ತುಮಕೂರು, – ಎತ್ತಿನ ಹೊಳೆಯ ಬೈರಗೊಂಡ್ಲು ಜಲಾಶಯದ ನಿರ್ಮಾಣಕ್ಕೆ ಭೂಸ್ವಾಧೀನಕ್ಕೊಳಪಡುವ ರೈತರ ಜಮೀನಿಗೆ ಸೂಕ್ತ ಪರಿಹಾರ ದರ ನಿಗಧಿ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಬೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಕುರಿತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜರುಗಿದ ಸಮಾಲೋಚನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರ ಜಮೀನು ಭೂಸ್ವಾಧೀನವಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡುತ್ತಿರುವ ಪ್ರತಿ ಎಕರೆಗೆ 32ಲಕ್ಷ ರೂ.ಗಳ ಪರಿಹಾರ ದರದಂತೆ ಕೊರಟಗೆರೆ ತಾಲ್ಲೂಕಿನ ರೈತರಿಗೂ ದೊರೆಯಬೇಕೆನ್ನುವುದು ನನ್ನ ಆಶಯವಾಗಿದೆ ಎಂದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಯೋಜನೆಗೆ ಭೂಸ್ವಾಧೀನವಾಗುವ ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೇರಿದಂತೆ ಇತರೆ ಕಡೆ ರೈತರಿಗೆ ನೋಟೀಸ್ ನೀಡಿರುವುದಿಲ್ಲ. ನಿಯಮಾನುಸಾರ ರೈತರಿಗೆ ಭೂ-ಪರಿಹಾರ ನೀಡುವುದು ತಡವಾದರೂ ಸಹ ಮೊದಲು ನೋಟೀಸ್ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬೈರಗೊಂಡ್ಲು ಜಲಾಶಯವು ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲ್ಲೂಕಿನ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿದ್ದು, ಪಕ್ಕದ ತಾಲ್ಲೂಕಿನ ರೈತರಿಗೆ ನೀಡುವ ಪರಿಹಾರ ಧನದ ಪ್ರಮಾಣದಲ್ಲಿಯೇ ನಮ್ಮ ತಾಲ್ಲೂಕಿನ ರೈತರಿಗೂ ಪರಿಹಾರವನ್ನು ಸರ್ಕಾರ ನೀಡಬೇಕು ಎಂದರು.
ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎತ್ತಿನ ಹೊಳೆ ಯೋಜನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಭೂಪರಿಹಾರ ದರವನ್ನು ನಿಗಧಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸೂಕ್ತ ಪ್ರಸ್ತಾವನೆ ಪಡೆದು ಕ್ಯಾಬಿನೆಟ್‍ನಲ್ಲಿ ಪ್ರಸ್ತಾಪ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. ಪ್ರತಿ ಎಕರೆಗೆ 32 ಲಕ್ಷ ರೂ. ಭೂ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿಗಳ ಮನವೊಲಿಸಬೇಕೆಂದು ಅವರು ಸಚಿವರಿಗೆ ಮನವಿ ಮಾಡಿದರು.
ಸಂಸದ ಜಿ.ಎಸ್. ಬಸವರಾಜ್ , ಜಲಸಂಪನ್ಮೂಲ ಇಲಾಖೆಯ ಅಪರ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಪೆÇಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೊನ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ನಂದಿನಿ, ಚಂದ್ರಶೇಖರ್ ಮತ್ತಿತರರು ಈ ಸಂದರ್ಭದಲ್ಲಿದ್ದರು.