ಅಮರಾವತಿ: ಆತ್ಮೀಯ ಆತಿಥ್ಯ ನೀಡಿದ್ದಕ್ಕಾಗಿ ಭಾರತಕ್ಕೆ ಬ್ರಿಟನ್ ಪ್ರಜೆಯೊಬ್ಬರು ವಿಶೇಷ ಧನ್ಯವಾದ ತಿಳಿಸಿದ್ದಾರೆ.
ತಿರುಪತಿ ಸಮೀಪದ ಶ್ರೀ ಪದ್ಮಾವತಿ ನಿಲಯದಲ್ಲಿ ಬ್ರಿಟನ್‍ನ ವೇಲ್ಸ್ ಮೂಲದ 56 ವರ್ಷದ ಕುಲ್ಲೆ ಕ್ಲೈವ್ ಬ್ರಯಾಂಟ್ ಕ್ವಾರಂಟೈನ್ ಆಗಿದ್ದರು. ಅವರು ಮೂರು ವಾರಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. ಎರಡು ಬಾರಿ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ರಿಪೋರ್ಟ್ ನೆಗೆಟಿವ್ ಬಂದಿದ್ದರಿಂದ ಅವರನ್ನು ಕ್ವಾರಂಟೈನ್‍ನಿಂದ ಗುರುವಾರ ಬಿಡುಗಡೆಗೊಳಿಸಲಾಗಿದೆ.
ಲಂಡನ್‍ನಲ್ಲಿ ಭೂಗೋಳಶಾಸ್ತ್ರದ ಪ್ರೊಫೆಸರ್ ಆಗಿರುವ ಕುಲ್ಲೆ ಕ್ಲೈವ್ ಬ್ರಯಾಂಟ್ ಅವರು ಭಾರತದ ಪ್ರವಾಸ ಕೈಗೊಂಡಿದ್ದರು. ಭಗವಾನ್ ವೆಂಕಟೇಶ್ವರನ ದರ್ಶನ ಪಡೆಯಲು ಅವರು ಮಾರ್ಚ್ ಮೂರನೇ ವಾರದಲ್ಲಿ ತಿರುಪತಿ ತಲುಪಿದ್ದರು. ಅವರು ತಿರುಪತಿಯಿಂದ ಹೊರಟಿದ್ದಾಗ ಅಂದ್ರೆ ಮಾರ್ಚ್ 24ರಂದು ಲಾಕ್‍ಡೌನ್ ಜಾರಿಗೆ ಬಂದಿತ್ತು. ಹೀಗಾಗಿ ಜಿಲ್ಲಾಡಳಿತ ಮತ್ತು ತಿರುಪತಿ ನಗರ ಪೊಲೀಸರ ನಿರ್ದೇಶನದಂತೆ ತಿರುಪತಿ ಬಳಿಯ ಶ್ರೀ ಪದ್ಮಾವತಿ ನಿಲಯದಲ್ಲಿ ಅವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು.
ಮೂರು ವಾರಗಳ ಸಂಪರ್ಕತಡೆಯನ್ನು ಅವಧಿಯಲ್ಲಿ ಕುಲ್ಲೆ ಕ್ಲೈವ್ ಬ್ರಯಾಂಟ್ ಅವರಿಗೆ ಎರಡು ಬಾರಿ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ರಿಪೋರ್ಟ್ ನಲ್ಲಿ ನೆಗೆಟಿವ್ ಬಂದಿದೆ. ಇತ್ತ ಬ್ರಿಟನ್ ರಾಯಭಾರಿ ಕಚೇರಿಯು ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ತನ್ನ ಪ್ರಜೆಗಳಿಗೆ ವಿಶೇಷ ವಿಮಾನವನ್ನು ಕಲ್ಪಿಸಿದೆ. ಹೀಗಾಗಿ ಕುಲ್ಲೆ ಕ್ಲೈವ್ ಅವರನ್ನು ಗುರುವಾರ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ ಎಂದು ಕ್ವಾರಂಟೈನ್ ಕೇಂದ್ರದ ಉಸ್ತುವಾರಿ ಎಸ್.ಲಕ್ಷ್ಮಿ ತಿಳಿಸಿದ್ದಾರೆ.
ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬ್ರಿಟನ್‍ನ ವಿಶೇಷ ವಿಮಾನ ಬಂದಿದೆ. ಹೀಗಾಗಿ ಕುಲ್ಲೆ ಕ್ಲೈವ್ ಅವರನ್ನು ಟ್ಯಾಕ್ಸಿಯ ಮೂಲಕ ಹೈದರಾಬಾದ್‍ಗೆ ಕಳುಹಿಸಲಾಯಿತು.
ಕ್ಯಾರೆಂಟೈನ್ ಕೇಂದ್ರದಿಂದ ಹೊರಹೋಗುವಾಗ ಪ್ರೊಫೆಸರ್ ಕುಲ್ಲೆ ಕ್ಲೈವ್ ಅವರು ತಮ್ಮನ್ನು ಕಾಳಜಿಯಿಂದ ನೋಡಿಕೊಂಡ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. ಆಹಾರ, ವಸತಿ, ವೃತ್ತಿಪರ ವೈದ್ಯಕೀಯ ಆರೈಕೆ ಮತ್ತು ಆರೋಗ್ಯಕರ ವಾತಾವರಣವನ್ನು ಹೊಗಳಿದ ಕೈಬರಹದ ಪತ್ರವನ್ನು ಅವರು ಅಲ್ಲಿನ ಅಧಿಕಾರಿಗಳಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಪ್ರತಿದಿನ ಅವರಿಗೆ ಆಹಾರವನ್ನು ನೀಡುತ್ತಿದ್ದ ಓರ್ವ ಸಿಬ್ಬಂದಿ ಬಗ್ಗೆಯೂ ವಿಶೇಷ ಉಲ್ಲೇಖ ಮಾಡಿದ್ದಾರೆ.