Breaking News
Home / ಜಿಲ್ಲೆ / ಸೋಮವಾರ ಖಾತೆಗಳನ್ನು ಹಂಚಿಕೆ ಇಂದಿಲ್ಲಿ :BSY

ಸೋಮವಾರ ಖಾತೆಗಳನ್ನು ಹಂಚಿಕೆ ಇಂದಿಲ್ಲಿ :BSY

Spread the love

ಬೆಂಗಳೂರು,ಫೆ.8- ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ 10 ಮಂದಿ ಶಾಸಕರಿಗೆ ಸೋಮವಾರ ಖಾತೆಗಳನ್ನು ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಘೋಷಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಚಿವರಿಗೆ ಯಾವ ಖಾತೆಗಳನ್ನು ನೀಡಬೇಕೆಂಬ ಪಟ್ಟಿ ಸಿದ್ದವಾಗಿದೆ. ಸೋಮವಾರ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದರು.

ಇಂದು ಶನಿವಾರ ರಜಾದಿನವಾಗಿದ್ದರಿಂದ ಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಸೋಮವಾರ ಖಾತೆಗಳ ಹಂಚಿಕೆಯಾಗಲಿದೆ. ಈ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು. ಇಂದೇ ಖಾತೆಯನ್ನು ಹಂಚಿಕೆ ಮಾಡಬೇಕಾಗಿತ್ತಾದರೂ ರಜಾದಿನವಾದ ಕಾರಣ ಎರಡು ದಿನ ಮುಂದೂಡಿಕೆಯಾಗಿದೆ. ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ತೆರಳುವುದಿಲ್ಲ ಎಂದು ತಿಳಿಸಿದರು.
ಗುರುವಾರ ಸಚಿವ ಸಂಪುಟ ವಿಸ್ತರಣೆಯಾದ ವೇಳೆ ಸಿಎಂ ಯಡಿಯೂರಪ್ಪನವರು ಎರಡು ದಿನಗಳಲ್ಲೇ ಖಾತೆ ಹಂಚಿಕೆ ಮಾಡುವುದಾಗಿ ಹೇಳಿದ್ದರು. ಇದೀಗ ಸೋಮವಾರ ಖಾತೆ ಹಂಚಿಕೆ ಮಾಡುವುದಾಗಿ ಖುದ್ದು ಮುಖ್ಯಮಂತ್ರಿಗಳೇ ಹೇಳಿರುವುದರಿಂದ ನೂತನ ಸಚಿವರು ಪ್ರಬಲ ಖಾತೆಗಳನ್ನು ಪಡೆಯಲು ಲಾಭಿ ಆರಂಭಿಸಿದ್ದಾರೆ. ಇದರ ನಡುವೆ ಕೆಲ ಸಚಿವರು ನಿರ್ಧಿಷ್ಟ ಖಾತೆಗೆ ಪಟ್ಟು ಹಿಡಿದಿರುವುದು ವಿಳಂಬಕ್ಕೆ ಕಾರಣವಾಗಿದೆ.

ನಮಗೆ ಇಂಥದ್ದೇ ಖಾತೆಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಪಕ್ಷಕ್ಕೆ ಬಂದರೆ ಇಂಥದ್ದೇ ಖಾತೆಗಳನ್ನು ನೀಡುತ್ತೇನೆ ಎಂದು ಯಡಿಯೂರಪ್ಪ ಶಾಸಕರಿಗೆ ಆಶ್ವಾಸನೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ನೂತನ ಸಚಿವರು ಲಾಭದಾಯಕ ಖಾತೆಗಳ ಮೇಲೆ ಕಣ್ಣಿಟ್ಟಿರುವುದು ಖಾತೆ ಹಂಚಿಕೆಗೆ ವಿಳಂಬವಾಗುತ್ತಿದೆ. ರಮೇಶ್ ಜಾರಕಿಹೊಳಿ ತಮಗೆ ನೀರಾವರಿ ಖಾತೆಯನ್ನು ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

ಆದರೆ ಇದು ಪ್ರಮುಖ ಖಾತೆಯಾಗಿರುವುದರಿಂದ ರಮೇಶ್ ಜಾರಕಿಹೊಳಿ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಾರೆ ಎಂಬ ಖಾತ್ರಿ ಮುಖ್ಯಮಂತ್ರಿಗಳಾಗಲಿ ಇಲ್ಲವೇ ಬಿಜೆಪಿ ನಾಯಕರಿಗೆ ಇಲ್ಲ. ಹೀಗಾಗಿ ಅವರ ಮನವೊಲಿಸಿ ಬೇರೊಂದು ಖಾತೆ ನೀಡುವ ಕಸರತ್ತು ಮುಂದುವರೆದಿದೆ. ಮೊದಲ ಬಾರಿಗೆ ಸಚಿವರಾಗಿರುವ ಬಿ.ಸಿ.ಪಾಟೀಲ್ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಸಾಮಾನ್ಯವಾಗಿ ಮೊದಲ ಬಾರಿ ಸಚಿವರಾದವರಿಗೆ ಇಂತಹ ಪ್ರಮುಖ ಖಾತೆಯನ್ನು ನೀಡುವ ಸಾಧ್ಯತೆ ತೀರಾ ಕಡಿಮೆ.

ಆನಂದ್ ಸಿಂಗ್ ಲೋಕೋಪಯೋಗಿ ಇಲ್ಲವೇ ಇಂಧನ ಖಾತೆ ಕೇಳಿದ್ದರೆ ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ, ಕೆ.ಸಿ.ನಾರಾಯಣ ಗೌಡ ಸಣ್ಣ ನೀರಾವರಿ, ಎಸ್.ಟಿ.ಸೋಮಶೇಖರ್ ಬೆಂಗಳೂರು ನಗರಾಭಿವೃದ್ಧಿ, ಭೈರತಿ ಬಸವರಾಜ್ ನಗರಾಭಿವೃದ್ದಿ ಖಾತೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ