ನವದೆಹಲಿ: ಲಾಕ್‍ಡೌನ್ ಕುರಿತು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಸಾಮಾಜಿಕ ಜಾಲತಾಣಗಳ ಮೂಲಕ ಆಗಾಗ ಎಚ್ಚರಿಸುತ್ತಿದ್ದು, ಸಾರ್ವಜನಿಕರು ಯಾವ ರೀತಿ ವರ್ತಿಸಬೇಕು ಎಂಬುದನ್ನು ಹೇಳುತ್ತಿದ್ದಾರೆ. ಈ ಕುರಿತು ಅವರದ್ದೇ ಉದಾಹರಣೆಯನ್ನು ನೀಡುತ್ತಿದ್ದು, ತಂದೆಯನ್ನು ನೋಡಲಿಕ್ಕಾಗದೆ ಪರಿತಪಿಸುತ್ತಿರುವ ಪರಿಯನ್ನು ಸಹ ವಿವರಿಸಿದ್ದಾರೆ. ಕೊರೊನಾ ವಾರಿಯರ್ಸ್ ನಮಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಗೌರವ ಕೊಡೋಣ, ಹಿಂದೂಸ್ಥಾನವನ್ನು ಕೊರೊನಾದಿಂದ ರಕ್ಷಿಸೋಣ ಎಂದು ಮನವಿ ಮಾಡಿದ್ದಾರೆ.
ಹೌದು ಲಾಕ್‍ಡೌನ್ ಸಂದರ್ಭದಲ್ಲಿಯೂ ಹಗಲು ರಾತ್ರಿ ಎನ್ನದೆ ನಮಗಾಗಿ ದುಡಿಯುತ್ತಿರುವ ವೈದ್ಯರು, ಪೊಲೀಸರು, ನರ್ಸ್‍ಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ, ಕಲ್ಲು ತೂರುತ್ತಿದ್ದಾರೆ. ಈ ಕುರಿತು ಸಹ ಸಲ್ಮಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಈ ಕುರಿತು ಪೋಸ್ಟ್ ಮಾಡಿ ಕಿಕ್ ಸ್ಟಾರ್ ತರಾಟೆಗೆ ತೆಗೆದುಕೊಂಡಿದ್ದು, ಪರಿಸ್ಥಿತಿಯನ್ನು ಅರಿತು ಸಂಯಮದಿಂದ ವರ್ತಿಸಿ, ಮನೆಯಲ್ಲೇ ಇರಿ ಸುರಕ್ಷಿತವಾಗಿ ಎಂದು ಮನವಿ ಮಾಡಿದ್ದಾರೆ.
ಇನ್‍ಸ್ಟಾಗ್ರಾಮ್‍ನಲ್ಲಿ ಸುದೀರ್ಘ ವಿಡಿಯೋ ಪೋಸ್ಟ್ ಮಾಡಿರುವ ಅವರು, ಕೊರೊನಾ ಸೋಂಕು ತಗುಲಿರಬಹುದು ಎಂದು ಆರೋಗ್ಯ ತಪಾಸಣೆ ಮಾಡಲು ಬಂದಿದ್ದ ವೈದ್ಯಕೀಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದ ಕುರಿತು ಕಿಡಿಕಾರಿದ್ದಾರೆ. ಡಾಕ್ಟರ್ ಮತ್ತು ನರ್ಸ್‍ಗಳು ನಿಮ್ಮ ಪ್ರಾಣ ಉಳಿಸಲು ಬಂದಿದ್ದಾರೆ. ಅಂಥವರ ಮೇಲೆ ನೀವು ಕಲ್ಲು ತೂರುತ್ತೀರಿ, ಸೋಂಕು ತಗುಲಿಸಿಕೊಂಡವರು ಆಸ್ಪತ್ರೆಯಿಂದ ಓಡಿ ಹೋಗುತ್ತಿದ್ದೀರಿ. ಎಲ್ಲಿಗೆ ಓಡುತ್ತೀರಿ? ಜೀವನದ ಕಡೆಗೆ ಓಡುತ್ತೀರಾ ಅಥವಾ ಸಾವಿನ ಕಡೆಗೆ ಓಡುತ್ತೀರಾ? ಎಂದು ಸಲ್ಲು ಖಾರವಾಗಿ ಪ್ರಶ್ನಿಸಿದ್ದಾರೆ.
ಅಲ್ಲದೆ ಪೊಲೀಸರು, ವೈದ್ಯರಿಗೆ, ಬ್ಯಾಂಕ್‍ನಲ್ಲಿ ಕೆಲಸ ಮಾಡುವವರಿಗೆ ಕುಟುಂಬ, ಜೀವನ ಇಲ್ಲವೆಂದುಕೊಂಡಿದ್ದೀರಾ, ಅವರು ನಿಮಗಾಗಿ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಗೌರವದಿಂದ ನಡೆದುಕೊಳ್ಳಿ. ಇಲ್ಲವಾದಲ್ಲಿ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ಹೇಳಿದ್ದಾರೆ.
ನಮಾಜ್, ಪೂಜೆ ಮಾಡುವುದಿದ್ದರೆ ಮನೆಯಲ್ಲೇ ಮಾಡಿ, ದೇವರು ನಮ್ಮೊಳಗೆ ಇದ್ದಾನೆ ಎಂದು ಬಾಲ್ಯದಲ್ಲಿ ನಮಗೆ ಹೇಳಿಕೊಟ್ಟಿದ್ದಾರೆ. ಹೀಗಾಗಿ ಹೊರಗೆ ಹೋಗುವುದೇಕೆ? ನೀವು ಪರಿವಾರ ಸಮೇತರಾಗಿ ದೇವರ ಪಾದ ಸೇರಬೇಕೆಂದರೆ, ಅಲ್ಲಾನಲ್ಲಿಗೆ ತೆರಳಬೇಕೆಂದರೆ ಮನೆಯಿಂದ ಹೊರಗೆ ಬನ್ನಿ. ಎಲ್ಲರೂ ಸಾಯಲೇಬೇಕು, ಆದರೆ ಯಾರಾದರೂ ಈಗಲೇ ಸಾಯಲು ಬಯಸುತ್ತಾರಾ? ನೀವೆಲ್ಲ ಸತ್ತು, ದೇಶದ ಜನಸಂಖ್ಯೆ ಕಡಿಮೆ ಮಾಡಬೇಕು ಎಂದುಕೊಂಡಿದ್ದೀರಾ? ಆ ಕಾರ್ಯವನ್ನು ನಿಮ್ಮಿಂದ, ನಿಮ್ಮ ಕುಟುಂಬದಿಂದಲೇ ಆರಂಭಿಸಬೇಕು ಎಂದುಕೊಂಡಿದ್ದೀರಾ ಯೋಚಿಸಿ ಎಂದು ಕಟುವಾಗಿ ಹೇಳಿದ್ದಾರೆ.
ಅಗತ್ಯ ವಸ್ತುಗಳನ್ನು ಖರೀದಿಸಲು ಯಾರಿಗೂ ನಿರ್ಬಂಧ ಇಲ್ಲ. ಆದರೆ ಮಾಸ್ಕ್ ಧರಿಸಿ ಹೊರಗೆ ಹೋಗಿ, ಗುಂಪು ಸೇರಬೇಡಿ. ನಿಯಮ ಪಾಲಿಸಿದರೆ ಪೊಲೀಸರು ನಿಮ್ಮ ಮೇಲೆ ಲಾಠಿಯನ್ನೇಕೆ ಬೀಸುತ್ತಾರೆ, ಅವರೇನು ಮಜಾ ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸರ್ಕಾರ, ಪೊಲೀಸರು, ವೈದ್ಯರಿಗೆ ನಾವು ಸಹಕಾರ ನೀಡಬೇಕಿದೆ. ನಿಯನಮಗಳನ್ನು ಪಾಲಿಸಬೇಕಿದೆ. ಸರಿಯಾಗಿ ಲಾಕ್‍ಡೌನ್ ನಿಯಮ ಪಾಲಿಸಿದರೆ ಮಾತ್ರ ಇದು ಬೇಗ ಮುಕ್ತಾಯ ಆಗುತ್ತದೆ. ಇಲ್ಲದಿದ್ದರೆ ಹೀಗೆಯೇ ಮುಂದುವರಿಯುತ್ತದೆ. ನಿಮ್ಮಿಂದ ಇತರರಿಗೆ ವೈರಸ್ ಹರಡಿಸಬೇಡಿ ಎಂದಿದ್ದಾರೆ.
ಈ ಹಿಂದೆ ಸಲ್ಲು ಭಾಯ್ ಬಾಲಿವುಡ್ ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದರು. ಸಾವಿರಾರು ಕುಟುಂಬಗಳಿಗೆ ಹಣ ನೀಡುವ ಮೂಲಕ ನೆರವಾಗಿದ್ದರು. ಈ ಮೂಲಕ ಇತರರಿಗೆ ಮಾದರಿಯಾಗಿದ್ದರು. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಎಚ್ಚರಿಸಿದ್ದಾರೆ.
ಎರಡು ದಿನಗಳ ರಜೆ ಕಳೆಯಲು ಸಲ್ಮಾನ್ ಖಾನ್ ಫಾರ್ಮ್‍ಹೌಸ್‍ಗೆ ಬಂದಿದ್ದರು. ಅಷ್ಟರಲ್ಲೇ ಲಾಕ್‍ಡೌನ್ ಘೋಷಣೆ ಆಯಿತು. ಹೀಗಾಗಿ ತಂದೆಯೊಬ್ಬರನ್ನೇ ಮನೆಯಲ್ಲಿ ಬಿಟ್ಟು ಅಲ್ಲಿಯೇ ಉಳಿದುಕೊಂಡರು. ಈ ಮೂಲಕ ಲಾಕ್‍ಡೌನ್ ನಿಯಮಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇತ್ತೀಚೆಗೆ ಅವರ ಸೋದರಳಿಯ ಅಬ್ದುಲ್ಲಾ ಖಾನ್ ನಿಧನರಾದರು. ಈ ವೇಳೆಯೂ ಸಲ್ಲು ಅಂತ್ಯಕ್ರಿಯೆಗೆ ಹೋಗಲಿಲ್ಲ. ಹೀಗಾಗಿ ಲಾಕ್‍ಡೌನ್ ನಿಯಮಗಳನ್ನು ಪಾಲಿಸುವ ಕುರಿತು ಇತರರಿಗೆ ಮಾದರಿಯಾಗಿದ್ದಾರೆ.