ಖಾನಾಪುರ: ಪಟ್ಟಣದಲ್ಲಿ ಶಾಲೆಗೆ ಹೋಗುವಾಗ ಬುಧವಾರ ಅಪಹರಣವಾಗಿದ್ದ 8ನೇ ತರಗತಿ ವಿದ್ಯಾರ್ಥಿಯೊಬ್ಬ ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡು ಮನೆಗೆ ಬಂದು ಸೇರಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ಪಟ್ಟಣದ ಅಸೋಗಾ ರಸ್ತೆಯ ರೈಲು ನಿಲ್ದಾಣದ ಪೂರ್ವ ದಿಕ್ಕಿನ ಬಡಾವಣೆಯಲ್ಲಿ ವಾಸವಿದ್ದ ಆದಿತ್ಯ ಮಿಲಿಂದ ಶಿಂಧೆ (13) ಶಾಲೆಗೆ ಹೋಗಲು ರೈಲು ನಿಲ್ದಾಣದ ಬಳಿ ಬಂದಾಗ ಆತನ ಮೂಗಿಗೆ ಅಪರಿಚಿತರು ಹಿಂದಿನಿಂದ ಪ್ರಜ್ಞೆ ತಪ್ಪಿಸುವ ಔಷಧವಿರುವ ಕರವಸ್ತ್ರವನ್ನು ಹಿಡಿದು ಪ್ರಜ್ಞೆ ತಪ್ಪಿಸಿದ್ದಾರೆ.
ಬಳಿಕ ಬಾಲಕನನ್ನು ಹೊತ್ತುಕೊಂಡು ರೈಲು ನಿಲ್ದಾಣದಿಂದ 10.15ಕ್ಕೆ ಹುಬ್ಬಳ್ಳಿಯತ್ತ ಹೊರಡುವ ಮೀರಜ್ ರೈಲನ್ನೇರಿದ್ದಾನೆ.
ಬಾಲಕ ಎಚ್ಚರಗೊಂಡಾಗ ರೈಲು ಧಾರವಾಡ ನಿಲ್ದಾಣ ಪ್ರವೇಶಿಸುತ್ತಿರುವುದನ್ನು ಗಮನಿಸಿ, ರೈಲು ಬೋಗಿಯ ಮತ್ತೊಂದು ಬದಿಯ ಬಾಗಿಲಿನಿಂದ ಇಳಿದು, ಅಪಹರಣಕಾರನ ಕಣ್ತಪ್ಪಿಸಿ ಜನಸಂದಣಿಯಲ್ಲಿ ಸೇರಿ ನಿಲ್ದಾಣದಿಂದ ಹೊರಬಂದಿದ್ದಾನೆ. ನಿಲ್ದಾಣದ ಸಫಾಯಿ ಸಿಬ್ಬಂದಿಯೊಬ್ಬರ ಮೊಬೈಲ್ ಪಡೆದು ಪಾಲಕರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾನೆ. ಸಂಬಂಧಿಯೊಬ್ಬರು ಸ್ಥಳಕ್ಕೆ ಬಂದು, ಬುಧವಾರ ರಾತ್ರಿ ಸುರಕ್ಷಿತವಾಗಿ ಮನೆಗೆ ಕರೆತಂದಿದ್ದಾರೆ.