ಬೆಂಗಳೂರು,ಮಾ.28- ಕೆ.ಆರ್.ಮಾರುಕಟ್ಟೆಯನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸುವ ಐಡಿಯಾ ಫ್ಲಾಪ್ ಆಗುತ್ತಿದ್ದಂತೆ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲು ಬಿಬಿಎಂಪಿ ಮುಂದಾಗಿದೆ.
ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದೆ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ಹೊಸೂರು ರಸ್ತೆಯ ಸಿಂಗೇನ ಅಗ್ರಹಾರ ಸ್ಥಳಾಂತರಿಸಲಾಗುತ್ತಿದೆ ಎಂದು ಆಯುಕ್ತ ಅನಿಲ್‍ಕುಮಾರ್ ತಿಳಿಸಿದ್ದಾರೆ.
ಕಲಾಸಿಪಾಳ್ಯ ಮಾರುಕಟ್ಟೆಯನ್ನು ಈ ಹಿಂದೆಯೇ ಸಿಂಗೇನ ಅಗ್ರಹಕಾರಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಇದೀಗ ಕಲಾಸಿಪಾಳ್ಯ ಮಾರುಕಟ್ಟೆಯ 423ಕ್ಕೂ ಹೋಲ್‍ಸೇಲ್ ವ್ಯಾಪಾರಿಗಳನ್ನು ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕೆ.ಆರ್.ಮಾರುಕಟ್ಟೆಯನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ನ್ಯಾಷನಲ್ ಗ್ರೌಂಡ್ ಮಾರುಕಟ್ಟೆಯನ್ನು ರದ್ದುಗೊಳಿಸಲಾಗಿದೆ ಎಂದು ಅವರು ಸ್ಪಷ್ಟನೆ ಮಾಡಿದ್ದಾರೆ.