ಬೆಂಗಳೂರು, ಮಾ.28-ಎಷ್ಟೇ ಎಚ್ಚರಿಕೆ ನೀಡಿದರೂ ಜನ ಬೀದಿಗೆ ಬರುತ್ತಿರುವುದನ್ನು ನಿಲ್ಲಿಸದೇ ಇರುವ ಹಿನ್ನಲೆಯಲ್ಲಿ ನಗರಕ್ಕೆ ಅರೆ ಸೇನಾ ಪಡೆಯನ್ನು ನಿಯೋಜಿಸುವ ಕುರಿತಂತೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ನಗರದಲ್ಲಿ ದಿನೇ ದಿನೇ ಮಹಾಮಾರಿ ಕೊರೊನಾ ವೈರಸ್ ಹೆಚ್ಚುತ್ತಲೆ ಇರುವುದು ತಲೆ ನೋವಾಗಿ ಪರಿಣಮಿಸಿದೆ. ಪೊಲೀಸರು ಜನರ ಮೇಲೆ ಲಾಠಿ ಪ್ರಯೋಗಿಸಿ ಮನೆಗಳಿಂದ ಹೊರ ಬರದಂತೆ ಎಚ್ಚರಿಕೆ ನೀಡುತ್ತಿದ್ದರೂ ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಜನರ ಈ ನಿರ್ಲಕ್ಷ್ಯದಿಂದ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಜನರ ಓಡಾಟ ತಪ್ಪಿಸುವತ್ತ ಚಿತ್ತ ಹರಿಸಿದೆ.ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ರಸ್ತೆಯಲ್ಲಿ ಜನರ ಬೇಕಾಬಿಟ್ಟಿ ಸಂಚಾರ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಜನರ ಓಡಾಟ ತಪ್ಪಿಸಲು ಅರೆ ಸೇನಾ ಪಡೆಗಳನ್ನು ನಿಯೋಜಿಸುವ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ತಿಳಿದು ಬಂದಿದೆ. ಸೋಮವಾರದಿಂದಲೇ ನಗರಕ್ಕೆ ಅರೆ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಗಳಿವೆ. ಜನ ನಿಬಿಡ ಪ್ರದೇಶಗಳಲ್ಲಿ ಸೇನಾ ಪಡೆಗಳು ಪಥ ಸಂಚಲನ ನಡೆಸಿ ಜನರಿಗೆ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಲಿವೆ.
ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೆ ಬೇಕಾಬಿಟ್ಟಿ ಸಂಚರಿಸಿದರೆ ಸೇನಾಪಡೆ ಯೋಧರ ಲಾಠಿ ರುಚಿ ನೋಡಬೇಕಾಗುತ್ತದೆ ಎಚ್ಚರ.ಈಗಾಗಲೇ ನಗರ ಮೂರನೇ ಹಂತಕ್ಕೆ ಕಾಲಿಟ್ಟಿದೆ. ಇನ್ನು ಮುಂದೆ ಎಷ್ಟೇ ಎಚ್ಚರ ವಹಿಸಿದರೂ ಸಾಲದು ಇಂತಹ ಸಂದರ್ಭದಲ್ಲಿ ಪೊಲೀಸರ ಬದಲು ಸೇನಾ ಪಡೆಗಳಿಂದ ಮಾತ್ರ ಜನ ಸಂಚಾರ ತಪ್ಪಿಸಲು ಸಾಧ್ಯ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ.
ಬೆಂಗಳೂರು ಮಾತ್ರವಲ್ಲದೆ ಕೊರೊನಾ ಸೋಂಕು ಹೆಚ್ಚಿರುವ ಚಿಕ್ಕಬಳ್ಳಾಪುರ, ತುಮಕೂರು ಮತ್ತಿತರ ಕೆಲ ನಗರಗಳಲ್ಲೂ ಅರೆ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಗಳಿವೆ