ನವದೆಹಲಿ: ಲಾಕ್‍ಡೌನ್‍ನಿಂದಾಗಿ ಕ್ರಿಕೆಟ್ ಟೂರ್ನಿಗಳಿಲ್ಲದೆ ಕ್ರಿಕೆಟಿಗರು ಹಾಗೂ ಅಭಿಮಾನಿಗಳ ಮಧ್ಯೆ ಅಂತರ ಉಂಟಾಗಿದೆ. ಕೊರೊನಾ ವೈರಸ್ ಭೀತಿಯಿಂದ ಕ್ರಿಕೆಟಿಗರು ತಮ್ಮ ಮನೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಶುಕ್ರವಾರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಾಕ್‍ಡೌನ್ ಮಧ್ಯೆ ಮನೆಯಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ ಎಂಬ ಬಗ್ಗೆ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪ್ರಸ್ತುತ ಸಾಮಾಜಿಕ ಅಂತರ ಹೊಂದಿರುವ ಪತಿ ಕ್ರಿಕೆಟ್ ಪಂದ್ಯಗಳ ವಾತಾವರಣದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಲು ಅನುಷ್ಕಾ ಶರ್ಮಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ, ”ಕೊಹ್ಲಿ ಮೈದಾನದಲ್ಲಿ ಆಡುವುದನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸಿರುವೆ. ಲಕ್ಷಾಂತರ ಅಭಿಮಾನಿಗಳಿಂದ ಅವರು ಪಡೆಯುವ ಪ್ರೀತಿಯ ಜೊತೆಗೆ, ಅವರು ವಿಶೇಷವಾಗಿ ಈ ಒಂದು ನಿರ್ದಿಷ್ಟ ರೀತಿಯ ಅಭಿಮಾನಿಗಳನ್ನು ಸಹ ಕಳೆದುಕೊಂಡಿರಬಹುದು. ಹಾಗಾಗಿ ಅಭಿಮಾನಿಯಾಗಿ ನಾನು ಅವರಿಗೆ ಅನುಭವವನ್ನು ನೀಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅನುಷ್ಕಾ ಅವರು ಕೊಹ್ಲಿ ಅವರನ್ನು ಕೂಗುತ್ತಾ, ‘ಕೊಹ್ಲಿ, ಹೇ ಕೊಹ್ಲಿ… ಕೊಹ್ಲಿ… ಚೌಕಾ ಮಾರ್ ನಾ, ಚೌಕಾ…. ಕ್ಯಾ ಕರ್ ರಾಹಾ ಹೈ… ಹೇ ಚೌಕಾ ಮಾರ್ (ಹೇ ಕೊಹ್ಲಿ ಬೌಂಡರಿ ಬಾರಿಸಿ. ನೀವು ಏನು ಮಾಡುತ್ತಿದ್ದೀರಿ)’ ಎಂದು ಹೇಳಿದ್ದಾರೆ.
ಅನುಷ್ಕಾ ಶರ್ಮಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಅನುಷ್ಕಾ ಅವರ ಬುದ್ಧಿವಂತಿಕೆಯ ಬಗ್ಗೆ ಅಭಿಮಾನಿಗಳು ತಮ್ಮದೆ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಜೋಡಿ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿನಿಂದಲೂ ವಿರುಷ್ಕಾ ಜೋಡಿ ಕೋಡಿಡ್-19ನಿಂದ ಸುರಕ್ಷಿತವಾಗಿರಲು ಸಂಬಂಧಿಸಿದಂತೆ ಜಾಗೃತಿ ಸಂದೇಶಗಳನ್ನು ಹಂಚಿಕೊಂಡಿದ್ದರು.
ಕ್ಯೂಟ್ ಕಪಲ್ ವಿರುಷ್ಕಾ ಈ ಹಿಂದೆ ವಿಡಿಯೋ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದರು. ಈ ಮಧ್ಯೆ ಅನುಷ್ಕಾ ಶರ್ಮಾ ಪತಿ ವಿರಾಟ್ ಅವರ ಹೇರ್ ಕಟಿಂಗ್ ಮಾಡಿದ್ದರು.