಲಾಗುತ್ತಿದೆ. ಒಂದು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಇಲ್ಲಿ 100 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಮಾಡಿಕೊಡಲಾಗುತ್ತದೆ. ಶೇ 50 ರಷ್ಟು ಬಾಲಕರು ಮತ್ತು ಶೇ 50 ರಷ್ಟು ಬಾಲಕೀಯರಿಗೆ ಪ್ರವೇಶ ನೀಡಲಾಗುವುದು. ಈ ಮೂಲಕ ಹಾಲು ಉತ್ಪಾದಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೇ ರಾಜ್ಯದಲ್ಲಿರುವ ಎಲ್ಲ 14 ಹಾಲು ಒಕ್ಕೂಟಗಳಲ್ಲಿಯೂ ಇದೇ ಮಾದರಿಯಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ವಸತಿ ನಿಲಯ ಸ್ಥಾಪಿಸುವ ಚಿಂತನೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ 1400 ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದ್ದು, ಅತೀ ಹೆಚ್ಚು ಅಂದರೆ 15 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ ಈ ಪೈಕಿ ಕೇವಲ 2 ಲಕ್ಷ ಲೀಟರ್ ಹಾಲು ಮಾತ್ರ ಒಕ್ಕೂಟಕ್ಕೆ ಬರುತ್ತಿದೆ. ಖಾಸಗಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಹೋಗುತ್ತಿದೆ. ರೈತರಿಗೆ ಹೆಚ್ಚಿನ ದರ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಒಕ್ಕೂಟಕ್ಕೆ ಹಾಲು ಬರುವಂತೆ ಒಕ್ಕೂಟದ ಆಡಳಿತ ಮಂಡಳಿಯವರು ಮತ್ತು ಅಧಿಕಾರಿಗಳು ಶ್ರಮಿಸುವಂತೆ ಸೂಚಿಸಿದರು.

ರೈತರಿಗೆ ಹೆಚ್ಚಿನ ದರ ನೀಡಿ ಹಸು, ಎಮ್ಮೆ ಹಾಲನ್ನು ಖರೀದಿಸಬೇಕು. ರಾಜ್ಯದಲ್ಲಿ ಹಾಲಿಗೆ ಒಂದೇ ದರ ನೀಡುವುದು ಕಷ್ಟಕರ. ಎಲ್ಲ ಒಕ್ಕೂಟಗಳಿಂದ ಒಂದೇ ದರ ನೀಡುವ ಕುರಿತು ಪ್ರಯತ್ನಿಸಲಾಗುವುದು. ಈ ಸಂಬಂಧ ಮುಂದಿನ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ರೈತರು, ಗ್ರಾಹಕರು, ನೌಕರರು ಸುಖವಾಗಿರಬೇಕು. ಉತ್ತರ ಕರ್ನಾಟಕದ ರೈತರು ಕಬ್ಬು ಬೆಳೆಯನ್ನು ಅವಲಂಬಿಸಿದ್ದಾರೆ. ರೈತರು ಕಬ್ಬಿನ ಬೆಳೆಯ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಈ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ರೈತರಲ್ಲಿ ಕೋರಿಕೊಂಡರು.

ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ ಮಾತನಾಡಿ, ಕೆಎಂಎಫ್ ಡೈರಿ ಬಳಿಯಿದ್ದ ಸಾರ್ವಜನಿಕ ಗ್ರಂಥಾಲಯ ಸ್ಮಾರ್ಟ ಸಿಟಿ ಯೋಜನೆ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಗ್ರಂಥಾಲಯ ಕಟ್ಟಡವನ್ನು ತೆರವುಗೊಳಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೆಎಂಎಫ್‍ನ ಅರ್ಧ ಗುಂಟೆ ಜಾಗೆಯನ್ನು ನೀಡಿ ಗ್ರಂಥಾಲಯ ಕಟ್ಟಡ ನಿರ್ಮಿಸಲು ಮನವಿ ಮಾಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರು ಗ್ರಂಥಾಲಯ ನಿರ್ಮಿಸಲು ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು.

ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ವಹಿಸಿದ್ದರು.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ನಗರಸೇವಕ ರಾಜಶೇಖರ ಡೋಣಿ, ಬೆಳಗಾವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್, ಕೆಎಂಎಫ್ ನಿರ್ದೇಶಕರು ಹಾಗೂ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 


Spread the love

About Laxminews 24x7

Check Also

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೇ..? ಇಲ್ಲಿದೆ ನೋಡಿ ಮಾಹಿತಿ

Spread the love ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಆಹಾರ ಇಲಾಖೆ ಮುಖ್ಯವಾದ ಮಾಹಿತಿ ನೀಡಿದೆ. ಬೆಂಗಳೂರು ಒನ್, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ